ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಸ್ಟಾರ್ ಪ್ರಚಾರ ನಡೆದರೆ ಮೈಸೂರು ಸಂಸದರಿಗೇಕೆ ಹೊಟ್ಟೆಉರಿ..? ಡಾ. ಪುಷ್ಪಾ ಅಮರನಾಥ್ ವಾಗ್ದಾಳಿ.

ಮೈಸೂರು,ಮೇ,5,2023(www.justkannada.in):  ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ಪರ ನಟ ಶಿವರಾಜ್ ಕುಮಾರ್ ಪ್ರಚಾರ ನಡೆಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಮೈಸೂರು-ಕೊಡಗು  ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ಮಹಿಳಾ ಘಟಕದ  ಅಧ್ಯಕ್ಷೆ ಡಾ. ಬಿ ಪುಷ್ಪಾ ಅಮರನಾಥ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಪುಷ್ಪಾ ಅಮರನಾಥ್, ವರುಣಾ ಕ್ಷೇತ್ರದಲ್ಲಿ ಸ್ಟಾರ್ ಪ್ರಚಾರ ನಡೆದರೆ ಮೈಸೂರು ಸಂಸದರಿಗೆ ಏಕೆ ಹೊಟ್ಟೆಉರಿ..? ನಟ ಶಿವರಾಜ್’ ಕುಮಾರ್ ಅವರು ಸ್ವಯಂ ಪ್ರೇರಿತರಾಗಿ ಪ್ರಚಾರಕ್ಕೆ ಬಂದಿದ್ದಾರೆ. ಇದಕ್ಕೂ ಪ್ರತಾಪ್ ಸಿಂಹರಿಗೂ ಏನು ಸಂಬಂಧ..? ಎಂದು ಕಿಡಿಕಾರಿದರು.

ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾರರ ಗಮನ ಸೆಳೆಯಲು ನಾವು ಮುಂದಾಗಿದ್ದೇವೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸರ್ಕಾರ ಹೇಗಿತ್ತು. ಯಾವ ಯಾವ ಉತ್ತಮ ಕಾರ್ಯಕ್ರಮಗಳನ್ನ ಅವರು ನೀಡಿದ್ದರು. ಈ ಬಾರಿ ಪ್ರಣಾಳಿಕೆಯಲ್ಲಿರುವ  ಜನಪರ ಕಾರ್ಯಕ್ರಮ ಕುರಿತು ಪುಷ್ಪಾ ಅಮರನಾಥ್ ಮಾತನಾಡಿದರು.

ಇನ್ನು ಸಿದ್ದರಾಮಯ್ಯರವರನ್ನ ವರುಣದಲ್ಲಿ  ಸೋಲಿಸಲು ಪ್ರತಿಪಕ್ಷಗಳು ದೊಡ್ಡ ಸಂಚನ್ನೇ ಮಾಡಿವೆ. ಅದೆಲ್ಲಾ ನಮ್ಮ ಮತದಾರರಿಗೆ ಗೊತ್ತಿದೆ. ಅವರ ಆಟ ನಡೆಯುವುದಿಲ್ಲ.ಬಿಜೆಪಿಯವರು ಏನೆಲ್ಲಾ  ಪ್ರಯತ್ನ, ಗಿಮಿಕ್ ಮಾಡಿದರೂ ವರುಣಾ ಕ್ಷೇತ್ರದಲ್ಲಿ ಅವರ ಆಟ ನಡೆಯುವುದಿಲ್ಲ. ನಾವು ನೀಡಿರುವ ಮತ್ತು ಈಗ ನೀಡುತ್ತಿರುವ ಜನಪರ  ಕಾರ್ಯಕ್ರಮಗಳನ್ನು ಮನಸ್ಸಲ್ಲಿಟ್ಟುಕೊಂಡು ಮತದಾರರು ಕಾಂಗ್ರೆಸ್ ಗೆ ಮತ ನೀಡುತ್ತಾರೆ. ಈ ಬಾರಿ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದು ಪುಷ್ಪ ಅಮರನಾಥ್ ಹೇಳಿದರು.

Key words: Mysore- MP-star campaign -Varuna constituency..?- Dr. Pushpa Amarnath