ಗಾಡಿಚೌಕವು ಉದ್ಯಾನವಾಗಲಿ!

ಮೈಸೂರು,ಸೆಪ್ಟಂಬರ್,13,2025 (www.justkannada.in): ಮೈಸೂರು ನಗರ, ಕೆ.ಆರ್. ಮೊಹಲ್ಲಾ, ಮಧ್ವಾಚಾರ್ ರಸ್ತೆ, ಗಾಡಿ ಚೌಕ, ಸ್ವತ್ತಿನ ಸಂಖ್ಯೆ: 2192 ಕೆ-65 ರಲ್ಲಿ ಧಾರ್ಮಿಕ ಕಟ್ಟಡ (ದರ್ಗಾ) ನಿರ್ಮಿಸಲು ಕಾರ್ಯದರ್ಶಿ ದಿಲ್‌ಬರ್‌ಷಾವಲಿ ಮಕಾನ್ (ಸುನ್ನಿ ದರ್ಗಾ) ಇವರು ರಹದಾರಿ ಕೋರಿ ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿರುತ್ತಾರೆ. ಸದರಿ ಜಾಗೆಯು ಪಶ್ಚಿಮ, ದಕ್ಷಿಣ ಮತ್ತು ಪೂರ್ವದ ಕಡೆ ರಸ್ತೆಗೆ ಲಗತ್ತಾಗಿರುತ್ತದೆ. ಪ್ರಸ್ತುತ ಈ ನಿವೇಶನದಲ್ಲಿ ಉದ್ದೇಶಿಸಲಾಗಿರುವ ಧಾರ್ಮಿಕ ಕಟ್ಟಡದ ಬಗ್ಗೆ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳು / ಸಲಹೆಗಳಿದ್ದಲ್ಲಿ ಈ ಪ್ರಕಟಣೆಯು ಪ್ರಕಟವಾದ ದಿನದಿಂದ 15 ದಿನದೊಳಗಾಗಿ ಲಿಖಿತ ರೂಪದಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕೆಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.

ಈ ಪ್ರಕಟಣೆ ಹೇಗಿದೆಯೆಂದರೆ ಸಾರ್ವಜನಿಕರ ಗಮನಕ್ಕೆ ಬಾರದಂತೆ ಚಿಕ್ಕದಾಗಿದೆ!ಸಾರ್ವಜನಿಕರ ಗಮನಕ್ಕೆ ಬರುವ ಹಾಗೆ ದಿನಪತ್ರಿಕೆಗಳ ಮುಖಪುಟಗಳಲ್ಲಿ ದಪ್ಪಕ್ಷರಗಳಲ್ಲಿ ಈ ಜಾಗದ ಚಿತ್ರ ಸಹಿತ ದೊಡ್ಡದಾಗಿ ಪ್ರಕಟಣೆ ಹೊರಡಿಸುವ ಬದಲಾಗಿ “ನಾಯಿಮರಿ ಕಳೆದಿದೆ” ಎಂಬ ₹100 ಕ್ಲಾಸಿಫೈಡ್ ಜಾಹೀರಾತಿನಂತೆ ಯಾರ ಕಣ್ಣಿಗೂ ಬೀಳದಂತೆ ಜಾಹೀರಾತು ನೀಡುವ ಮೂಲಕ ಪಾಲಿಕೆಯ ಆಯುಕ್ತರು ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ಪಾಲಿಕೆ ಆಯುಕ್ತರು ಈ ಸಾರ್ವಜನಿಕ ಪ್ರಕಟಣೆಯನ್ನು ಗಾಡಿ ಚೌಕದ ಬಳಿ ಬೃಹತ್ ಫಲಕ ಪ್ರದರ್ಶಿಸುವುದರ ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಂಗೂರ ಸಾರುವ ಮೂಲಕ ಸಾರ್ವಜನಿಕರ ಗಮನ ಸೆಳೆದು ಈ ಪ್ರಕಟಣೆಯನ್ನು ಪ್ರಕಟಿಸಬೇಕಿದೆ.

ಉದ್ಯಾನವನ ಮುಂತಾದ ಸಾರ್ವಜನಿಕ ಸ್ಥಳಗಳನ್ನು ಅನ್ಯ ಉದ್ದೇಶಕ್ಕೆ ಬಳಸಬಾರದೆಂದೂ, ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ. ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಲಿಕೆ, ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರಕ್ಕೂ ಕೂಡ ನಿರ್ದೇಶನ ನೀಡಿದೆ.

ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿಕೊಂಡವರ ಪರವಾಗಿ ಯಾವುದೇ ಆದೇಶವನ್ನೂ ಕೂಡಾ ಹೊರಡಿಸಬಾರದೆಂದು ಕೆಳನ್ಯಾಯಾಲಯಗಳಿಗೂ ನಿರ್ದೇಶನ ನೀಡಿದೆ. ಈ ಆದೇಶದನ್ವಯ ಮೈಸೂರು ನಗರ ಪಾಲಿಕೆಯು ಫುಟ್ ಪಾತ್ ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಅವರನ್ನು ಎತ್ತಂಗಡಿ ಮಾಡಿದೆ.

ವಿಪರ್ಯಾಸವೆಂದರೆ…

ಮೈಸೂರು ನಗರದ ಕೃಷ್ಣರಾಜ ಮೊಹಲ್ಲದಲ್ಲಿರುವ ಕಾಂತರಾಜ ಅರಸ್ ರಸ್ತೆಯು ಮಾದ್ವಾಚಾರ್ ರಸ್ತೆಯನ್ನು ಕೂಡುವ ಜಾಗದಲ್ಲಿ ಸುಮಾರು ಒಂದೂವರೆ ಎಕರೆ ವಿಸ್ತೀರ್ಣವುಳ್ಳ ಜಾಗವನ್ನು ಉದ್ಯಾನವನದ ಪ್ರದೇಶವೆಂದು ಗುರುತಿಸಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ರಚಿಸಿರುವ ಸಮಗ್ರ ಅಭಿವೃದ್ಧಿ ನಕ್ಷೆ(ಸಿಡಿಪಿ)ಯ ಪ್ರಕಾರ ದಿನಾಂಕ 16.05.1997 ರ ಕರ್ನಾಟಕ ಸರಕಾರದ ಆದೇಶ ಸಂಖ್ಯೆ :ಯು.ಡಿ.ಡಿ 337 ಟಿ.ಡಿ.ಪಿ 96 ರ ಪ್ರಕಾರವೂ ಕೂಡಾ ‘ಪಾರ್ಕ್ ಮತ್ತು ಓಪನ್ ಸ್ಪೇಸ್’ ಎಂದೇ ಸ್ಪಷ್ಟವಾಗಿ ಗುರುತಿಸಲಾಗಿದೆ. ಈ ಸಮಗ್ರ ಅಭಿವೃದ್ಧಿ ನಕ್ಷೆಯು 2011 ನೇ ಇಸವಿಯವರೆಗೆ ಚಾಲ್ತಿಯಲ್ಲಿದ್ದು,ಇದುವರೆವಿಗೂ ಈ ಜಾಗದ ಉಲ್ಲೇಖದ ಬಗ್ಗೆ ಯಾವುದೇ ರೀತಿಯ ತಿದ್ದುಪಡಿಗಳಾಗಿರುವುದಿಲ್ಲ.

ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಈಗ್ಗೆ ಸುಮಾರು 30-40 ವರ್ಷಗಳ ಹಿಂದೆ ಈ ಜಾಗದಲ್ಲಿ ಹೆಗ್ಗಡ ದೇವನ ಕೋಟೆಯ ಕಡೆಯಿಂದ ಎತ್ತಿನ ಗಾಡಿಗಳಲ್ಲಿ ತರುತ್ತಿದ್ದ ಸೌದೆಯ ಕಟ್ಟುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು. ಈ ಕಾರಣದಿಂದಾಗಿ ಈ ಜಾಗವನ್ನು ‘ಗಾಡಿ ಚೌಕ’ಎಂದೇ ಕರೆಯಲಾಗುತ್ತಿತ್ತು. ಕಾಲಕ್ರಮೇಣ ಈ ಜಾಗವನ್ನು ಗಾಡಿಚೌಕವನ್ನಾಗಿ ಬಳಸಿಕೊಳ್ಳುವ ಬಗ್ಗೆ ಸಾರ್ವಜನಿಕರು ಹಾಗೂ ಆಜುಬಾಜು ಪ್ರದೇಶದ ನಿವಾಸಿಗಳು ತಕರಾರು ಮಾಡಿದ್ದರಿಂದ ನಗರ ಪಾಲಿಕೆಯ ಅಧಿಕಾರಿಗಳು ಅಲ್ಲಿ ಗಾಡಿಗಳು ನಿಲ್ಲದಂತೆ ಮಾಡಿ, ಸದರಿ ಜಾಗವನ್ನು ಸದರಿ ಕೆಲಸಕ್ಕೆ ಉಪಯೋಗಿಸದಂತೆ ನೋಡಿಕೊಂಡರು. ಕಾಲಕ್ರಮೇಣ ಸದರಿ ಜಾಗವನ್ನು ಅತಿಕ್ರಮಣಕಾರರಿಂದ ರಕ್ಷಿಸುವ ಉದ್ದೇಶದಿಂದ ನಗರಪಾಲಿಕೆಯು ನಾಲ್ಕು ಕಡೆಗೂ ಕಾಂಪೌಂಡ್ ನಿರ್ಮಿಸಿ ಎರಡು ಕಡೆಯಲ್ಲಿ (ಪೂರ್ವ ಹಾಗೂ ಪಶ್ಚಿಮ) ಕಾಂಪೌಂಡಿಗೆ ಗೇಟುಗಳನ್ನು ಅಳವಡಿಸಿ, ಸುತ್ತಮುತ್ತಲಿನ ಬಡಾವಣೆಯ ಮಹಿಳೆಯರು ಮತ್ತು ಮಕ್ಕಳು ಆ ಜಾಗದೊಳಕ್ಕೆ ಪ್ರವೇಶಿಸಲು ಅನುಕೂಲ ಮಾಡಿಕೊಡಲಾಯಿತು. ಹೀಗಿದ್ದರೂ ಸದರಿ ಜಾಗವನ್ನು ಒಂದು ಸುಂದರ ಉದ್ಯಾನವನವನ್ನಾಗಿ ಪರಿವರ್ತಿಸಲು ನಗರಪಾಲಿಕೆಯು ಇಂದಿನವರೆಗೂ ಯಾವುದೇ ಯೋಜನೆಯನ್ನು ಹಾಕಿಕೊಂಡು ಅನುಷ್ಠಾನಗೊಳಿಸಿಲ್ಲ.

ಈ ಜಾಗದ ಸುತ್ತಮುತ್ತಲಿನ ಬಡಾವಣೆಗಳು ಜನನಿಬಿಡವಾದ ಪ್ರದೇಶಗಳಾಗಿದ್ದು ಇಂತಹ ಉದ್ಯಾನವನದ ಸವಲತ್ತು ಈ ಜನಗಳಿಗೆ ಬೇಕಾಗಿದೆ.

ಇತ್ತೀಚಿನ ದಿನಗಳಲ್ಲಿ ಈ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇಂತಹ ಪ್ರಯತ್ನದಲ್ಲಿ ಈ ಜಾಗದ ಉತ್ತರ ಭಾಗದಲ್ಲಿದ್ದ ಒಂದು ಅಡ್ಡರಸ್ತೆಯನ್ನೂ ಸೇರಿದಂತೆ ಸ್ವಲ್ಪ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಅಲ್ಲಿ ಕಟ್ಟಡವೊಂದನ್ನು ಕಟ್ಟಿಬಿಟ್ಟಿದ್ದಾರೆ. ಆ ಜಾಗದಲ್ಲಿ ಆಟೋ ರಿಕ್ಷಾಗಳನ್ನು ಮತ್ತು ತಳ್ಳು ಗಾಡಿಗಳನ್ನು ನಿಲ್ಲಿಸುವ ನಿಲ್ದಾಣವನ್ನಾಗಿ ಪರಿವರ್ತನೆ ಮಾಡಿ ಅದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಸ್ಥಳದಲ್ಲಿ ಖಾಸಗಿ ಸಮಿತಿಯೊಂದರ ಬೋರ್ಡ್ ಅಳವಡಿಸಲಾಗಿದೆ.

ಹೀಗಾಗಿ ಈ ಉದ್ಯಾನವನದ ಜಾಗ ಸಂಪೂರ್ಣ ದುರುಪಯೋಗ ಆಗುವುದನ್ನು ತಪ್ಪಿಸಬೇಕಾಗಿದೆ.

ಈ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಸ್ಪ್ರೇ ಪೇಂಟಿಂಗ್ ಮತ್ತು ಟಿಂಕರಿಂಗ್ ಕೆಲಸಗಳನ್ನು ಮಾಡಲಾಗುತ್ತಿದ್ದು.ಒಟ್ಟಾರೆ ಈ ಉದ್ಯಾನವನವನ್ನು ಖಾಸಗಿ ಗುಜರಿ ಹಾಗೂ ವಾಹನ ನಿಲ್ದಾಣವನ್ನಾಗಿ ಪರಿವರ್ತಿಸಲಾಗಿದ್ದು ಈಗ ಶಾಶ್ವತವಾಗಿ ದರ್ಗಾ ಕಟ್ಟಡ ನಿರ್ಮಿಸಲು ಆರಂಭಿಸಲಾಗಿದೆ ಎಂಬುದು ದುಃಖಕರವಾದ ಸಂಗತಿಯಾಗಿದೆ.

ಈ ಎಲ್ಲ ಕಾರಣಗಳಿಂದ ನಗರ ಪಾಲಿಕೆಯು ಕೂಡಲೇ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಉದ್ಯಾನವನದ ಜಾಗದೊಳಗೆ ಆಗುತ್ತಿರುವ ಅತಿಕ್ರಮಣವನ್ನು ತಪ್ಪಿಸಿ ಸದರೀ ಜಾಗವು ಉದ್ಯಾನವನಕ್ಕೇ ಉಳಿಯುವಂತೆ ಮಾಡಬೇಕಿದೆ. ಅಲ್ಲದೆ ಈ ಜಾಗವನ್ನು  ವ್ಯವಸ್ಥಿತವಾಗಿ ಒಂದು ಉದ್ಯಾನವನವನ್ನಾಗಿ ರೂಪಿಸಿ ಸುತ್ತಮುತ್ತಲಿನ ಬಡಾವಣೆಯ ಜನರಿಗೆ ಸಿಕ್ಕಲೇಬೇಕಾದ ನಾಗರಿಕ ಸೌಲಭ್ಯವನ್ನು ದೊರಕಿಸಿಕೊಡಬೇಕಾಗಿದೆ. ಈ ವಿಚಾರವಾಗಿ ಮೈಸೂರು ಮಹಾ ನಗರ ಪಾಲಿಕೆಯು ಗಮನಹರಿಸಿ ಶೀಘ್ರವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

-ಪಿ.ಜೆ.ರಾಘವೇಂದ್ರ

  ನ್ಯಾಯವಾದಿ

  ಮೈಸೂರು

Key words: Mysore, Gadi chowka, garden, Encroachment