ಮೈಸೂರು,ಫೆಬ್ರವರಿ,16,2026 (www.justkannada.in): ಭಾರತದ ಪ್ರದರ್ಶನ ಕಲೆಗಳ ವೈವಿಧ್ಯತೆಯನ್ನು ತೆರೆದಿಡುವುದು ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನದ ಉದ್ದೇಶವಾಗಿದೆ ಎಂದು ಅಂಚೆ ಸೇವೆಗಳ ಮಹಾನಿರ್ದೇಶಕ ಜಿತೇಂದ್ರ ಗುಪ್ತಾ ತಿಳಿಸಿದರು.
ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ 38ನೇ ಅಖಿಲ ಭಾರತೀಯ ಅಂಚೆ ಸಮ್ಮೇಳನವನ್ನು ಉದ್ಘಾಟಿಸಿ ಜಿತೇಂದ್ರ ಗುಪ್ತಾ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅಂತರರಾಷ್ಟ್ರೀಯ ಖ್ಯಾತಿಯ ಪಿಟೀಲು ವಾದಕ ವಿದ್ವಾನ್ ಡಾ. ಮೈಸೂರು ಎಂ. ಮಂಜುನಾಥ್ ಅವರು, ಅಂಚೆ ಕಚೇರಿಗೆ ತೆರಳುವ ಗ್ರಾಹಕರಿಗೆ ಕಚೇರಿಯೊಂದಕ್ಕೆ ಆದ ಅನುಭವದ ಬದಲು ತಮ್ಮದೇ ಮನೆಗೆ ಹೋದ ಅನುಭವವಾಗುತ್ತದೆ. ಉತ್ತಮ ಸೇವೆಗೆ ಮತ್ತೊಂದು ಹೆಸರಾಗಿರುವ ಅಂಚೆ ಇಲಾಖೆ ಕೇವಲ ಪತ್ರಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ರವಾನಿಸುವುದಿಲ್ಲ ಬದಲಾಗಿ ಭಾವನೆಗಳನ್ನು ಹೊತ್ತು ತರುತ್ತದೆ. ಸಾಮಾಜಿಕ ಮಾಧ್ಯಗಳ ನಡುವೆಯೂ ಅಂಚೆ ಇಲಾಖೆಯು ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ ಎಂದು ತಿಳಿಸಿದರು.
ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಪ್ರಕಾಶ್ ಅವರು ಮಾತನಾಡಿ ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಜಗತ್ತಿನ ಎಲ್ಲ ದೇಶಗಳು ಗೌರವಿಸುತ್ತವೆ ಎಂದರು.
ಸಮ್ಮೇಳನದ ನೆನಪಿನ ವಿಶೇಷ ಅಂಚೆ ಲಕೋಟೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿದ್ವಾನ್ ಮೈಸೂರು ಎಂ. ನಾಗರಾಜ್, ಕರ್ನಾಟಕ ಅಂಚೆ ವೃತ್ತದ ಸ್ಥಾನಿಕ ನಿರ್ಧೇಶಕ ಸಂದೇಶ್ ಮಹದೇವಪ್ಪ, ಬೆಂಗಳೂರು ಕೇಂದ್ರ ವಲಯದ ನಿರ್ದೇಶಕ ವಿ. ತಾರಾ. ಮೈಸೂರು ಅಂಚೆ ತರಬೇತಿ ಕೇಂದ್ರದ ನಿರ್ಧೇಶಕ ಡಾ. ಆಶಿಶ್ ಸಿಂಗ್ ಠಾಕೂರ್ ಹಾಜರಿದ್ದರು.
ಇಂದಿನಿಂದ ಫೆ.20ರವರೆಗೂ ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ದೇಶದಾದ್ಯಂತದ 21ರ ಅಂಚೆ ವೃತ್ತಗಳಿಂದ ಒಟ್ಟು 335 ಸಿಬ್ಬಂದಿಗಳು ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ.
Key words: Mysore, Postal Cultural Conference, Jitendra Gupta







