ಮೈಸೂರಿನ ಶತಮಾನದ ಕಟ್ಟಡ ನಿರ್ವಹಣೆ ಮರೆತ ಅಧಿಕಾರಿಗಳು !

ಮೈಸೂರು, ನವೆಂಬರ್ 24, 2020 (www.justkannada.in): ಅರಮನೆ ನಗರಿಯ ಶತಮಾನದ ಇತಿಹಾಸವಿರುವ ಕಟ್ಟಡವೊಂದು ಸೂಕ್ತ ನಿರ್ವಹಣೆಗೆ ಕಾದಿದೆ !

ಹೌದು. ನಗರದ ಚಾಮರಾಜ ಜೋಡಿ ರಸ್ತೆಯ ಲಕ್ಷ್ಮಿ ಥಿಯೇಟರ್ ಎದುರು ಇರುವ ಬಾಲಕಿಯರ ಸರಕಾರಿ ಸ್ವತಂತ್ರ್ಯ ಪದವಿಪೂರ್ವ ಕಾಲೇಜು ಕಟ್ಟಡಕ್ಕೆ ಬರೋಬ್ಬರಿ 104 ವರ್ಷಗಳ ಇತಿಹಾಸವಿದೆ. 1916ರಲ್ಲಿ ನಿರ್ಮಾಣವಾಗಿದ್ದ ಈ ಕಟ್ಟಡ ಸದ್ಯ ಸೂಕ್ತ ನಿರ್ವಹಣೆ ಕೊರತೆಯಿಂದ ದುಸ್ಥಿತಿ ತಲುಪಿದೆ.

ಈ ಕಟ್ಟಡ ನಗರದ ಬಾಲಕಿಯರ ಸರಕಾರಿ ಸ್ವತಂತ್ರ್ಯ ಪದವಿಪೂರ್ವ ಕಾಲೇಜಿಗೆ ಸೇರಿದ್ದು, ದುಸ್ಥಿತಿ ತಲುಪಿರುವ ಕಾರಣದಿಂದ ಇಲ್ಲಿ ಯಾವುದೇ ತರಗತಿಗಳು ನಡೆಯುತ್ತಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಕೆಲ ಪರೀಕ್ಷಾ ಕಾರ್ಯಗಳಿಗೆ ಕಟ್ಟಡವನ್ನು ಬಳಸಲಾಗುತ್ತಿದೆ. ಇದನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ದುರಸ್ತಿ ಮಾಡಿಸಿದರೆ ತರಗತಿಗಳನ್ನು ನಡೆಸಲು ಬಳಸಬಹುದು ಎನ್ನುತ್ತಾರೆ ಕಾಲೇಜಿನ ಸಿಬ್ಬಂದಿ.

ಪಾರಂಪರಿಕ ಕಟ್ಟಡವಾಗಿರುವುದರಿಂದ ತಜ್ಞರೇ ಇದನ್ನು ನಿರ್ವಹಣೆ ಮಾಡಬೇಕಿದೆ. 100 ವರ್ಷ ತುಂಬಿದರೂ ಇನ್ನು ಕಣ್ಮನ ಸೆಳೆಯುವ ಅಂದ ಈ ಕಟ್ಟಡಕ್ಕಿದ್ದು, ಇದನ್ನು ಸಂರಕ್ಷಿಸಬೇಕಾದ ಕೆಲಸ ಮಾಡಬೇಕಿದೆ.