ಮೈಸೂರು,ಆ.೨೩,೨೦೨೫: ಈ ಸಾಲಿನ ದಸರಾ ಮಹೋತ್ಸವದ ಉದ್ಘಾಟನೆಗೆ ಖ್ಯಾತ ಸಾಹಿತಿ, ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರಕಾರ ಆಯ್ಕೆ ಮಾಡಿರುವ ವಿಷಯವನ್ನು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಪ್ರಕಟಿಸಿದ್ದಾರೆ. ಈ ಆಯ್ಕೆ ಸೂಕ್ತವೆಂದು ಬಹುತೇಕರು ಸ್ವಾಗತಿಸಿದ್ದಾರೆ.
ಈ ನಡುವೆ, ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ಸಂತೋಷದ ವಿಷಯ. ಪ್ರತಿಷ್ಠಿತ ಬೂಕರ್ ಪ್ರಶಸ್ತಿಯ ಗರಿಯನ್ನು ನಾಡಿನ ಮುಕುಟಕ್ಕೆ ತಂದವರು ಅವರು. ಅವರ ಆಯ್ಕೆ ಸೂಕ್ತವಾದದ್ದು. ಹಾಗೆಯೇ ದೀಪಾ ಬಾಸ್ತಿಯವರನ್ನೂ ಆಹ್ವಾನಿಸಬೇಕು. ಅವರಿಬ್ಬರೂ ಸೇರಿ ಉದ್ಘಾಟಿಸಿದರೆ ಇನ್ನೂ ಮೆರಗು ಬರುತ್ತದೆ ಎಂಬ ಕೂಗು ಕೇಳಿ ಬಂದಿದೆ.
ಈ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚದ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ ಹೇಳಿದಿಷ್ಟು..
ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ದಸರಾ ಉದ್ಘಾಟಿಸುವುದು ನಡೆದುಬಂದ ಸಂಪ್ರದಾಯ. ಇದನ್ನು ಗೌರವಿಸುವ ಬದ್ಧತೆ ಉದ್ಘಾಟಕರು ಪ್ರದರ್ಶಿಸಬೇಕು, ಇಲ್ಲದಿದ್ದರೆ ಅದು ಅಪಚಾರ ವಾಗುತ್ತದೆ, ಜನರ ಭಾವನೆ ಘಾಸಿಗೊಳಿಸಿದಂತಾಗುತ್ತದೆ. ಜತೆಗೆ ಬೂಕರ್ ಪ್ರಶಸ್ತಿಗೆ ದೀಪಾ ಭಸ್ತಿಯವರೂ ಸಮಾನ ಪಾಲುದಾರರು. ಬಾನು-ದೀಪ ಅವರುಗಳು ಜಂಟಿಯಾಗಿ ದೀಪ ಬೆಳಗಿದರೆ ಅದು ಅರ್ಥಪೂರ್ಣ. ಸರಕಾರ ಈ ಬಗ್ಗೆ ಆಲೋಚಿಸಲಿ. ಸರ್ಕಾರದ ನಿರ್ಧಾರ ಕನ್ನಡಕ್ಕೆ ದೊರೆತ ಬೂಕರ್ ಪ್ರಶಸ್ತಿಯನ್ನು ಬಿರುಕು ಮೂಡಿಸಿ ವಿಭಜಿಸಿದಂತಾಗಬಾರದು ಎಂದಿದ್ದಾರೆ.
ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ಕರ್ನಾಟಕಕ್ಕೆ “ ಬೂಕರ್ “ ಪ್ರಶಸ್ತಿ ತರುವಲ್ಲಿ ಅನುವಾದಕಿ, ಲೇಖಕಿ ದೀಪಾಬಸ್ತಿ ಅವರ ಪಾತ್ರವೂ ದೊಡ್ಡದೆ. ಅವರೂ ಕರ್ನಾಟಕದ ಮಗಳೇ. ಅವರ ಸಾಧನೆಯನ್ನು ಕಡೆಗಣಿಸಬಾರದು. ಈ ರೀತಿ ಮಾಡುವುದರಿಂದ ಅನುವಾದಕರನ್ನು ಸರಕಾರವೇ ದ್ವಿತೀಯ ಸ್ಥಾನದಲ್ಲಿ ಇಟ್ಟಂತಾಗುತ್ತದೆ. ಈ ಬೇಧ ಭಾವ ಸಲ್ಲದು ಎಂದರು.
ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ.ನಿಂಗರಾಜೇಗೌಡ ಮಾತನಾಡಿ, ಸ್ವತಃ ಬೂಕರ್ ಪ್ರಶಸ್ತಿಯ ನಿರ್ಣಾಯಕರೇ ಪ್ರಶಸ್ತಿಯನ್ನು ಬಾನು ಮುಷ್ತಾಕ್ ಹಾಗೂ ದೀಪಾ ಬಸ್ತಿ ಇಬ್ಬರಿಗೂ ಸಮನಾಗಿ ಹಂಚಿದ್ದಾರೆ. ಅಂದ ಮೇಲೆ ಸರಕಾರ ದಸರಾ ಉದ್ಘಟನೆಗೆ ಆಹ್ವಾನಿಸುವಾಗ ಇಬ್ಬರ ನಡುವೆ ತಾರತಮ್ಯ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕರ್ನಾಟಕಕ್ಕೆ ಬಂದ ಈ ಬೂಕರ್ ಪ್ರಶಸ್ತಿಗೆ ಇಬ್ಬರದೂ ಸಮಪಾಲಿದೆ. ಇಬ್ಬರಿಗೂ ಸೂಕ್ತ ಮನ್ನಣೆ ಸಿಗಬೇಕು ಎಂದರು.
key words: Invite, Booker Prize winners, inauguration, Mysore Dasara-2025, Appeal, CM
SUMMARY:
Invite two Booker Prize winners to the inauguration of Mysore Dasara-2025: Appeal to CM
CM Siddaramaiah himself announced that the state government has selected renowned writer and Booker Prize winner Banu Mushtaq to inaugurate this year’s Dasara festival. Most people have welcomed this choice as appropriate. Meanwhile, it is a matter of joy that Banu Mushtaq has been selected. She is the one who brought the prestigious Booker Prize to the crown of the country. Her choice is appropriate. Similarly, Deepa Basti should also be invited. There have been cries that if both of them inaugurate together, there will be even more excitement.