ಮೈಸೂರು-ಕುಶಾಲನಗರ ಹೆದ್ದಾರಿ: ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಸೂಚನೆ

ಮೈಸೂರು.ಫೆ. 13,2023(www.justkannada.in) :   ಮೈಸೂರು- ಕುಶಾಲನಗರ ಚತುಷ್ಪಥ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಂಸದ ಪ್ರತಾಪ ಸಿಂಹ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಹೆದ್ದಾರಿ ಯೋಜನೆ ಸಂಬಂಧ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು- ಬೆಂಗಳೂರು ದಶಪಥ ಕಾಮಗಾರಿ ಪೂರ್ಣಗೊಂಡಿದ್ದು, ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಉದ್ಘಾಟಿಸುವರು. ಇದೇ ವೇಳೆ ಮೈಸೂರು- ಕುಶಾಲ ನಗರ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಅವರು ತಿಳಿಸಿದರು.

ಈ ಸಂಬಂಧ  ನಿರಂತರವಾಗಿ ಸಭೆ ನಡೆಸಲಾಗಿದೆ. ಮಾ. 5 ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸುವಂತೆ ಕೋರುವ ಜೊತೆಗೆ ಸೂಚನೆಯನ್ನೂ ನೀಡುತ್ತಿದ್ದೆನೆ ಎಂದು ಸಂಸದರು ತಿಳಿಸಿದರು.

ಮೈಸೂರು, ಹುಣಸೂರು, ಪಿರಿಯಾಪಟ್ಟಣ ತಹಶೀಲ್ದಾರ್ ಗಳು  ಹಾಗೂ ಭೂ ದಾಖಲೆಗಳ ಉಪ ನಿರ್ದೆಶಕರು ಹೆದ್ದಾರಿ ಮಾರ್ಗವಾಗಿ ಭೂಮಿಯನ್ನು ಸರ್ವೆ ಮಾಡಿ ಪೋಡಿ ಹಾಗೂ ದುರಸ್ತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ತಿಳಿಸಿದರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ರಾಷ್ಟೀಯ ಹೆದ್ದಾರಿ ಉದ್ದಕ್ಕೂ ಇರುವ ಸಬ್ ಸ್ಟೇಷನ್ ಗಳು ಹಾಗೂ ವಿದ್ಯುತ್ ಗ್ರಿಡ್ ಗಳನ್ನು ಸ್ಧಳಾಂತರಿಸಲು ಅಗತ್ಯ ಕ್ರಮವಹಿಸುವಂತೆ ಸಂಸದರು ತಿಳಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಅಧಿಕಾರಿಗಳು ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ ಯಾವುದಾದರೂ ಸಮಸ್ಯೆಗಳಿದ್ದರೆ ಅದನ್ನು ಮುಕ್ತವಾಗಿ ಹೇಳಿಕೊಳ್ಳಬೇಕು. ಅದನ್ನು ನಾವು ಪರಿಹರಿಸುತ್ತೇವೆ. ಕಾಲಮಿತಿಯಲ್ಲಿ ಯೋಜನೆಗೆ ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸಭೆಯಲ್ಲಿ ತಿಳಿಸಿದರು.

ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜಾರಾಂ, ಮೈಸೂರು-ಬೆಂಗಳೂರು ಹೆದ್ದಾರಿಯ ಯೋಜನಾ ನಿರ್ದೇಶಕ ಬಿ.ಟಿ.ಶ್ರೀಧರ್, ಡಿಸಿಎಫ್ ಬಸವರಾಜ್ ,ಭೂಸ್ವಾಧೀನಾಧಿಕಾರಿ  ಹರ್ಷವರ್ಧನ್, ಹುಣಸೂರು ತಹಶೀಲ್ದಾರರು ಹಾಗೂ ಭೂ ದಾಖಲೆ ಅಧಿಕಾರಿಗಳು ಪಿರಿಯಾಪಟ್ಟಣ, ಅರಣ್ಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Mysore-Kushalanagar-Highway- complete -land a-cquisition- process-prathap simha