KSOU ತುರ್ತಾಗಿ NAAC ಮಾನ್ಯತೆಗೆ ಮುಂದಾಗಲಿ : ಪ್ರೊ.ಡಿ.ಶಿವಲಿಂಗಯ್ಯ.

 

ಮೈಸೂರು, ಜ.31, 2022 : (www.justkannada.in news) : ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ತುರ್ತಾಗಿ ನ್ಯಾಕ್ ( NAAC ) ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಕೆಎಸ್ಒಯು (KSOU) ಮುಂದಾಗಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಕಿವಿಮಾತು ಹೇಳಿದರು.

ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಪ್ರೊ.ಶಿವಲಿಂಗಯ್ಯ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ..

2018 ರಲ್ಲಿ ಕೆಎಸ್ಒಯು ಗೆ ಕೇಂದ್ರ ಧನಸಹಾಯ ಅಯೋಗದ ಮಾನ್ಯತೆ 5 ವರ್ಷಗಳ ಅವಧಿಗೆ ನೀಡಲಾಗಿದೆ. ಯುಜಿಸಿಎ ಎಲ್ಲಾ ನಿಯಮ, ಅಗತ್ಯತೆಗಳನ್ನು ಪೂರೈಸಿದ ಕಾರಣಕ್ಕೆ ಈ ಮಾನ್ಯತೆ ಲಭಿಸಿತು. ಅದರಂತೆ ಈಗ ಯುಜಿಸಿ ಮಾನ್ಯತೆ 2023-24 ಕ್ಕೆ ಅಂತ್ಯವಾಗುತ್ತದೆ. ಆದ್ದರಿಂದ ಮಾನ್ಯತೆ ನವೀಕರಣಕ್ಕೆ ಒಂದು ವರ್ಷ ಮೊದಲೇ ಅರ್ಜಿ ಸಲ್ಲಿಸಬೇಕಾಗಿದೆ. ಈ ವೇಳೆ ಯುಜಿಸಿಯ ಷರತ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಸಮಗ್ರ ಪರಿಶೀಲನೆ ಹಾಗೂ ದಾಖಲೆಗಳ ಸಲ್ಲಿಕೆ ಅತ್ಯಾವಶ್ಯಕ. ಇದಕ್ಕಾಗಿ ಅಗತ್ಯ ಸಿದ್ಧತೆ ನಡೆಸುವ ಅವಶ್ಯಕತೆ ಇದೆ. ಯುಜಿಸಿ ಮಾನ್ಯತೆ ನವೀಕರಣಕ್ಕೆ ನ್ಯಾಕ್ ಮಾನ್ಯತೆ ಹೊಂದುವುದು ಅತೀ ಪ್ರಮುಖವಾದದ್ದು.

ಮಾನ್ಯತೆಗಾಗಿ ನ್ಯಾಕ್ ಹಲವಾರು ಮಾನದಂಡಗಳನ್ನು ನಿಗಧಿಪಡಿಸಿದೆ. ಇದರ ಪ್ರಕಾರ 3.01 ಗ್ರೇಡ್ ಪಡೆದರೆ ಮುಕ್ತ ಶಿಕ್ಷಣ ನಡೆಸಲು ಹಾಗೂ 3.26 ಪಡೆದರೆ ಆನ್ ಲೈನ್ ಮೂಲಕ ಶಿಕ್ಷಣ ನಡೆಸಲು ಅನುಮತಿ ದೊರಕುತ್ತದೆ. ಈ ಗ್ರೇಡ್ ಪಡೆಯಲು ವಿಫಲವಾದರೆ ಮಾನ್ಯತೆ ರದ್ದಾಗುವ ಅಪಾಯವಿದೆ.

ಈ ಹಿಂದೆಯೇ ಆನ್ ಲೈನ್ ಅರ್ಜಿ :

ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಮಾನ್ಯತೆ ಕಳೆದು ಕೊಂಡ ನಂತರ ಪ್ರವೇಶಾತಿ ಪ್ರಕ್ರಿಯೆಯೇ ನಿಂತು ಹೋಗಿತ್ತು. ಇಂತಹ ಸಂದರ್ಭದಲ್ಲಿ ಪ್ರವೇಶಾತಿ ವಿಭಾಗದ ಮರುಚಾಲನೆ ಕ್ರಮಬದ್ಧವಾಗಿ ಮತ್ತು ಯುಜಿಸಿ ನಿಯಮಗಳಿಗೆ ಅನುಸಾರವಾಗಿ ನಡೆಯಬೇಕಿತ್ತು. ಹೀಗಾಗಿ ಪ್ರವೇಶಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ, ವಿದ್ಯಾರ್ಥಿಗಳು ಇರುವೆಡೆಯಲ್ಲಿಯೇ ಪ್ರಮೇಶಾತಿ ಪಡೆಯುವುದಕ್ಕಾಗಿ, ಎಸ್.ಬಿ.ಐ. ಜೊತೆ ಒಡಂಬಡಿಕೆ ಮಾಡಿಕೊಂಡು ಶುಲ್ಕವನ್ನು ಆನ್ ಲೈನ್ ಮುಖಾಂತರ ಪಾವತಿಸುವಂತೆ 2018 ರಲ್ಲಿ ಅವಕಾಶ ಕಲ್ಪಿಸಲಾಯಿತು.
ಕರಾಮುವಿ ಇತಿಹಾಸದಲ್ಲಿ ಮೊದಲ ಬಾರಿಗೆ ಆನ್ಲೈನ್ ಪ್ರವೇಶಾತಿಯನ್ನು 28-08-2018 ರಿಂದ ಆರಂಭಿಸಲಾಯಿತು. ಆಗ ಅತ್ಯಲ್ಪ ಸಮಯದಲ್ಲೇ 12 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡರು ಎಂಬುದನ್ನು ವಿಶ್ರಾಂತ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಸ್ಮರಿಸಿಕೊಂಡರು.

ಜಿ.ಇ.ಆರ್ ಬಗೆಗೂ ಆಧ್ಯತೆ ನೀಡಲಿ :

ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಳ ಸಂಬಂಧ ಕೆಎಸ್ಒಯು, ಗ್ರಾಸ್ ಎಲ್ರೋಲ್ಮೆಂಟ್ ರೇಷಿಯೋ ಬಗೆಗೂ ಹೆಚ್ಚಿನ ಒತ್ತು ನೀಡಬೇಕಾದ ಅವಶ್ಯಕತೆ ಇದೆ. ಈ ಹಿಂದೆ ವಿವಿ ಕುಲಪತಿಯಾಗಿದ್ದ ವೇಳೆ ಈ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದ ಕಾರಣ ವಿದ್ಯಾರ್ಥಿಗಳ ಪ್ರವೇಶಾತಿ ಉತ್ತಮವಾಗಿತ್ತು. ಹಾಗಾಗಿ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಪ್ರೊ.ಡಿ.ಶಿವಲಿಂಗಯ್ಯ ಹೇಳಿದರು.

ಸ್ಪರ್ದಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಮರುಚಾಲನೆ :

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ 2011ರಲ್ಲೇ ಕೆಎಸ್ಒಯು ವಿನಲ್ಲಿ ಈ ತರಬೇತಿ ಕೇಂದ್ರ ಪ್ರಾರಂಭಿಸಲಾಗಿತ್ತು. ಹಲವಾರು ಕಾರ್ಯಕ್ರಮಗಳನ್ನುಹಮ್ಮಿಕೊಂಡಿದ್ದು, ವಿವಿಗೆ ಮಾನ್ಯತೆ ಇಲ್ಲದ ಸಮಯದಲ್ಲಿ ಕಾರ್ಯಕ್ರಮಗಳು ಕುಂಟಿತಗೊಂಡಿದ್ದವು.
ಕರಾಮುವಿಗೆ ಮಾನ್ಯತೆ ಮರಳಿ ಪಡೆದ ನಂತರ ನವೆಂಬರ್ 2018ರಂದು ತರಬೇತಿ ಕೇಂದ್ರಕ್ಕೆ ನೂತನ ಸಂಯೋಜಕರನ್ನು ನೇಮಿಸಿ ಹಲವಾರು ಕಾರ್ಯಕ್ರಮಗಳನ್ನು ಮಾಡಿ ತರಬೇತಿ ಕೇಂದ್ರವನ್ನು ಮರುಚಾಲನೆ ಗೊಳಿಸಲಾಯಿತು ಎಂಬುದನ್ನು ವಿಶ್ರಾಂತ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಸ್ಮರಿಸಿಕೊಂಡರು.

key words : mysore-KSOU-NAAC-recognition