ಮೈಸೂರು,ಡಿಸೆಂಬರ್,5,2025 (www.justkannada.in): ಸಂವಿಧಾನ ಶಿಲ್ಪಿ ಡಾ. ಬಿ.ಆರ್ ‘ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಿಳಿಸಲು ಮತ್ತು ಪ್ರಚುರ-ಪಡಿಸಲು, ತರಬೇತಿ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲು ಹಾಗೂ ಸಂಶೋಧನೆಗೆ ಅನುವಾಗುವಂತೆ ಕಾರ್ಯನಿರ್ವಹಿಸುವುದಕ್ಕಾಗಿ ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿಯ ಯಲಚಹಳ್ಳಿಯಲ್ಲಿ ಅಂಬೇಡ್ಕರ್ ಸ್ಮಾರಕ ವಸ್ತುಸಂಗ್ರಹಾಲಯ (ಮ್ಯೂಸಿಯಂ) ಹಾಗೂ ಸಂಶೋಧನಾ ಸಂಸ್ಥೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಪ್ಲಾನ್ ರೂಪಿಸಿದೆ. 
ಈ ಕುರಿತು ಪ್ರತಿಕ್ರಿಯಿಸಿ ಮಾಹಿತಿ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಈ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ಆ ಗ್ರಾಮದಲ್ಲಿನ ಸರ್ವೇ ನಂ.24ರಲ್ಲಿ 10 ಎಕರೆ ಜಮೀನನ್ನು ಗುರುತಿಸಲಾಗಿದೆ. ಅಲ್ಲದೆ ಈ ಜಾಗವನ್ನು ಕಂದಾಯ ಇಲಾಖೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ಮಂಜೂರು ಮಾಡಲಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ.ಎಚ್.ಸಿ.ಮಹದೇವಪ್ಪ ಅವರ ಪರಿಕಲ್ಪನೆಯ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಈಗಾಗಲೇ ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವು ಮಾನಸಗಂಗೋತ್ರಿಯಲ್ಲಿ ರಚನಾತ್ಮಕ ಹಾಗೂ ಶೈಕ್ಷಣಿಕ ನೆಲೆಗಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಅಂಬೇಡ್ಕರ್ ಅವರನ್ನು ಪರಿಚಯಿಸುವ ಮತ್ತು ಅವರ ಕೊಡುಗೆಗಳನ್ನು ತಿಳಿಸಿಕೊಡುವ, ಅಂಬೇಡ್ಕರ್ ಪ್ರಜ್ಞೆಯನ್ನು ಬೆಳೆಸು ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆಯು ಮ್ಯೂಸಿಯಂ ಹಾಗೂ ಸಂಶೋಧನಾ ಸಂಸ್ಥೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.
ಯೋಜನೆಗೆ ₹ 10 ಕೋಟಿ ಒದಗಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ ಎನ್ನಲಾಗಿದ್ದು, ಕಲಬುರಗಿಯಲ್ಲಿರುವ ‘ಬುದ್ಧ ವಿಹಾರ’ದ ಮಾದರಿಯಲ್ಲಿ ‘ಅಂಬೇಡ್ಕರ್ ವಿಹಾರ’ದಂತೆ ಇದು ರೂಪಗೊಳ್ಳಬೇಕು ಎನ್ನುವುದು ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರ ಆಶಯವಾಗಿದೆಯಂತೆ.
Key words: Mysore: Plan, construction, Dr. BR Ambedkar, Museum, Research Institute







