ಮೈಸೂರು ದಸರಾ: ಸೆ.22ರಿಂದ 9 ದಿನಗಳ ಕಾಲ ಪುಸ್ತಕ ಮೇಳ

ಮೈಸೂರು, ಸೆಪ್ಟಂಬರ್,19,2025 (www.justkannada.in): ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ದಸರಾ ಮಹೋತ್ಸವ ಸಮಿತಿ ಹಾಗೂ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಸೆ.22ರಿಂದ ಅ.1ರವರೆಗೆ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಅವರು ತಿಳಿಸಿದರು.

ನಗರದ ಕಲಾಮಂದಿರದಲ್ಲಿರುವ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಪುಸ್ತಕ ಮೇಳ ಕುರಿತಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಪ್ರಮುಖ ಭಾಗವಾಗಿ ಪ್ರತಿ ವರ್ಷವು ಪುಸ್ತಕ ಮೇಳ ನಡೆಯಲಿದ್ದು, ಈ ಬಾರಿ ಹಿಂದೆಂದಿಗಿಂತಲೂ ವಿಭಿನ್ನವಾಗಿ ಪುಸ್ತಕ ಪ್ರದರ್ಶನವನ್ನು ಆಯೋಜಿಸಲಾಗಿದೆ. ಪ್ರತಿ ದಿನವೂ ವಿಶೇಷತೆಯನ್ನು ಹೊಂದಿರುವ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಸಂಜೆ 5 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಅವರು ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ಕನ್ನಡ ಮತ್ತು ಸಂಸ್ಕೃತಿ‌ಇಲಾಖೆಯ ಕಾರ್ಯದರ್ಶಿ ಎಂ.ವಿ. ವೆಂಕಟೇಶ್, ನಿರ್ದೇಶಕರಾದ ಕೆ.ಎಂ.ಗಾಯಿತ್ರಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು‌.

ಪ್ರತಿ‌ನಿತ್ಯ ಬೆಳಿಗ್ಗೆ 10 ರಿಂದ ರಾತ್ರಿ 8.30 ರವರೆಗೆ ನಡೆಯಲಿರುವ ಪುಸ್ತಕ ಪ್ರದರ್ಶನ‌ ಮತ್ತು ಮಾರಾಟ ಮೇಳದಲ್ಲಿ ನಿತ್ಯವೂ ವಿಶೇಷತೆ ಹೊಂದಿದ್ದು, ಸಾಹಿತಿಗಳೊಂದಿಗೆ ಸೆಲ್ಫಿ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಗೋಷ್ಠಿಗಳು ನಡೆಯಲಿದೆ. ಜೊತೆಗೆ ಪ್ರತಿ‌ದಿನ ಬೆಳಿಗ್ಗೆ 11ಗಂಟೆಗೆ ಇದುವರೆವಿಗೂ ಬಿಡುಗಡೆ ಕಾಣದಿರುವ ವಿವಿಧ ಪುಸ್ತಕಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡುವ ಮೂಲಕ ಲೇಖಕರನ್ನು ಪ್ರೋತ್ಸಾಹಿಸಲಾಗುವುದೆಂದರು.

ಪುಸ್ತಕ ಮೇಳ ಉದ್ಘಾಟನೆಗೂ ಮುನ್ನ ಬೆಳಿಗ್ಗೆ 10.30 ಕ್ಕೆ ಚಾಮುಂಡಿ ಬೆಟ್ಟದ ಆವರಣದಲ್ಲಿ ನಡೆಯಲಿರುವ‌ ದಸರಾ‌ ಉದ್ಘಾಟನಾ‌ ಸಮಾರಂಭದಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರ ಕುರಿತು ಬರೆದಿರುವ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡಿರುವ ಲೇಖಕ ಶಿವಾನಂದ್ ಅವರ ಬದುಕು ಬರೆಹ ಎಂಬ 350 ಪುಟ ಹೊಂದಿರುವ ಪುಸ್ತಕವನ್ನು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಲಿದ್ದಾರೆ ಎಂದರು.

ಇನ್ನು ಲೇಖಕರು, ಪ್ರಕಾಶಕರಿಗೆ ಸಂಪರ್ಕ ಸೇತುವೆಯಾಗಿ ಪುಸ್ತಕ ಮೇಳ ಆಯೋಜನೆಗೊಂಡಿದ್ದು, ಒಟ್ಟು 90 ಮಳಿಗೆಗಳಲ್ಲಿ‌ಸುಮಾರು 50 ಸಾವಿರ ಪುಸ್ತಕಗಳು, ಓದುಗರನ್ನು ಸೆಳೆಯಲಿದ್ದು,

ಪುಸ್ತಕ ಪ್ರೇಮಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಮೈಸೂರು ನಗರದಾದ್ಯಂತ ಸಂಚರಿಸಲು ಸೆ.20 ರಂದು ಬೆಳಿಗ್ಗೆ 11 ಗಂಟೆಗೆ ಮಾನಸ ಗಂಗೋತ್ರಿಯಲ್ಲಿರುವ ಕುವೆಂಪು ಪ್ರತಿಮೆ ಮುಂಭಾಗದಿಂದ ಪುಸ್ತಕ ರಥವು ಸಂಚರಿಸಲಿದ್ದು, ಜಿಲ್ಲಾಧಿಕಾರಿಯವರು ಈ ರಥಕ್ಕೆ ಚಾಲನೆ ನೀಡಲಿದ್ದಾರೆ.

ಸಾಹಿತಿಗಳೊಂದಿಗೆ ಸೆಲ್ಪಿ

ಸೆ. 23ರಂದು ಡಾ.ಎಲ್.ಎನ್.ಮುಕುಂದರಾಜ್, ವಸುಧೇಂದ್ರರವರು, ಸೆ.24ರಂದು ಡಾ.ಸುಕನ್ಯಾ ಮಾರುತಿ, ಡಾ.ರಾಜಪ್ಪದಳವಾಯಿವರು, ಸೆ.25ರಂದು ನರಸಿಂಹಮೂರ್ತಿರವರು, ಸೆ.26ರಂದು ಶಂಕರ್ ಅಶ್ವತ್ ರವರು, ಸೆ.28ರಂದು ಪ್ರೊ.ಎಂ.ಕೃಷ್ಣೇಗೌಡರವರು, ಸೆ.29ರಂದು ಡಾ.ಅರವಿಂದ ಮಾಲಗತ್ತಿರವರು ಹಾಗೂ ಸೆ.30ರಂದಿ ಡಾ.ಟಿ.ವಿ.ವೆಂಕಟಾಚಲಶಾಸ್ತ್ರೀರವರು ಪ್ರತಿ ಮಳಿಗೆಗಳಿ ಭೇಟಿ ನೀಡಿ ಸಾಹಿತಿಗಳೊಂದಿಗೆ ಸೆಲ್ಫಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ

ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ‌ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ‌ ಯಕ್ಷಗಾನ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರಿನ ಕರ್ನಾಟಕ ಲಲಿತ ಕಲಾ ಅಕಾಡೆಮಿ, ಸಂತಕವಿ ಕನಕದಾಸ ಮತ್ತು ಬೆಂಗಳೂರಿನ ತತ್ವ ಪದಕಾರರ ಅಧ್ಯಯನ ಕೇಂದ್ರ ಹಾಗೂ ಯುವರಾಜ ಕಾಲೇಜಿನ ಸಹಯೋಗದೊಂದಿಗೆ ರಾಷ್ಟ್ರಕವಿ ಕುವೆಂಪು ವೇದಿಕೆಯಲ್ಲಿ ವಿಚಾರ ಗೋಷ್ಠಿ ಹಾಗೂ ಸಾಂಸ್ಕೃತಿಕ‌ ಕಾರ್ಯಕ್ರಮವು ಪ್ರತಿ‌ದಿನ‌ ಸಂಜೆ 4.30 ಕ್ಕೆ  ನಡೆಯಲಿದೆ ಎಂದರು.

ಅಂತೆಯೇ, ಸೆ.23ರಂದು ವಸುಧೇಂದ್ರ, ಪ್ರೀತಿ‌ನಾಗರಾಜ್, ಮಂಜುಳಾ ಕಿರುಗಾವಲು, ಡಾ.ಸಿದ್ದರಾಮ್ ಹೊನ್ನಲ್ ಅವರಿಂದ ಬಾನು ಮುಷ್ತಾಕ್ ಬದುಕು ಬರಹ ಕುರಿತ ಚರ್ಚೆ ನಡೆಯಲಿದ್ದು, ಸೆ.24ರಂದು ರಾಯಚೂರಿನ ಕೆ.ವಿ.ಪ್ರಭಾ ಮತ್ತಿ ತಂಡದವರಿಂದ ಭಾವಗೀತೆ ಗಾಯನ, ಸೆ.25ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ, ಕರ್ನಾಟಕ ಸಂಗೀತ‌ ನೃತ್ಯ ಅಕಾಡೆಮಿರವರಿಂದ ಕವಿಗೋಷ್ಠಿ ಮತ್ತು ಕುಂಚ ಕಾವ್ಯ ಗಾಯನ, ಸೆ.26ರಂದು ಮೈಸೂರಿನ ಜಿ.ಆರ್.ಶ್ರೀ ವತ್ಸ ಮತ್ತು ತಂಡದವರಿಂದ ಜನಪದ ಗೀತೆಗಳ ಗಾಯನ, ಸೆ.27ರಂದು ಯುವರಾಜ ಕಾಲೇಜು ವಿದ್ಯಾರ್ಥಿಗಳಿಂದ ನನ್ನ ಮೆಚ್ಚಿನ ಪುಸ್ತಕದ ಓದು, ಸೆ.28ರಂದು ಮೈಸೂರಿನ ವೃಕ್ಷ ಟ್ರಸ್ಟ್ ಅವರಿಂದ ರಂಗ ಗೀತೆಗಳ ಗಾಯನ, ಸೆ.29ರಂದು ಬೆಂಗಳೂರಿನ ತೌಲನಿಕ ಅಧ್ಯಯನ ಸಂತಕವಿ ಕನಕದಾಸ ಮತ್ತು ತತಗವ ಪದಕಾರರ ಅಧ್ಯಯನ‌ ಕೇಂದ್ರದವರಿಂದ ಬಸವಣ್ಣ ಮತ್ತು ಕನಕದಾಸರ ಕುರಿತ ವಿಚಾರ ಸಂಕಿರಣ, ಸೆ.30ರಂದು ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಕೃಷ್ಣಮೂರ್ತಿ ಶಾಸ್ತ್ರಿ ಮತ್ತು ತಂಡದವರಿಂದ ಕಂಸವಧೆ ಯಕ್ಷಗಾನ ಪ್ರಸಂಗ ಕುರಿತು ಸಾಂಸ್ಕೃತಿಕ‌ ಕಾರ್ಯಕ್ರಮಗಳು ನೆರವೇರಲಿದೆ ಎಂದು ವಿವರಿಸಿದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮ- ಸೆ.23ರಂದು ಹೆಚ್.ನಾಗವೇಣಿ ಅವರ ಗಾಂದು ಬಂದ, ಬಿ.ಶ್ರೀಪಾದ್ ಭಟ್ ಅವರ ವಿಮೋಚಕಿಯ ಕನಸುಗಳು ಸಾವಿತ್ರಿಬಾಯಿ ಪುಲರ ಬದುಕು-ಹೋರಾಟ, ರಹಮತ್ ತರೀಕೆರೆ‌ ಅವರ ಕುಲುಮೆ ಎಂಬ ಪುಸ್ತಕವನ್ನು ಸಾಹಿತಿಯವರಾದ ಡಾ.ಕೃಷ್ಙ ಮನವಲ್ಲಿ ಅವರು ಬಿಡುಗಡೆ ಮಾಡಲಿದ್ದು, ಅಂತೆಯೇ ಸೆ.24ರಂದು ಪುರುಷೋತ್ತಮ ಬಿಳಿಮಲೆ ಅವರ ಕಾಗೆ ಮುಟ್ಟಿದ ನೀರು, ಸುಮಲತಾ ಗಡಿಯಪ್ಪನವರ ಪುಟ್ಟನ ದಸರಾ, ಭವ್ಯ ಟಿ.ಎಸ್ ರವರ ವಸುಂಧರೆ, ನಳಿನಾ ಡಿ ಅವರ ಭಾವ ಬೆಳಕು ಎಂಬ ಪುಸ್ತಕವನ್ನು ಸಾಹಿತಿ ಕೃಷ್ಣಮೂರ್ತಿ ಹನೂರು ಅವರು ಬಿಡುಗಡೆ ಮಾಡಲಿದ್ದಾರೆ.

ಸೆ.25ರಂದು ಸಣ್ಣರಾಮ ಅವರ ನಾನೆಂಬುದು ನಾನಲ್ಲ ಪುಸ್ತಕವನ್ನು ಸಾಹಿತಿ ಸತ್ಯಮಂಗಲ ಮಾದೇವ, ಮೇಟಿ ಮಲ್ಲಿಕಾರ್ಜುನ ಅವರ ನಾವು ನಮ್ಮ‌ನುಡಿ ಪುಸ್ತಕವನ್ನು ಡಾ.ಬಸುಬೇವಿನಗಿಡದ, ಕೆ.ವೈ. ನಾರಾಯಣ ಸ್ವಾಮಿ ಅವರ ನೀವು ಕಾಣಿರೇ ಮತ್ತು ಮಲ್ಲಿಗೆ ಪುಸ್ತಕವನ್ನಿ ಮಮತ ಜಿ ಸಾಗರ ಅವರು ಬಿಡುಗಡೆ‌ಮಾಡಲಿದ್ದು, ಸೆ.26ರಂದು ಡಾ.ನರಸಿಂಹಮೂರ್ತಿ ಹೂವಿನಹಳ್ಳಿ ಅವರ ತುಂಬಿ ಬಂದಿತ್ತ ಬೇಂದ್ರೆ ಕಾವ್ಯದ ಅಧ್ಯಯನ, ಪ್ರೊ.ಜಿ.ಅಬ್ದುಲ್ ಬಷೀರ್ ಅವರ ಚಿಂತನ‌ ಮತ್ತು ಮನದಂಗಳದ ಮಾತುಕತೆ, ಡಾ.ರೇಣುಕಾತಾಯಿ ಅವರ ದಿಲ್‌ಕಶಗ ಗಜಲ್ ಪುಸ್ತಕವನ್ನು ಡಾ.ಬೋರೇಗೌಡ ಚಿಕ್ಕಮರಳಿ ಅವರು ಬಿಡುಗಡೆ ಮಾಡಲಿದ್ದಾರೆ.

ಸೆ.27ರಂದು ಎಂ.ಆರ್.ಮಂಜುನಾಥ್ ಅವರ ಅಕ್ಷರಗಳ ಪಯಣ, ಅರ್ಚನಾ ಪಾಟಿಳ ಅವರ ಲಾಸ್ಡ್ ಚಾನ್ಸ್ ಬದಲಾಗೋಕೆ, ಡಾ.ಗುಣವಂತ ಮಂಜು ಅವರ ಪದ್ಯದಂಗಡಿ, ಮಹೇಶ್ ಕುಮಾರ್ ಪಿ ಅವತ ಅವ್ಯಕ್ತ ಪುಸ್ತಕವನ್ನು ಜೀನಹಳ್ಳಿ ಸಿದ್ದಲಿಂಗಪ್ಪ ಅವರು ಬಿಡುಗಡೆ ಮಾಡಿದರೆ, ಸೆ.28ರಂದು ಅಶೋಕ ಪಿ ಮಣಿ ಅವರ ಅಮೃತ ಸಿಂಚನ, ಪ್ರಮೋದ ಕರಣಂ ಅವರ ಹುಟ್ಟು ಸಾವು ಎರಡರ ನಡುವೆ, ಜ್ಯೋತಿ ಬದಾಮಿ ಅವರ ಕುಂಬಳಕಾಯಿ ಕಳ್ಳ ಅಂದ್ರೆ, ವಿನೋದ್ ಕೆ.ಎಲ್ ಅವರ ತುಪಾಕಿಯ ಪಿಸುಮಾತು ಪುಸ್ತಕವನ್ನು ಹರಿಚರಣ ತಿಲಕ್ ಅವರು ಬಿಡುಗಡೆ ಮಾಡಲಿದ್ದಾರೆ.

ಸೆ.29ರಂದು ಎಸ್.ಸುಂದರ್ ಕಲಿವೀರ್ ಅವರ ಜನರೊಡಲ ಜಂಗಮ, ವಸು ವತ್ಸಲೆ ಅವರ ಮನಸೇ ಥ್ಯಾಂಕ್ಯೂ, ಆರ್.ಸದಾಶಿವಯ್ಯ ಜರಗನಹಳ್ಳಿ ಅವರ ಕಾವ್ಯಧಾರೆ ಪುಸ್ತಕವನ್ನು ಡಾ.ಅನಿತ ಮಂಗಲ ಅವರು ಬಿಡುಗಡೆ ಮಾಡಲಿದ್ದು, ಸೆ.30ರಂದು ಶ್ರೇಯಸ್ ಹೆಚ್.ಎಸ್ ಅವರ ನವಾಬ್ ಹೈದರ್ ಅಲಿಖಾನ್ ಬಹದ್ದೂರ್ ಒಂದು ದಂತ ಕಥೆ, ನವೀನ್ ಸೂರಿಂಜಿ ಅವರ ಸತ್ಯೊಲು ಶ್ರಮಿಕರ ಜನಪದ ಐತಿಹ್ಯ, ಕಮಲಾ‌ ರಾಜೇಶ್ ಅವರ ಮೈಸೂರು ದೊರೆಗಳು ಹಾಗೂ ಮೈಸೂರು ಅರಸರು- ಒಂದು‌ ಪದ್ಯ ಎಂಬ ಪುಸ್ತಕವನ್ನು ಡಾ.ಎಂ.ಜಿ.ಆರ್. ಅರಸ್ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಪುಸ್ತಕ ಮೇಳದ ವಿಶೇಷತೆಗಳನ್ನು ತಿಳಿಸಿದರು.

ಗೋಷ್ಠಿಯಲ್ಲಿ ಸಮನ್ವಯಾಧಿಕಾರಿ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಮೈಸೂರು ವಿವಿ‌ಪ್ರಸಾರಾಂಗದ ನಿರ್ದೇಶಕರಾದ ಡಾ.ನಂಜಯ್ಯ ಹೊಂಗನೂರು, ಆಡಳಿತಾಧಿಕಾರಿ‌ ಕೆ.ಬಿ.ಕಿರಣ್ ಸಿಂಗ್ ಸೇರಿದಂತೆ ಸಮಿತಿ ಸದಸ್ಯರಾದ ರಾಜಶೇಖರ್ ಕದಂಬ, ಚಂದ್ರಶೇಖರ್, ಡಾ.ಮಹೇಶ್ ಚಿಕ್ಕಲೂರು, ಸುಚಿತ್ರಾ, ಮೈ.ನಾ.ಲೋಕೇಶ್, ಕೆ.ಎಸ್.ಶಿವರಾಂ, ರವಿನಂದನ್ ಹಾಗೂ ಪ್ರಮೋದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Key words: Mysore Dasara,  Book fair, 9 days