ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ: ಕಾವೇರಿ, ರೂಪಾ ಆನೆಗಳು ಸಾಥ್

ಮೈಸೂರು,ಅಕ್ಟೋಬರ್,2,2025 (www.justkannada.in):  ಅರಮನೆ ನಗರಿ,   ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಂಪ್ರದಾಯಿಕ ಗತವೈಭವ ಕಳೆಗಟ್ಟಿದ್ದು ಈಗಾಗಲೇ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಕ್ಕಿದೆ. ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ವಿರಾಜಮಾನರಾಗಿರುವ ಚಿನ್ನದ ಅಂಬಾರಿಯನ್ನ ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜಪಥದಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ.

ಅಂಬಾರಿ ಹೊತ್ತು ಸಾಗುತ್ತಿರುವ ಅಭಿಮನ್ಯುವಿಗೆ ಕುಮ್ಕಿ ಆನೆಗಳಾಗಿ ಕಾವೇರಿ, ರೂಪಾ ಆನೆಗಳು ಸಾಥ್ ನೀಡಿವೆ.  ಜಂಬೂಸವಾರಿ ಮೆರವಣಿಗೆ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಸುಮಾರು 5.3 ಕಿ.ಮೀ. ದೂರ ಸಾಗುತ್ತಿದೆ.

ಮೆರವಣಿಗೆಯುದ್ದಕ್ಕೂ ಸ್ತಬ್ದಚಿತ್ರಗಳು, ಕಲಾತಂಡಗಳು ನೋಡುಗರ ಮನಸೂರೆಗೊಳ್ಳುತ್ತಿದ್ದು ಲಕ್ಷಾಂತರ ಜನ ಜಂಬೂಸವಾರಿ ವೈಭವವನ್ನ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಜಂಬೂ ಸವಾರಿ ವೀಕ್ಷಣೆಗೆ ಎಲ್ಲಾ ಕಡೆಗಳಲ್ಲೂ ಪ್ರವಾಸಿಗರ ದಂಡೇ ಹರಿದು ಬಂದಿದೆ.   ಕ್ಯಾಪ್ಟನ್ ಅಭಿಮನ್ಯು 6ನೇ ಬಾರಿಗೆ ಅಂಬಾರಿ ಹೊತ್ತು ಸಾಗುತ್ತಿದ್ದು,  ಜಂಬೂಸವಾರಿ ಬನ್ನಿಮಂಟಪಕ್ಕೆ ಸಾಗಿದ ನಂತರ ನಾಡಹಬ್ಬ ಮೈಸೂರು ದಸರಾಗೆ ತೆರೆ ಬೀಳಲಿದೆ.

Key words: Mysore dasara, Jambu savari, Captain, Abhimanyu, Ambari