ಮೈಸೂರು,ಜುಲೈ, 11, 2025 (www.justkannada.in): ಮೈಸೂರು ವ್ಯಾಪ್ತಿಯಲ್ಲಿ 220/66 ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಭೂಮಿ ಖರೀದಿಸಲು ಮುಂದಾಗಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ಸೂಚಿತ ಪ್ರದೇಶದಲ್ಲಿ ಸೂಕ್ತ ಜಮೀನು ಇದ್ದಲ್ಲಿ ಮಾರಾಟ ಮಾಡುವಂತೆ ಸ್ಥಳೀಯ ಭೂ ಮಾಲೀಕರಿಗೆ ನಿಗಮವು ಮನವಿ ಮಾಡಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೆಪಿಟಿಸಿಎಲ್, ಮೈಸೂರಿನ ವ್ಯಾಪ್ತಿಯಲ್ಲಿ 220/66 ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಭೂಮಿ ನೀಡಿ ಸಹಕರಿಸುವಂತೆ ಭೂಮಾಲೀಕರನ್ನು ಕೋರಿದೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮಿರ್ಲೆ ಗ್ರಾಮ(5 ಕಿ.ಮೀ ವ್ಯಾಪ್ತಿ), ತಿ.ನರಸೀಪುರ ತಾಲೂಕು(5 ಕಿ.ಮೀ ವ್ಯಾಪ್ತಿ) ಹಾಗೂ ಎಚ್.ಡಿ. ಕೋಟೆ ತಾಲೂಕು (5 ಕಿ.ಮೀ ವ್ಯಾಪ್ತಿ)ಗಳಲ್ಲಿ ಈ ವಿದ್ಯುತ್ ಸ್ವೀಕರಣಾ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ಈ ತಾಲೂಕುಗಳ ವ್ಯಾಪ್ತಿಯಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಕನಿಷ್ಠ 12 ಎಕರೆ ವಿಸ್ತೀರ್ಣದ ಸಮತಟ್ಟಾದ ಭೂಮಿಯ ಅಗತ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ಕಂದಾಯ ಇಲಾಖೆ ನಿಗದಿಪಡಿಸುವ ಬೆಲೆಯಲ್ಲಿ ಈ ತಾಲೂಕುಗಳ ವ್ಯಾಪ್ತಿಯ ಅಥವಾ ಸುತ್ತಲಿನ ಜಮೀನನ್ನು ಭೂ ಮಾಲೀಕರಿಂದ ನೇರವಾಗಿ ಖರೀದಿ ಮಾಡಲು ನಿಯಮಿತವು ಉದ್ದೇಶಿಸಿದೆ. ಕವಿಪ್ರನಿನಿಕ್ಕೆ ಜಮೀನು ಮಾರಾಟ ಮಾಡಲು ಇಚ್ಛಿಸುವ ಭೂ ಮಾಲೀಕರು ಖದ್ದಾಗಿ ಅಥವಾ ದೂರವಾಣಿ ಮೂಲಕ(ಜಿ. ಮನು, ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಕಾಮಗಾರಿ) 9480813912 ಅಥವಾ ಕಚೇರಿಯನ್ನು ಸಂಪರ್ಕಿಸುವಂತೆ ಕೆಪಿಟಿಸಿಎಲ್ ಮೈಸೂರು ಯೋಜನೆಗಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ.) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: Mysore, KPTCL, purchase, land, landowners