ಮೈಸೂರು,ಸೆಪ್ಟಂಬರ್,1,2026 (www.justkannada.in): ಜನಸಂಖ್ಯೆಯಲ್ಲಿ ಅಂದಾಜು ಶೇ 40 ರಷ್ಟು ಜನ ನಗರ ಪ್ರದೇಶದಲ್ಲಿ ವಾಸವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಶೇ 30 ರಷ್ಟು ಅನುದಾನ ದೊರಕುತ್ತದೆ ಉಳಿದ ಹಣವನ್ನು ಕ್ರೋಢೀಕರಿಸಬೇಕಿರುತ್ತದೆ. ಈ ಹಿನ್ನಲೆಯಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕು ಎಂದು ಪೌರಾಡಳಿತ ಸಚಿವ ಹೆಚ್.ಸಿ ಬಾಲಕೃಷ್ಣ ಅವರು ತಿಳಿಸಿದರು.
ಇಂದು ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಹಾಸನ ಹಾಗೂ ಮಂಡ್ಯ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಖಾಸಗಿ ರಸ್ತೆಗಳನ್ನು ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ ತೆಗೆದುಕೊಂಡು ನಿರ್ವಹಿಸಲು ಸಿದ್ಧತೆ ನಡೆಯುತ್ತಿದೆ. ಈ ಕುರಿತಂತೆ ಇಲಾಖೆಯಿಂದ ಆದೇಶ ಹೊರಡಿಸಲಾಗುವುದು. ಆಸ್ತಿಗಳನ್ನು ಎ ಖಾತಾ ಮತ್ತು ಬಿ.ಖಾತಾ ಕುರಿತು ನಿರ್ಧರಿಸಿ ಖಾತೆ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದರು.
ಬಾಡಿಗೆಗೆ ನೀಡಲಾಗಿರುವ ವಾಣಿಜ್ಯ ಮಳಿಗೆ ಮಾಲೀಕರು ನಿಗದಿಪಡಿಸಿದ ದಿನಾಂಕದೊಳಗೆ ಬಾಡಿಗೆ ಪಾವತಿಸಬೇಕು, ಇಲ್ಲವಾದಲ್ಲಿ ನೋಟೀಸ್ ಜಾರಿ ಮಾಡಿ ಅಂಗಡಿಯನ್ನು ಮುಚ್ಚುವ ಕೆಲಸವಾಗಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿಯಾಗದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮವಹಿಸುವುದಾಗಿ ಎಚ್ಚರಿಕೆ ನೀಡಿದರು.
ವಿಳಂಬವಾಗುತ್ತಿರುವ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗಳನ್ನು ಜಿಲ್ಲಾವಾರು ಪಟ್ಟಿಮಾಡಿಕೊಂಡು ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಸಂಬಂಧಿಸಿದ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಚ್ಛತೆ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಇನ್ನಿತರೆ ಮೂಲಭೂತ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಇದರಿಂದ ಬಹಳಷ್ಟು ಸಮಸ್ಯೆಗಳು ಪರಿಹಾರವಾಗುತ್ತದೆ ಎಂದರು.
ನಗರ ಸ್ಥಳೀಯ ಸಂಸ್ಥೆಗಳು ಪೌರಕಾರ್ಮಿಕರಿಗೆ ವಸತಿ ಬಡಾವಣೆ ನಿರ್ಮಿಸಲು ಎರಡು ಎಕರೆ ಭೂಮಿ ಕಾಯ್ದರಿಸುವಂತೆ ಈಗಗಲೇ ತಿಳಿಸಲಾಗಿದೆ. ಕೆಲಸ ಪ್ರಗತಿಯಲ್ಲಿದೆ ಇದರೊಂದಿಗೆ ಪೌರಕಾರ್ಮಿಕರು ನಿವೃತ್ತಿ ಆದ ನಂತರ ಅವರಿಗೆ ನಿವೇಶನ ಒದಗಿಸಲು ನಗರ ಸ್ಥಳೀಯ ಸಂಸ್ಥೆಯ ಹೊರಭಾಗ ಅಥವಾ ಗ್ರಾಮೀಣ ಭಾಗದಲ್ಲಿ 5 ಎಕರೆ ಭೂಮಿ ಕಾಯ್ದರಿಸಲು ಪೌರಾಡಳಿತ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗುವುದು ಎಂದರು.
ಅಬಕಾರಿ ಸಚಿವ ಶಿವಲಿಂಗೇಗೌಡ ಅವರು ಹಾಸನ ಜಿಲ್ಲೆಯ ಬಹಳಷ್ಟು ಪಟ್ಟಣ ಪಂಚಾಯಿತಿಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಕನಿಷ್ಠ ಸಿಬ್ಬಂದಿಗಳನ್ನಾದರೂ ನಿಯೋಜಿಸಿಕೊಡಬೇಕು. ಪೌರಾಡಳಿತ ಸಚಿವರು ವಿಭಾಗಮಟ್ಟದಲ್ಲಿ ಅಧಿಕಾರಿಗಳಿಗೆ ನೀಡಲಾಗಿರುವ ಸೂಚನೆಗಳನ್ನು ಅನುಷ್ಠಾನ ಮಾಡಿರುವ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ಪರಿಶೀಲಿಸಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಡಳಿತ ಸಚಿವರು ಬೇರೆ ಇಲಾಖೆಗೆ ನಿಯೋಜನೆಯ ಮೇಲೆ ತೆರಳಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಹಿಂಪಡೆದು ಪೌರಾಡಳಿತ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವ ಭಾಗಕ್ಕೆ ನಿಯೋಜಿಸಲಾಗುವುದು. ಹೆಚ್ಚಿನ ಅನುದಾನ ಕ್ರೋಢೀಕರಣವಾಗುವ ನಗರಸ್ಥಳೀಯ ಸಂಸ್ಥೆಗಳಲ್ಲಿ ನಿಯಮಾನುಸಾರ ಹೊರಗುತ್ತಿಗೆ ಮೇಲೆ ಪಡೆದುಕೊಳ್ಳಲು ಸಾಧ್ಯವಾಗುವ ಸಿಬ್ಬಂದಿಗಳನ್ನು ಹೊರಗುತ್ತಿಗೆಯ ಮೇಲೆ ಪಡೆದುಕೊಳ್ಳಿ ಎಂದರು.
ಅರಸೀಕೆರೆ ನಗರಸಭೆ ವ್ಯಾಪ್ತಿಯಲ್ಲಿರುವ ಕೆಲವು ಕಟ್ಟಡಗಳಿಗೆ ಬಾಡಿಗೆಗೆ ಜನರು ಬರುತ್ತಿಲ್ಲ ಇದರಲ್ಲಿ ಕೆಲವು ಮಾರ್ಪಟು ಮಾಡಿ ಹಾಸ್ಟಲ್ ಗಳಿಗೆ ಬಾಡಿಗೆ ನೀಡಬಹುದು ಇದಕ್ಕೆ ಪೌರಾಡಳಿತ ಇಲಾಖೆ ಅನುಮತಿ ನೀಡಬೇಕಿದೆ ಎಂದು ಅಬಕಾರಿ ಸಚಿವ ಶಿವಲಿಂಗೇಗೌಡ ಅವರು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಎ.ಮಂಜು, ಎ.ಬಿ.ರಮೇಶ ಬಾಬು ಬಂಡಿಸಿದ್ದೇಗೌಡ, ಪೌರಾಡಳಿತ ಇಲಾಖೆ ನಿರ್ದೇಶಕ ಪಿ.ರವೀಂದ್ರ, ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Urban local bodies,resource, mobilization, Minister H.C. Balakrishna






