ಪರೀಕ್ಷೆ ತಯಾರಿ ಜೊತೆಗೆ ಆಧುನಿಕ ತಂತ್ರಜ್ಞಾನ ಮತ್ತು ಎನ್ ಇಪಿ ಬೋಧಿಸುವ ದೆಸೆಯಿಂದಲೂ ಸಿದ್ದತೆ ನಡೆಸಿ- ಪ್ರೊ.ವೈ.ಎಸ್.ಸಿದ್ದೇಗೌಡ ಸಲಹೆ…

ಮೈಸೂರು,ಫೆಬ್ರವರಿ,25,2021(www.justkannada.in): ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಾಗಲಿದೆ. ಭಾವಿ ಅಧ್ಯಾಪಕರು, ಕೆ-ಸೆಟ್,  ಯುಜಿಸಿ- ನೆಟ್  ಪರೀಕ್ಷೆ ತಯಾರಿ ಜೊತೆಗೆ ಆಧುನಿಕ ತಂತ್ರಜ್ಞಾನ ಮತ್ತು ಎನ್ ಇಪಿ ಬೋಧಿಸುವ ದೆಸೆಯಿಂದಲೂ ಸಿದ್ದತೆ ನಡೆಸಬೇಕು ಎಂದು ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಹೇಳಿದರು.mysore-ksou-k-set-ugc-net-exam-training-camp

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಆಯೋಜಿಸಿರುವ ಕೆ-ಸೆಟ್, ಯುಜಿಸಿ-ನೆಟ್ ಪರೀಕ್ಷಾ ತರಬೇತಿ ಶಿಬಿರವನ್ನು ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಬೋಧನ ಪದ್ಧತಿ ಹಾಗೂ ಈಗಿನ ಆಧುನಿಕ ತಂತ್ರಜ್ಞಾನ ಯುಗದ ಬೋಧನೆ ಪದ್ಧತಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಮುಂದೆ ಜಾರಿಯಾಗಲಿರುವ ಎನ್‌ಇಪಿ ಸಹ ಭಿನ್ನವಾಗಿರಲಿದೆ. ಈಗ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಸಿದ್ದರಾಗುತ್ತಿರುವವರು ಇವುಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧತೆ ನಡೆಸಬೇಕು. ಎನ್‌ಇಪಿ ಹೊಸ ಸಾಧ್ಯತೆಗಳನ್ನು ತರಲಿದೆ. ಸವಾಲುಗಳು ಎದುರಾಗಲಿದೆ. ಇದಕ್ಕೆ ಅನುಗುಣವಾಗಿ ತಯಾರಾಗಬೇಕು ಎಂದು ಸಲಹೆ ನೀಡಿದರು.mysore-ksou-k-set-ugc-net-exam-training-camp

ನಮ್ಮ ಕಾಲದಲ್ಲಿ ಪರೀಕ್ಷಾ ಸಿದ್ಧತೆ ಮತ್ತು ಸಂಶೋಧನೆ ಬಹಳ ಕಷ್ಟವಾಗಿತ್ತು. ಸಂಶೋಧನೆಯ ಸಾಹಿತ್ಯ ವಿಮರ್ಶೆಗಾಗಿ ಬಾಂಬೆ, ಬೆಂಗಳೂರು ನಂತಹ ಸ್ಥಳಗಳಿಗೆ ತೆರಳಬೇಕಿತ್ತು. ಈಗಿನ ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ)ಯಿಂದ ಅಧ್ಯಯನ ಸುಲಭವಾಗಿದೆ. ಬೆರಳ ತುದಿಯಲ್ಲೇ ಇಡೀ ಜಗತ್ತೇ ಇದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಪರೀಕ್ಷೆಯ ಸಿದ್ಧತೆ ತಪ್ಪಸ್ಸಿನಂತೆ. ಜ್ಞಾನವೇ ಜೀವನ ಎನ್ನುವುದಕ್ಕೆ ಕಾಯಕಲ್ಪ ನೀಡಬೇಕು, ಜೀವನಕೌಶಲ್ಯ, ಅಧ್ಯಯನ ಕೌಶಲ್ಯ ಮತ್ತು ವೃತ್ತಿಪರ ಕೌಶಲ್ಯಗಳನ್ನು ಅಳವಡಿಸಿಕೊಂಡು ವ್ಯಕ್ತಿಯು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ಮೌಲ್ಯ ಕುಸಿಯುತ್ತಿರುವ ಕಾಲಗಟ್ಟದಲ್ಲಿ ಭಾವನಾತ್ಮಕ ಸಮತೋಲನ ಮಾಡುವುದನ್ನ ಕಲಿಯಿರಿ ಎಂದರು.

ಹಿಂದೆಲ್ಲಾ ರಾಂಕ್ ಪಡೆಯಲು ಪೋಷಕರು ಮಕ್ಕಳನ್ನು ಒತ್ತಾಯಿಸುತ್ತಿದ್ದರು. ಈಗ ಬುದ್ದಿಮತ್ತೆಯ ಪ್ರಮಾಣ (ಐಕ್ಯೂ) ಕಡೆ ಗಮನ ಹರಿಸುತ್ತಿದ್ದು ಆಧ್ಯಾತ್ಮ ಪ್ರಮಾಣ(ಎಸ್‌ಕ್ಯೂ) ಸಕರಾತ್ಮಕ ಪ್ರಮಾಣ (ಪಿಕ್ಯೂ) ಕಡೆಗೂ ಗಮನ ಹರಿಸಬೇಕಿದೆ ಎಂದರು.

2024ರ ವೇಳೆಗೆ ಜಗತ್ತಿನ ಯುವ ಸಮುದಾಯದಲ್ಲಿ ಶೇ.60 ರಷ್ಟು ಭಾರತೀಯರು ಇರಲಿದ್ದಾರೆ. ವಿಶ್ವಸಂಸ್ಥೆಯ 2012ರ ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆಯನ್ನು ಭಾರತೀಯ ಯುವ ಜನಾಂಗ ಮುನ್ನಡೆಸಲಿದೆ ಎಂದರು.

ಈ ಹಿಂದೆ ಮುಕ್ತ ವಿವಿಯಲ್ಲಿ ಸೌಲಭ್ಯಗಳ ಕೊರತೆ ಇತ್ತು. ಈಗ ಸಾಕಷ್ಟು ಅಭಿವೃದ್ಧಿಯಾಗಿದ್ದು, ಅಧ್ಯಯನ ಮತ್ತು ತರಬೇತಿಗೆ ಬೇಕಾದ ಸೌಕರ್ಯವಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಮುಕ್ತ ವಿವಿ ಕುಲಪತಿ ಪ್ರೊ. ಎಸ್, ವಿದ್ಯಾಶಂಕರ್ ಮಾತನಾಡಿ,  45 ದಿನಗಳ ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆ ಎದುರಿಸಲು ತರಬೇತುಗೊಳಿಸಲಿದೆ. ಇದಕ್ಕೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಸಿದ್ಧವಿದ್ದೇವೆ. ಅಲ್ಲದೆ ಗ್ರಂಥಾಲಯ ಸೌಲಭ್ಯ ಹಾಗೂ ಅನ್‌ಲೈನ್ ಮೂಲಕ ಸಂಪನ್ಮೂಲಗಳನ್ನು ಒದಗಿಸಲಾಗುವುದು. ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕ ಮತ್ತು ಆನ್‌ಲೈನ್ ಸಂಪನ್ಮೂಲಕ್ಕೆ ಮನವಿ ಸಲ್ಲಿಸಿದರೆ, ಅದನ್ನು ಈಡೇರಿಸುತ್ತೇವೆ ಎಂದರು.

ಮುಕ್ತ ವಿವಿಯಲ್ಲಿ ಮಾದರಿ ಐಎಎಸ್-ಕೆಎಎಸ್ ಪರೀಕ್ಷಾ ಕೇಂದ್ರವನ್ನು ಆರಂಭಿಸಬೇಕೆಂದು ಯೋಜನೆ ರೂಪಿಸಿದ್ದೇವೆ. ಇದಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಿವೆ. ಇದಕ್ಕಾಗಿ ಸ್ಟುಡಿಯೋ ನಿರ್ಮಿಸಲಾಗುತ್ತಿದ್ದು, ವಿಡಿಯೋ ಸೇರಿದಂತೆ ಡಿಜಿಟಲ್ ಸಂಪನ್ಮೂಲಗಳನ್ನು ಆಕಾಂಕ್ಷಿಗಳಿಗೆ ಒದಗಿಸಲಾಗುವುದು ಎಂದರು.

ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ ಮಾತನಾಡಿ, ಇತ್ತಿಚೆಗೆ ಐಎಎಸ್ ಮತ್ತು ಕೆಎಎಸ್ ತರಬೇತಿಯನ್ನು 1900 ಮಂದಿಗೆ ಆನ್‌ ಲೈನ್ ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಕಳೆದ ಮಾರ್ಚ್ 2020 ಬಳಿಕ ಕೆ-ಸೆಟ್, ಯುಜಿಸಿ-ನೆಟ್ ಪರೀಕ್ಷೆಗಳಿಗೆ ಆಫ್ ಲೈನ್ ತರಬೇತಿ ಆಯೋಜಿಸಿದ್ದೇವೆ.  ರಾಜ್ಯದ ವಿವಿಧ ಜಿಲ್ಲೆಗಳಿಂದ 250ಕ್ಕೂ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಸೋಮಾನಿ ಬಿ.ಇಡಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಹೆಚ್. ಎಸ್. ಮಲ್ಲಿಕಾರ್ಜುನ ಶಾಸ್ತ್ರಿ, ಕರಾಮುವಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಆರ್. ಸಂತೋಷ್ ನಾಯಕ್ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.

Key words: mysore- KSOU- K-Set -UGC-Net- Exam- Training Camp