ಮೈಸೂರು: ಜ.24ರಿಂದ IIET ವತಿಯಿಂದ ಮೂರು ದಿನಗಳ ಅಂತರಶಾಸ್ತ್ರೀಯ ಕಾರ್ಯಕ್ರಮ

ಮೈಸೂರು,ಜನವರಿ,22,2026 (www.justkannada.in): ಮೈಸೂರಿನ ಭಾರತೀಯ ಶೈಕ್ಷಣಿಕ ನಾಟಕ ಸಂಸ್ಥೆ (IIET) ವತಿಯಿಂದ ಜನವರಿ 24 ರಿಂದ 26, 2026ರ ವರೆಗೆ ಸೃಜನಾತ್ಮಕ ಬೆಸುಗೆ, ಸಂಗೀತ, ನಾಟಕ, ವಿಜ್ಞಾನ” ಎಂಬ ಮೂರು ದಿನಗಳ ಅಂತರಶಾಸ್ತ್ರೀಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ನಗರದ ಹಾರ್ಡ್‌ವಿಕ್ ಶಾಲಾ ಆವರಣ, ಜೆಎಲ್‌ ಬಿ ರಸ್ತೆ, ಮೈಸೂರು ಇಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಸಂಗೀತ, ನಾಟಕ ಮತ್ತು ವಿಜ್ಞಾನಗಳ ಸೃಜನಾತ್ಮಕ ಸಂವಾದಕ್ಕೆ ವೇದಿಕೆ ಒದಗಿಸುತ್ತದೆ.

ಜನವರಿ 24ರಂದು ಸಂಜೆ 6 ಗಂಟೆಗೆ, ಬೆಂಗಳೂರು ಮೂಲದ ಸಂಗೀತಗಾರ, ನಾಟಕಕಾರ, ಲೇಖಕ ಹಾಗೂ ಚಿಂತಕ ಎಂ.ಕೆ. ಶಂಕರ್ ಅವರು “ಮ್ಯೂಸಿಕ್ & ಸೈನ್ಸ್ ಇನ್ ಕಾನ್ಸರ್ಟ್” ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ. ಸಂಗೀತ ಮತ್ತು ವಿಜ್ಞಾನಗಳ ಆಂತರಿಕ ಸಂಬಂಧ, ಧ್ವನಿ ಮತ್ತು ರಚನೆಯ ತತ್ತ್ವಗಳನ್ನು ಈ ವಿಶೇಷ ಸಂವಾದ–ಪ್ರಸ್ತುತಿಯಲ್ಲಿ ಅನಾವರಣಗೊಳಿಸಲಾಗುತ್ತದೆ.

ಜನವರಿ 25ರಂದು ಸಂಜೆ 4 ಗಂಟೆಗೆ, ಖ್ಯಾತ ಮಕ್ಕಳ ಮನೋವೈದ್ಯ ಡಾ. ಶೇಖರ್ ಶೇಷಾದ್ರಿ (ಬೆಂಗಳೂರು) ಅವರು “ರೂಪಕ ಮತ್ತು ತಂತ್ರವಾಗಿ ಪ್ರದರ್ಶನ” ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಮಾನವ ನಡವಳಿಕೆ, ಕಲಿಕೆ ಹಾಗೂ ಭಾವನಾತ್ಮಕ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಪ್ರದರ್ಶನ ಕಲೆ ಹೇಗೆ ಒಂದು ಪರಿಣಾಮಕಾರಿ ಸಾಧನವಾಗುತ್ತದೆ ಎಂಬುದನ್ನು ಈ ಅಧಿವೇಶನ ವಿಶ್ಲೇಷಿಸುತ್ತದೆ.

ಜನವರಿ 26ರಂದು ಸಂಜೆ 6 ಗಂಟೆಗೆ, ದೆಹಲಿಯ ಖೇಲ್ ತಮಾಶಾ ತಂಡದಿಂದ ಮಕ್ಕಳಿಗಾಗಿ ರೂಪಿಸಿದ ಗಿಬರಿಷ್ ನಾಟಕ “ಧಿನ್ ಚೆಕ್ ಪೊಮ್ ಪೊಮ್ ಪೋಷ್” ಪ್ರದರ್ಶನಗೊಳ್ಳಲಿದೆ. ಭಾಷೆಗೂ ಮೀರಿ ದೇಹಭಾಷೆ, ಲಯ ಮತ್ತು ಕಲ್ಪನಾಶಕ್ತಿಯ ಮೂಲಕ ಸಂವಹನದ ಆನಂದವನ್ನು ಈ ನಾಟಕ ಮೂಡಿಸಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: +91 98 45 605012

Key words: Mysore, Three-day, interdisciplinary program, IIET