ಮೈಸೂರು ಮಹಾರಾಣಿ ಮಹಿಳಾ ಕಾಲೇಜು ವಿದ್ಯಾರ್ಥಿಗಳ ವಿಭಿನ್ನ ಎನ್’ಎಸ್’ಎಸ್ ಪ್ರಯೋಗ !

ಮೈಸೂರು, ಮಾರ್ಚ್ 19, 2022 (www.justkannada.in): ʼಎನ್‌ಎಸ್‌ಎಸ್‌ ಎಂದರೆ ಸಾಕು ಗ್ರಾಮಗಳಿಗೆ ಹೋಗಿ ಅಲ್ಲಿ ಕಸ ಗುಡಿಸುವುದೇ ಕೆಲಸʼ ಎಂದು ಕೊಂಡಿದ್ದ ಗ್ರಾಮೀಣ ಜನರಿಗೆ ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿನಿಯರು ವಿಭಿನ್ನ ಯೋಜನೆ ಮೂಲಕ ಗಮನ ಸೆಳೆದರು.

ಕಾಲೇಜಿನ ವತಿಯಿಂದ ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಆಯೋಜಿಸಿದ್ದ ಒಂದು ವಾರದ ವಿಶೇಷ ವಾರ್ಷಿಕ ಶಿಬಿರ ಇದಕ್ಕೆ ಸಾಕ್ಷಿಯಾಗಿದೆ. ಈಗ ದೇವರಸನಹಳ್ಳಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಂಪೂರ್ಣ ಜಾಬ್‌ಕಾರ್ಡ್‌ ಹೊಂದಿದ ಗ್ರಾಮವಾಗಿದೆ. ಇದು ದೇವರಸನಹಳ್ಳಿ ಗ್ರಾಮ ಪಂಚಾಯ್ತಿ ಎರಡನೇ ಗ್ರಾಮ ಜಾಬ್‌ಕಾರ್ಡ್‌ ಯುಕ್ತವಾಗಿದೆ. ಇದಕ್ಕೂ ಮೊದಲು ಉಪ್ಪಿನಹಳ್ಳಿ ಗ್ರಾಮ ಈ ಸಾಧನೆ ಮಾಡಿತ್ತು.

ಶಿಬಿರದ ಏಳು ದಿನಗಳಲ್ಲಿ ಶಿಬಿರಾರ್ಥಿಗಳು, ಪ್ರಾಧ್ಯಾಪಕರು ಮತ್ತು ಪಂಚಾಯ್ತಿ ಅಧಿಕಾರಿಗಳು ಮತ್ತು ಸದಸ್ಯರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತ ಗ್ರಾಮದ ಬೀದಿಗಳಲ್ಲಿ ಜಾಥಾ ನಡೆಸುವ ಮೂಲಕ ಹಾಗೂ ಬೀದಿ ನಾಟಕಗಳ ಮೂಲಕ ಅರಿವನ್ನು ಮೂಡಿಸಲಾಯಿತು.

ಗ್ರಾಮದ ಪ್ರತಿ ಮನೆಗಳಿಗೆ ವಿದ್ಯಾರ್ಥಿನಿಯರು ತೆರಳಿ ಉದ್ಯೋಗ ಖಾತರಿ ಯೋಜನೆಯಿಂದ ರೈತರಿಗೆ ಹಾಗೂ ಗ್ರಾಮೀಣ ಜನರಿಗೆ ದೊರೆಯುವ ಸೌಲಭ್ಯಗಳಾದ ಶೌಚಾಲಯ ನಿರ್ಮಾಣ,  ದನ-ಕರು, ಕುರಿ ಸಾಗಣೆಗಾಗಿ ಕೊಟ್ಟಿಗೆ ನಿರ್ಮಾಣಕ್ಕೆ ದೊರೆಯುವ ಅನುದಾನ, ತಮ್ಮ ತಮ್ಮ ಗದ್ದೆಗಳಲ್ಲಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಸರ್ಕಾರದಿಂದ ದೊರೆಯುವ ಅನುದಾನ ಹಾಗೂ ತೋಟಗಾರಿಕೆ ಬೆಳೆಗಳಾದ ಬಾಳೆ, ತೆಂಗು, ಅಡಿಕೆ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲು ದೊರೆಯುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ಈ ಯೋಜನೆ ಮೂಲಕ ಪ್ರತಿ ಜಾಬ್‌ ಕಾರ್ಡ್‌ ಹೊಂದಿರುವರು ಒಂದು ವರ್ಷದಲ್ಲಿ ಕನಿಷ್ಟ ರೂ. 1.8 ಲಕ್ಷದಷ್ಟು ವೇತನದ ಅನುದಾನವನ್ನು ಪಡೆಯಬಹುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾದೇವಸ್ವಾಮಿ ಮಾಹಿತಿ ನೀಡಿದರು.

ದೇವರಸನಹಳ್ಳಿ ಗ್ರಾಮದಲ್ಲಿ ಈಗ ಸುಮಾರು 600 ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಶಿಬಿರಾರ್ಥಿಗಳು ಜಾಬ್‌ಕಾರ್ಡ್‌ ಪಡೆಯಲು ಅವಶ್ಯಕವಾಗಿ ಬೇಕಾದ ಪಡಿತರ ಚೀಟಿ, ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆಯ ಮಾಹಿತಿಗಳನ್ನು ಅಂತರ್ಜಾಲದಲ್ಲಿ ದಾಖಲೆಗಳನ್ನು ದಾಖಲಿಸಿದರು. 550 ಕುಟುಂಬಗಳಿಗೆ ಶಿಬಿರಾರ್ಥಿಗಳು, ಅಧ್ಯಾಪಕರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಜಾಬ್‌ಕಾರ್ಡ್‌ಗಳನ್ನು ವಿತರಿಸಿದರು.

ಜಾಥಾ: ಬಡತನ, ನಿರುದ್ಯೋಗ ಹಾಗೂ ಅನಕ್ಷರತೆ, ಮೌಡ್ಯ-ಕಂದಚಾರ ಕುರಿತು ಪ್ರತಿದಿನ ಗ್ರಾಮದ ಬೀದಿಗಳಲ್ಲಿ ಜಾಗೃತಿ ಮೂಡಿಸಿದರು. ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಲಾಗಿತ್ತು.

ಮಹಾರಾಣಿ ಮಹಿಳಾ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಡಾ. ರಾಘವೇಂದ್ರ ಎಸ್.ಜಿ., ಪ್ರೊ. ಮನೋಮ್ಮಣಿ, ಡಾ. ಚಂದ್ರಕುಮಾರ, ಡಾ. ಲೋಕೇಶ್‌ ಕೆ.ಎನ್., ಸರಿತಾ ಕೆ. ಹಾಗೂ ದೇವರಸನಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಹಾದೇವಸ್ವಾಮಿ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮದ ಮುಖಂಡರು ಶಿಬಿರದಲ್ಲಿ ಪಾಲ್ಗೊಂಡಿದ್ದರು.