ಕೊರೋನಾ ಎಫೆಕ್ಟ್: ಈ ಬಾರಿ ಮೈಸೂರು ದಸರಾ ವಜ್ರಮುಷ್ಠಿ ಕಾಳಗ ರದ್ದು….

ಮೈಸೂರು,ಅಕ್ಟೋಬರ್,13,2020(www.justkannada.in):  ಕೊರೋನಾ ಮಹಮಾರಿಯಿಂದಾಗಿ ಈ ಬಾರಿ ಮೈಸೂರು ದಸರಾವನ್ನ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದ್ದು,  ಜಂಬೂ ಸವಾರಿ ಅರಮನೆ ಆವರಣಕ್ಕೆ ಸೀಮಿತವಾಗಿದೆ.jk-logo-justkannada-logo

ರಾಜ್ಯದಲ್ಲಿ ಕೊರೋನಾ ಹರಡುತ್ತಿರುವ ಹಿನ್ನೆಲೆ ಮೈಸೂರು ದಸರಾ ವೇಳೆ ನಡೆಯುತ್ತಿದ್ದ ಹಲವು ಕಾರ್ಯಕ್ರಮಗಳನ್ನ ಈ ಬಾರಿ ಕೈಬಿಡಲಾಗಿದೆ. ಅಂತೆಯೇ ಪ್ರತಿವರ್ಷ ದಸರಾ ಜಂಬೂ ಸವಾರಿ ಮೆರವಣಿಗೆಯ ದಿನದಂದು ಬೆಳಿಗ್ಗೆ ಅರಮನೆಯ ಒಳ‌ ಆವರಣದ ಸವಾರಿ ತೊಟ್ಟಿಯಲ್ಲಿ ನಡೆಯುತ್ತಿದ್ದ ವಜ್ರಮುಷ್ಠಿ ಕಾಳಗವನ್ನೂ ರದ್ದು ಮಾಡಲಾಗಿದೆ.

ರಾಜಮನೆತನಕ್ಕೆ ನಿಷ್ಠೆಯಾಗಿ ಜಟ್ಟಿ ಜನಾಂಗದವರಿಂದ ಪ್ರತಿವರ್ಷ ದಸರಾ ಜಂಬೂ ಸವಾರಿ ದಿನ ವಜ್ರಮುಷ್ಠಿ ಕಾಳಗ ನಡೆಯುತ್ತಿತ್ತು. ಕೊರೊನಾ ವೈರಸ್ ಸೋಂಕು ಹರಡುವ ಭೀತಿಯ ಹಿನ್ನೆಲೆ ರಾಜಮನೆತನ ಈ ಬಾರಿ ವಜ್ರಮುಷ್ಠಿ ಕಾಳಗ ಬೇಡ  ಎಂದು ಹೇಳಿದೆ.

ವಜ್ರಮುಷ್ಠಿ ಕಾಳಗ ನೋಡಲು ನೂರಾರು ಜನ ಸೇರುತ್ತಾರೆ, ಹೀಗಾಗಿ ಈ ಬಾರಿ ಕಾಳಗ ಬೇಡ ಎಂದು ರಾಜಮನೆತನವರು ತಿಳಿಸಿದ್ದು, ವಜ್ರಮುಷ್ಠಿ ಕಾಳಗಕ್ಕೆ ಭರ್ಜರಿ ತಯಾರಿ ನಡೆಸಿದ್ದ ಜಟ್ಟಿಗಳಿಗೆ ನಿರಾಸೆ ಉಂಟಾಗಿದೆ. ವಜ್ರಮುಷ್ಠಿ ಕಾಳಗಕ್ಕೆ ಜಗಜಟ್ಟಿಗಳು ಕಳೆದ 6 ತಿಂಗಳಿಂದ ಸಿದ್ದತೆ ನಡೆಸಿದ್ದರು. ಆದರೆ ಈ ಕೊರೋನಾದಿಂದಾಗಿ ಈ ವಜ್ರಮುಷ್ಠಿ ಕಾಳಗ ರದ್ದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜಟ್ಟಿಕಾಳಗ ಉಸ್ತಾದ್ ಟೈಗರ್ ಬಾಲಾಜಿ, ಅಪಾಯದ ಮುನ್ಸೂಚನೆಯಿಂದ ರಾಜಮಾತೆಯವರು ನಿರ್ಧಾರ ತೆಗೆದುಕೊಂಡಿದ್ದಾರೆ. ಒಳ್ಳೆಯ ನಿರ್ಧಾರವೇ ಆಗಿದೆ. ಆದ್ರೆ ನಮಗೆ ಬೇಸರ ಎಂದರೆ ಇತಿಹಾಸದಲ್ಲಿ ಇದೇ ಮೊದಲು ವಜ್ರಮುಷ್ಠಿ ಕಾಳಗ ಇಲ್ಲವಾಗಿದೆ. ನಾವು ದಸರೆಗಾಗಿ ಸಾಕಷ್ಟು ಕಸರತ್ತು ಮಾಡಿ ತಯಾರಾಗಿದ್ದೆವು. ಆದ್ರೀಗ ಕೊರೊನಾ ಬಂದು ನಮಗೆ ಬೇಸರವಾಗಿದೆ. ನಮ್ಮ ರಾಜಮನೆತನದವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದರಾಗುತ್ತೇವೆ ಎಂದಿದ್ದಾರೆ.

Key words: mysore dasara-jamboo savari-varjamusti kalaga-cancel