ಮೈಸೂರು,ಫೆಬ್ರವರಿ,6,2026 (www.justkannada.in): ಬೆಳಗ್ಗಿನ ಜಾವವೇ ಜೆಸಿಬಿ ಘರ್ಜನೆಯಿಂದ ಮೈಸೂರು ಊಟಿ ರಸ್ತೆಯ ಜೆಎಸ್ ಎಸ್ ಕಾಲೇಜು ಮುಂಭಾಗ ಸಂಚಲನಕ್ಕೆ ಸಾಕ್ಷಿಯಾಯಿತು. ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಸುಮಾರು 38 ಗುಂಟೆ ಜಾಗವನ್ನು ದೀರ್ಘಕಾಲ ಒತ್ತುವರಿ ಮಾಡಿಕೊಂಡಿದ್ದ ಖಾಸಗಿ ವ್ಯಕ್ತಿಗಳ ಅಕ್ರಮವನ್ನು ಜಿಲ್ಲಾಡಳಿತ ಕೊನೆಗೂ ನೆಲಸಮಗೊಳಿಸಿದೆ. ಪಾರ್ಕಿಂಗ್ ಹಾಗೂ ಟೀ ಅಂಗಡಿ ನಡೆಸುತ್ತಾ ವರ್ಷಗಳ ಕಾಲ ವಾಣಿಜ್ಯವಾಗಿ ದುರುಪಯೋಗ ಮಾಡಲಾಗುತ್ತಿದ್ದ ಈ ಜಾಗವನ್ನು ಅಧಿಕಾರಿಗಳು ತೆರವುಗೊಳಿಸಿದರು.
ಈ ಜಾಗವನ್ನು 2011ರಲ್ಲಿ ಹಿಂದುಳಿದ ವರ್ಗಗಳ ಡಿ. ದೇವರಾಜ ಅರಸು ವಿದ್ಯಾರ್ಥಿ–ವಿದ್ಯಾರ್ಥಿನಿಯರ ನಿಲಯ ನಿರ್ಮಾಣಕ್ಕೆ ಸರ್ಕಾರ ಮಂಜೂರು ಮಾಡಿತ್ತು. ಆದರೂ, ಸುಮಾರು 25 ವರ್ಷಗಳಿಂದ ಅಕ್ರಮವಾಗಿ ಕಬಳಿಸಿಕೊಂಡಿದ್ದವರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದದ್ದು ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. JUST ಕನ್ನಡ ವರದಿ ನಂತರ ಎಚ್ಚೆತ್ತ ಜಿಲ್ಲಾಡಳಿತ ದಾಖಲೆ ಪರಿಶೀಲಿಸಿ ತಕ್ಷಣವೇ ಒತ್ತುವರಿ ತೆರವುಗೆ ಆದೇಶ ನೀಡಿತು.
ತಹಸೀಲ್ದಾರ್ ಮಹೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಘವೇಂದ್ರ, ವಿದ್ಯಾರಣ್ಯಪುರಂ ಠಾಣೆ ನಿರೀಕ್ಷಕ ಯೋಗಾಂಜನಪ್ಪ ಹಾಗೂ ಲಕ್ಷ್ಮಿಪುರಂ ಠಾಣೆ ಇನ್ಸ್ ಪೆಕ್ಟರ್ ರವಿಕುಮಾರ್ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಯಿತು. ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗವನ್ನು ಇದೀಗ ಅಧಿಕೃತವಾಗಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಹಸ್ತಾಂತರಿಸಲಾಗಿದೆ.
ಇದು JUST ಕನ್ನಡ ವರದಿ ತಂದ ಸ್ಪಷ್ಟ ಫಲಶೃತಿ.
Key words: JCB, Mysore, Government land, free, encroachment







