ಮೈಸೂರು ಸೆಪ್ಟೆಂಬರ್, 9,2026 (www.justkannada.in): ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯ ವೇಳೆ ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಕಲಾವಿದರು ಭಾಗಿಯಾಗುವರು ಎಂದು ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಚಲನಚಿತ್ರ ರಂಗದ ಪದಾಧಿಕಾರಿಗಳ ಜೊತೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಡಿಸಿ ಲಕ್ಷ್ಮೀಕಾಂತ ರೆಡ್ಡಿಅವರು ಮಾತನಾಡಿದರು. ಮುಖ್ಯಮಂತ್ರಿಗಳ ಆಶಯದಂತೆ ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ನಟ ನಟಿಯರು ಕಲಾವಿದರು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಅಂಬಾರಿ ಬಸ್ ನಲ್ಲಿ ಜಂಬೂ ಸವಾರಿಯ ದಿನ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಗುವುದು ಎಂದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ನಟಿ ಡಾ.ಜಯಮಾಲಾ ಅವರು ಮಾತನಾಡಿ ಚಲನಚಿತ್ರ ರಂಗವು 93 ವರ್ಷಗಳಿಂದ ನಡೆದು ಬಂದ ಹಾದಿ ಕುರಿತ ಮಾಹಿತಿಯನ್ನು ಹೊತ್ತ ಸ್ತಬ್ಧ ಚಿತ್ರವನ್ನು ನಿರ್ಮಾಣ ಮಾಡಲಾಗುವುದು. ಈ ಸ್ತಬ್ಧ ಚಿತ್ರದಲ್ಲಿ 30 ಪ್ರಖ್ಯಾತ ಕನ್ನಡ ಚಲನ ಚಿತ್ರನಟ ನಟಿಯರು ಮೆರವಣಿಗೆಯಲ್ಲಿ ಅಭಿಮಾನಿಗಳಿಗೆ ಕೈಬೀಸುವರು ಎಂದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಆಧ್ಯಕ್ಷ ಸಾ.ರಾ ಗೋವಿಂದು ಅವರು ಮಾತನಾಡಿ ಕನ್ನಡ ಚಲನ ಚಿತ್ರ ರಂಗದ ಕಲಾವಿದರನ್ನು ಕರೆಸಿ ದಸರಾ ಮಹೋತ್ಸವದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಬೇಕು. ಕರ್ನಾಟಕ ಚಲನಚಿತ್ರ ರಂಗ ನಡೆದು ಬಂದ ಹಾದಿಯ ಕುರಿತು ಪ್ರದರ್ಶನ ಏರ್ಪಡಿಸಬೇಕು ಎಂದು ಮನವಿ ಮಾಡಿದರು.
ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ರಾಕ್ ಲೈನ್ ವೆಂಕಟೇಶ್ ಅವರು ಮಾತನಾಡಿ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ ಐ, ಆರ್ ಡಿ ನಿರ್ದೇಶಕ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಚಲನಚಿತ್ರ ಮಂಡಳಿಯ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Kannada film industry, artists, Dasara, Mysore DC, Laxmikantha Reddy






