Friday, October 9, 2026

BDA Apartments

Increase in COVID cases: DC’s village stay program with held BDA JK_Adv BDA Adv
Home Front Page ಬುಡಕಟ್ಟು ಭಾಷೆ, ಸಂಸ್ಕೃತಿ ಸಂರಕ್ಷಣೆಗೆ ರಾಷ್ಟ್ರೀಯ ಸಂಕಲ್ಪ ಅಗತ್ಯ:-ದುರ್ಗಾದಾಸ್ ಉಯಿಕಿ

ಬುಡಕಟ್ಟು ಭಾಷೆ, ಸಂಸ್ಕೃತಿ ಸಂರಕ್ಷಣೆಗೆ ರಾಷ್ಟ್ರೀಯ ಸಂಕಲ್ಪ ಅಗತ್ಯ:-ದುರ್ಗಾದಾಸ್ ಉಯಿಕಿ

ಮೈಸೂರು ಆಗಸ್ಟ್, 24, 2026 (www.justkannada.in): ಬುಡಕಟ್ಟು ಭಾಷೆ, ಸಂಸ್ಕೃತಿ ಸಂರಕ್ಷಣೆಗೆ ರಾಷ್ಟ್ರೀಯ ಸಂಕಲ್ಪ ಅಗತ್ಯವಾಗಿದೆ. ನಾವೆಲ್ಲರೂ ಸೇರಿ ಬುಡಕಟ್ಟು ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ರಾಜ್ಯ ಸಚಿವರಾದ ದುರ್ಗಾದಾಸ್ ಉಯಿಕಿ ಅವರು ತಿಳಿಸಿದರು.

ಇಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಇವರ ವತಿಯಿಂದ  ಸದರ್ನ್ ಸ್ಟಾರ್ ಹೋಟೆಲ್ ನಲ್ಲಿ  ಬುಡಕಟ್ಟು ಭಾಷೆಗಳು ಮತ್ತು ವಸ್ತು ಸಂಗ್ರಹಾಲಯಗಳು ಕುರಿತು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರು ಪೌರಾಣಿಕ ಪರಂಪರೆ, ರಾಜವಂಶಗಳು, ಕಲೆ, ಸಾಹಿತ್ಯ, ಸಂಗೀತ ಮತ್ತು ಜಾನಪದ ಸಂಸ್ಕೃತಿಯ ಸುದೀರ್ಘ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಗಂಗ, ಚಾಲುಕ್ಯ, ಚೋಳ, ಹೊಯ್ಸಳ, ವಿಜಯನಗರ ಅರಸರು ಹಾಗೂ ಒಡೆಯರು ಸೇರಿದಂತೆ ಹಲವು ರಾಜವಂಶಗಳ ಪ್ರಭಾವ ಈ ಪ್ರದೇಶದ ಇತಿಹಾಸದ ಮೇಲೆ ಬೀರಿದೆ. ಬುಡಕಟ್ಟು ಭಾಷೆಗಳು ಮತ್ತು ಸ್ವಾತಂತ್ರ‍್ಯ ಹೋರಾಟಗಾರರ ಇತಿಹಾಸವನ್ನು ದಾಖಲಿಸಿ ಸಂರಕ್ಷಿಸುವುದು, ದೇಶದ ಸಂಸ್ಕೃತಿ, ಬುಡಕಟ್ಟು ಅಸ್ಮಿತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಸಂಗ್ರಹಾಲಯಗಳು ಮಹತ್ವದ ಪಾತ್ರ ವಹಿಸಲಿವೆ ಎಂದು ಹೇಳಿದರು.

ಭಾರತೀಯ ಪರಂಪರೆಯಲ್ಲಿ ಪ್ರಕೃತಿ ಮತ್ತು ಅರಣ್ಯ ಸಂಸ್ಕೃತಿಗೆ ವಿಶೇಷ ಸ್ಥಾನವಿದೆ. ಭಾರತೀಯ ಇತಿಹಾಸದ ಹಲವು ಪ್ರಮುಖ ಘಟ್ಟಗಳಲ್ಲಿ ಬುಡಕಟ್ಟು ಸಮುದಾಯಗಳು ಮಹತ್ವದ ಪಾತ್ರ ವಹಿಸಿವೆ. ಅವರ ಕೊಡುಗೆಗಳನ್ನು ಮುಖ್ಯವಾಹಿನಿಯ ಇತಿಹಾಸದಲ್ಲಿ ಸೂಕ್ತವಾಗಿ ದಾಖಲಿಸುವ ಅಗತ್ಯವಿದೆ. ದೇಶದ ನದಿಗಳು ಮಾಲಿನ್ಯಗೊಳ್ಳುತ್ತಿರುವುದು, ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದ ಆಹಾರ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದು ಹಾಗೂ ವಿವಿಧ ಕಾಯಿಲೆಗಳು ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಭೌತಿಕ ಜೀವನಶೈಲಿಯ ಹಿಂದೆ ಸಾಗುತ್ತಿರುವ ಆಧುನಿಕ ಸಮಾಜವು ಪ್ರಕೃತಿಯೊಂದಿಗೆ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.

ಭಾರತೀಯ ಪರಂಪರೆಯಲ್ಲಿ ಮಾನವನು ಪ್ರಕೃತಿ ಮತ್ತು ಇತರ ಜೀವಜಾಲದೊಂದಿಗೆ ಹೊಂದಿರುವ ಸಂಬಂಧಕ್ಕೆ ವಿಶೇಷ ಮಹತ್ವವಿದೆ. ಆದರೆ ಆಧುನಿಕ ಮಾನವ ತನ್ನ ವೈಯಕ್ತಿಕ ಬದುಕು ಮತ್ತು ಭೌತಿಕ ಅಗತ್ಯಗಳ ಸುತ್ತ ಹೆಚ್ಚು ಕೇಂದ್ರೀಕೃತನಾಗಿರುವುದರಿಂದ ಸಮಾಜದಲ್ಲಿ ಸಂಘರ್ಷ, ಅಸಮಾನತೆ ಮತ್ತು ಅಶಾಂತಿ ಹೆಚ್ಚುತ್ತಿದೆ. ಪ್ರಕೃತಿ ವಿಕೋಪಗಳು ಮತ್ತು ಪ್ರವಾಹಗಳ ಸಂದರ್ಭದಲ್ಲಿ ಎತ್ತರದ ಪ್ರದೇಶಗಳು ಮತ್ತು ಬೆಟ್ಟಗುಡ್ಡಗಳಲ್ಲಿ ವಾಸಿಸುವ ಸಮುದಾಯಗಳು ತಮ್ಮ ಜೀವನ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಬುಡಕಟ್ಟು ಸಮುದಾಯಗಳನ್ನು ಮಾನವ ನಾಗರಿಕತೆಯ ಪ್ರಾಚೀನ ಜ್ಞಾನ ಮತ್ತು ಜೀವನ ಪದ್ಧತಿಯ ಪ್ರಮುಖ ಸಂರಕ್ಷಕರಾಗಿ ನೋಡಬಹುದು ಎಂದು ದುರ್ಗಾದಾಸ್ ಉಯಿಕಿ ಅವರು ಹೇಳಿದರು.

ಬುಡಕಟ್ಟು ಸಮಾಜದ ಮೂಲ ಜ್ಞಾನ, ಪರಂಪರೆ, ಶಿಕ್ಷಣ ಮತ್ತು ಸಾಂಸ್ಕೃತಿಕ ಮೌಲ್ಯಗಳ ಕುರಿತು ಮೂರು ದಿನಗಳ ಕಾಲ ನಡೆಯುತ್ತಿರುವ ಚರ್ಚೆ ಮತ್ತು ಕಾರ್ಯಾಗಾರವು ಮಹತ್ವದ್ದಾಗಿದೆ. 2047ರ ವೇಳೆಗೆ ಭಾರತವನ್ನು ವಿಶ್ವದ ಪ್ರಮುಖ ರಾಷ್ಟ್ರವನ್ನಾಗಿ ರೂಪಿಸುವ ಗುರಿಯಲ್ಲಿ ಬುಡಕಟ್ಟು ಸಮುದಾಯಗಳೂ ಸಮಾನವಾಗಿ ಪಾಲ್ಗೊಳ್ಳಬೇಕು. ಅವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತಂದು, ಸಮಾನ ಅವಕಾಶಗಳನ್ನು ಕಲ್ಪಿಸುವ ಮೂಲಕ ದೇಶದ ಸಮಗ್ರ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಭಾರತೀಯ ಇತಿಹಾಸ, ಧರ್ಮ, ಸಂಸ್ಕೃತಿ ಹಾಗೂ ಸ್ವಾತಂತ್ರ‍್ಯ ಹೋರಾಟದಲ್ಲಿ ಬುಡಕಟ್ಟು ಸಮಾಜದ ಕೊಡುಗೆ ಅಪಾರವಾಗಿದೆ. ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿಯೂ ಲಕ್ಷಾಂತರ ಬುಡಕಟ್ಟು ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. 2014ರ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬುಡಕಟ್ಟು ಸಮಾಜದ ಯೋಧರು ಮತ್ತು ಅವರ ಇತಿಹಾಸಕ್ಕೆ ಗೌರವ ನೀಡುವ ಹಲವು ಪ್ರಯತ್ನಗಳು ನಡೆದಿವೆ. ವಿಶೇಷವಾಗಿ ಸ್ವಾತಂತ್ರ‍್ಯದ 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳ ಬುಡಕಟ್ಟು ಸ್ವಾತಂತ್ರ‍್ಯ ಹೋರಾಟಗಾರರನ್ನು ಸ್ಮರಿಸಿ, ಅವರ ಕೊಡುಗೆಯನ್ನು ಜನರಿಗೆ ಪರಿಚಯಿಸುವ ಕಾರ್ಯಕ್ಕೆ ಒತ್ತು ನೀಡಲಾಗಿದೆ ಎಂದು ತಿಳಿಸಲಾಯಿತು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಟಿ. ರಘುಮೂರ್ತಿ ಅವರು ಮಾತನಾಡಿ ಬುಡಕಟ್ಟು ಭಾಷೆಗಳು ನಶಿಸಿದರೆ ಕೇವಲ ಭಾಷೆಯಷ್ಟೇ ಅಲ್ಲದೆ, ಸಮುದಾಯದ ಸಂಸ್ಕೃತಿ, ಪರಂಪರೆ ಹಾಗೂ ಪಾರಂಪರಿಕ ಜ್ಞಾನವೂ ನಷ್ಟವಾಗುತ್ತದೆ. ಹೀಗಾಗಿ ಬುಡಕಟ್ಟು ಭಾಷೆಗಳ ದಾಖಲಾತಿ, ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಬುಡಕಟ್ಟು ಭಾಷೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನದ ಉದ್ದೇಶದಿಂದ ರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿರುವ ಸಂಶೋಧನಾ ಕಾರ್ಯಗಳು ಅಭಿನಂದನಾರ್ಹವಾಗಿವೆ ಎಂದು ಅವರು ಹೇಳಿದರು.

ಬುಡಕಟ್ಟು ಭಾಷೆಗಳ ಜೀವಂತಿಕೆ, ಮಾತನಾಡುವವರ ಸಂಖ್ಯೆ, ಭೌಗೋಳಿಕ ವ್ಯಾಪ್ತಿ, ಪೀಳಿಗೆಯಿಂದ ಪೀಳಿಗೆಗೆ ಭಾಷೆಯ ವರ್ಗಾವಣೆ, ಶಿಕ್ಷಣದಲ್ಲಿ ಭಾಷೆಯ ಬಳಕೆ, ಲಿಖಿತ ಸಂಪನ್ಮೂಲಗಳು, ಡಿಜಿಟಲ್ ಸಂಪನ್ಮೂಲಗಳು ಹಾಗೂ ಈಗಾಗಲೇ ನಡೆದಿರುವ ದಾಖಲಾತಿಯ ಸ್ಥಿತಿಗತಿಗಳನ್ನು ಒಳಗೊಂಡ ಸಮಗ್ರ ಭಾಷಾ ಪ್ರೊಫೈಲ್ ರೂಪಿಸುವ ಅಗತ್ಯವಿದೆ. ಪ್ರತಿಯೊಂದು ಬುಡಕಟ್ಟು ಭಾಷೆಯ ಸ್ಥಿತಿಗತಿಯನ್ನು ವೈಜ್ಞಾನಿಕವಾಗಿ ಗುರುತಿಸಿ, ಅದರ ಆಧಾರದ ಮೇಲೆ ಸಂರಕ್ಷಣೆ, ಪುನರುಜ್ಜೀವನ ಮತ್ತು ಅಭಿವೃದ್ಧಿಗೆ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಿದರೆ ಹೆಚ್ಚಿನ ಪರಿಣಾಮಕಾರಿತ್ವ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.ಬುಡಕಟ್ಟು ಭಾಷೆ, ಸಂಸ್ಕೃತಿ ಸಂರಕ್ಷಣೆಗೆ ರಾಷ್ಟ್ರೀಯ ಸಂಕಲ್ಪ ಅಗತ್ಯ:-ದುರ್ಗಾ...

ಮೈಸೂರು ಹಾಗೂ ಕೊಡಗು ಲೋಕಸಭಾ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ, ಕರ್ನಾಟಕದಲ್ಲಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ, ಈ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಎಲ್ಲಾ ಸಮುದಾಯಗಳ ಅಭಿವೃದ್ಧಿ ಸಾಧಿಸಿದಾಗ ಮಾತ್ರ ‘ವಿಕಸಿತ ಭಾರತ’ದ ಗುರಿ ಸಾಕಾರವಾಗಲಿದೆ. ಭಾರತದ ಇತಿಹಾಸದುದ್ದಕ್ಕೂ ಬುಡಕಟ್ಟು ಸಮುದಾಯಗಳು ನೀಡಿರುವ ಕೊಡುಗೆ ಅಪಾರವಾಗಿದೆ. ವಿಕಸಿತ ಭಾರತ ನಿರ್ಮಾಣದಲ್ಲಿಯೂ ಅವರ ಪಾತ್ರ ಮಹತ್ವದ್ದಾಗಿರಲಿದೆ ಎಂದು ಹೇಳಿದರು.

ಭಾಷಾ ಸಂರಕ್ಷಣೆ ಕೇವಲ ಭಾಷೆಯ ಉಳಿವಿಗೆ ಮಾತ್ರವಲ್ಲದೆ, ಸ್ಥಳೀಯ ಸಂಸ್ಕೃತಿ, ಜ್ಞಾನ ಮತ್ತು ಪರಂಪರೆಯ ಸಂರಕ್ಷಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಸರ್ಕಾರ ಅಥವಾ ಇತರರು ಬುಡಕಟ್ಟು ಸಮುದಾಯಗಳಿಗಾಗಿ ಏನು ಮಾಡಬಹುದು ಎಂಬುದರ ಕುರಿತು ಚರ್ಚಿಸುತ್ತೇವೆ. ಆದರೆ ವಿಕಸಿತ ಭಾರತ ನಿರ್ಮಾಣಕ್ಕೆ ಬುಡಕಟ್ಟು ಸಮುದಾಯಗಳು ನೀಡಬಹುದಾದ ಕೊಡುಗೆಯ ಬಗ್ಗೆಯೂ ಸಮಾನವಾಗಿ ಚರ್ಚಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಎಂಬುದನ್ನು ನಾವು ಸಾಮಾನ್ಯವಾಗಿ ಹೇಳುತ್ತೇವೆ. ಆದರೆ ಭಾರತದ ಏಕತೆ ವಿವಿಧ ರೂಪಗಳಲ್ಲಿ ವ್ಯಕ್ತವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಒಂದೇ ಮೂಲದಿಂದ ವಿವಿಧ ರೂಪಗಳು ಮತ್ತು ಪರಂಪರೆಗಳು ಬೆಳೆದು ಬಂದಿವೆ. ಆ ಪ್ರಾಚೀನ ಭಾರತೀಯ ಚಿಂತನೆ, ಜ್ಞಾನ ಮತ್ತು ಪರಂಪರೆಯ ಮೂಲಭೂತ ಸ್ವರೂಪವನ್ನು ಇಂದಿಗೂ ಹತ್ತಿರವಾಗಿ ಉಳಿಸಿಕೊಂಡಿರುವ ಸಮುದಾಯಗಳಲ್ಲಿ ಬುಡಕಟ್ಟು ಸಮುದಾಯಗಳು ಪ್ರಮುಖವಾಗಿವೆ ಎಂದು ಹೇಳಿದರು.

ಪರಿಶಿಷ್ಟ ಪಂಗಡಗಳು ಹಾಗೂ ಬುಡಕಟ್ಟು ಜನಾಂಗಗಳು ತಮ್ಮ ಭಾಷೆಗಳ ಮೂಲಕ ಭಾರತೀಯ ಪರಂಪರೆ, ಚಿಂತನೆ ಮತ್ತು ಪ್ರಕೃತಿಯೊಂದಿಗಿನ ಸಂಬಂಧವನ್ನು ಅಭಿವ್ಯಕ್ತಪಡಿಸುತ್ತಿವೆ. ಪ್ರಕೃತಿಯೊಂದಿಗೆ ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿರುವ ಸಮುದಾಯಗಳೆಂದರೆ ಬುಡಕಟ್ಟು ಸಮುದಾಯಗಳು. ಆದ್ದರಿಂದ ಅವರ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸುವುದು ಅತ್ಯಂತ ಅಗತ್ಯ ಎಂದರು.ಬುಡಕಟ್ಟು ಭಾಷೆ durgadas

ಕರ್ನಾಟಕದಲ್ಲಿಯೂ ಬುಡಕಟ್ಟು ಸಮುದಾಯಗಳ ಕಲೆ ಮತ್ತು ಸಂಸ್ಕೃತಿಗೆ ಪ್ರಮುಖ ಸ್ಥಾನವಿದೆ. ಮೈಸೂರು ದಸರಾ ಮೆರವಣಿಗೆ ಸೇರಿದಂತೆ ಹತ್ತು ದಿನಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬುಡಕಟ್ಟು ಸಮುದಾಯಗಳ ಹಲವು ಕಲಾ ಪ್ರಕಾರಗಳು ಪ್ರದರ್ಶನಗೊಳ್ಳುತ್ತವೆ. ಇಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ಹೇಳಿದರು.ಸಂಸ್ಕೃತಿ ಸಂರಕ್ಷಣೆಗೆ ರಾಷ್ಟ್ರೀಯ ಸಂಕಲ್ಪ ಅಗತ್ಯ jk02_new jk02 new

ಕಾರ್ಯಕ್ರಮದಲ್ಲಿ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಅನಂತ್ ಪ್ರಕಾಶ್ ಪಾಂಡೆ, ಕರ್ನಾಟಕ ಬೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರಾಮಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ  ಕನಗವಲ್ಲಿ, ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಬಸವರಾಜ್ ಕೋಡಗುಂಟಿ, ಪರಿಶಿಷ್ಟ ಪಂಗಡಗ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ. ಅಶೋಕ್, ಜಂಟಿ ನಿರ್ದೇಶಕರ ಡಾ.ರಾಜ್ ಕುಮಾರ್, ಉಪ ನಿರ್ದೇಶಕ  ಹೆಚ್.ಎಸ್ ಗಿರಿಜಾಂಬ ಸೇರಿದಂತೆ ವಿವಿಧ ಬುಡಕಟ್ಟು ಸಮುದಾಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Key words: Mysore, National resolution,  preserve, tribal language, Durgadas Uiki