ಸಿಎಂ ಬಿಎಸ್ ವೈ ಪರ ಬ್ಯಾಟಿಂಗ್: ಕಾಂಗ್ರೆಸ್ ಅಥವಾ ಬಿಜೆಪಿ ಸೇರ್ಪಡೆ ಕುರಿತು ಮಾಜಿ ಸಚಿವ ಜಿ.ಟಿ ದೇವೇಗೌಡರು ಪ್ರತಿಕ್ರಿಯಿಸಿದ್ದು ಹೀಗೆ…………

ಮೈಸೂರು,ಡಿ,12,2019(www.justkannada.in):   ನಾನು ಜೆಡಿಎಸ್ ಶಾಸಕ. ಜೆಡಿಎಸ್ ಶಾಸಕನಾಗಿಯೇ ಇರುತ್ತೇನೆ ನಾನು ಕಾಂಗ್ರೆಸ್ ಗೆ ಆಗಲಿ ಅಥವಾ ಬಿಜೆಪಿಗೆ ಆಗಲಿ ಹೋಗುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಜಿಟಿ ದೇವೇಗೌಡರು ಪಕ್ಷ ಬಿಡುವ ವಿಚಾರಕ್ಕೆ ತೆರೆ ಎಳೆದಿದ್ದಾರೆ.

ಮೈಸೂರಿನಲ್ಲಿ ಇಂದು  ಮಾತನಾಡಿದ ಮಾಜಿ ಸಚಿವಜಿ.ಟಿ ದೇವೇಗೌಡರು, ನಾನು ಜೆಡಿಎಸ್ ಬಿಟ್ಟು ಹೋಗುವುದಿಲ್ಲ. ಜೆಡಿಎಸ್ ಶಾಸಕನಾಗಿಯೇ ಇರುತ್ತೇನೆ. ಕಾಂಗ್ರೆಸ್ ಗಾಗಲಿ ಅಥವಾ ಬಿಜೆಪಿಗಾಗಲಿ ಯಾವ ಪಕ್ಷದ ಕಡೆಯೋ ನಾನು ಮುಖ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಬಿಎಸ್ ವೈ ಪರ ಬ್ಯಾಟಿಂಗ್….

ಇದೇ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ ಜಿ.ಟಿ ದೇವೇಗೌಡರು, ಯಡಿಯೂರಪ್ಪನವರಿಗೆ ಈ ಸರ್ಕಾರವನ್ನ ಮುನ್ನಡೆಸಿಕೊಂಡು ಹೋಗುವ ಶಕ್ತಿ ಸಾಮರ್ಥ ಇದೆ. ಅಷ್ಟೇ ಕಷ್ಟವೂ ಕೂಡ ಇದೆ. ಅವರು ಯಶಸ್ವಿಯಾಗಿ ರಾಜ್ಯ ಅಭಿವೃದ್ಧಿ ಪಡಿಸಿ ಆಡಳಿತ ನಡೆಸಲಿ ಎಂದು ಹಾರೈಸುತ್ತೇನೆ ಎಂದರು.

ಪರಾಜಿತ ಅಭ್ಯರ್ಥಿ ವಿಶ್ವನಾಥ್ ಗೆ ಮಂತ್ರಿ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಿ.ಟಿಡಿ, ಈ ವಿಚಾರದಲ್ಲಿ ನಾನು ಯಾರಿಗೂ ಏನು ಹೇಳುವುದಿಲ್ಲ. ನಾನು ಸಿಎಂ ಯಡಿಯೂರಪ್ಪಗೂ ಹೇಳುವುದಿಲ್ಲ. ಏನಾದ್ರೂ ನಾನು ವಿಶ್ವನಾಥ್ ಮಂತ್ರಿ ಮಾಡಿ ಅಂತಾ ಹೇಳಿದ್ರೆ, ನನ್ನ ವಿರುದ್ದವೇ ತಿರುಗಿಬೀಳುವ ಸಾಧ್ಯತೆ ಇದೆ. ಇವನ್ಯಾರು ಮಂತ್ರಿ ಮಾಡಿ ಅಂತಾ ಹೇಳೊಕೆ ಅಂತನೂ ಕೇಳಬಹುದು. ಹೀಗಾಗಿ ನಾನು ಯಾರ ಪರವೂ ಮಾತಾನಾಡುವುದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಬೇಗ ಗುಣಮುಖರಾಗಿ ಬರಲಿ….

ಮಾಜಿ ಸಿಎಂ ಸಿದ್ದರಾಮಯ್ಯ ಗೆ ಅನಾರೋಗ್ಯ ಹಿನ್ನಲೆ, ಸಿದ್ಧರಾಮಯ್ಯ ಆದಷ್ಟು ಬೇಗ ಗುಣಮುಖರಾಗಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಳ್ಳುತ್ತೇನೆ. ನಾನು ಸಿದ್ದರಾಮಯ್ಯ ಹಲವು ದಶಕಗಳಿಂದ ಸ್ನೇಹಿತರು. ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ನನಗೆ ಮಾಹಿತಿ ಬಂದಿದೆ. ಅವರು ವಿಶ್ರಾಂತಿ ಪಡೆಯದೇ ಸದಾಕಾಲವೂ ಓಡಾಡುವ ವ್ಯಕ್ತಿ. ಹೀಗಾಗಿ ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ನುಡಿದರು.

Key words: mysore- Former minister -GT Deve Gowda –reacton-about-join- Congress or BJP