ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಯಲ್ಲಿ ಮೆರಗು ತಂದ ಕಲಾತಂಡಗಳ ಪ್ರದರ್ಶನ. ಕಣ್ಮನ ಸೆಳೆದ ಸ್ತಬ್ದಚಿತ್ರಗಳು.

ಮೈಸೂರು,ಅಕ್ಟೋಬರ್,15,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ  ಮಹೋತ್ಸವದ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆ ಸರಳವಾಗಿ ನಡೆಯಿತು. ಸಿಂ ಬಸವರಾಜ ಬೊಮ್ಮಾಯಿ ಅವರು ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.

ಬಳಿಕ 750 ಕೆಜಿ ಚಿನ್ನದ ಅಂಬಾರಿಯನ್ನ ಹೊತ್ತು ಕ್ಯಾಪ್ಟನ್ ಅಭಿಮನ್ಯು  ರಾಜಗಾಂಭೀರ್ಯದಿಂದ ಹೆಜ್ಜೆ  ಹಾಕಿದನು. ಕೊರೋನಾ ಹಿನ್ನೆಲೆ ಕಳೆದ ಬಾರಿಯಂತೆ ಈ ಬಾರಿಯೂ ಸರಳ ದಸರಾ ಆಚರಣೆ ಮಾಡಲಾಯಿತು.  ಈ ಹಿನ್ನೆಲೆಯಲ್ಲಿ ಜಂಬೂ ಸವಾರಿ ಮೆರವಣಿಗೆ ಅರಮನೆ ಅಂಗಳಕ್ಕೆ ಸೀಮಿತವಾಗಿದ್ದು,  ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ತಾಯಿ ಚಾಮುಂಡೇಶ್ವರಿ ಕಂಗೊಳಿಸಿದಳು. ತಾಯಿ ಚಾಮುಂಡೇಶ್ವರಿಯನ್ನ ಭಕ್ತರು ನೋಡಿ ಕಣ್ತುಂಬಿಕೊಂಡರು.

ಕ್ಯಾಪ್ಟನ್ ಅಭಿಮನ್ಯ 2ನೇ ಬಾರಿ ಅಂಬಾರಿ ಹೊತ್ತು ಹೆಜ್ಜೆ  ಹಾಕಿದ್ದು, ಅಕ್ಕಪಕ್ಕದಲ್ಲಿ ಚೈತ್ರ, ಕಾವೇರಿ ಆನೆಗಳು ಸಾಥ್ ನೀಡಿದವು. ನಿಶಾನೆ ಆನೆಯಾಗಿ ಧನಂಜಯ ನೌಪತ್ ಆನೆಯಾಗಿ  ಗೋಪಾಲಸ್ವಾಮಿ ಅಶ್ವತ್ಹಾಮ ಹೆಜ್ಜೆ  ಹಾಕಿದರು.

ಕಣ್ಮನ ಸೆಳೆದ ಸ್ತಬ್ದಚಿತ್ರಗಳು, ಕಲಾತಂಡಗಳ ಅದ್ಬುತ ಪ್ರದರ್ಶನ.

ಜಂಬೂ ಸವಾರಿ ಮೆರವಣಿಗೆಯಲ್ಲಿ 6 ಸ್ತಬ್ದಚಿತ್ರಗಳು ಹಾಗೂ 12 ಪ್ರಕಾರಗಳ 23 ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ‘ಮೈಸೂರಿನಲ್ಲಿ ಸೂರು’ ಬಗ್ಗೆ ಮುಡಾ ತಯಾರಿಸಿರುವ ಸ್ತಬ್ಧಚಿತ್ರ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ವತಿಯಿಂದ  ‘ಬೇಡ ನನಗೆ  ಕೊಡಲಿ ನೆರಳನೇಕೆ ಕೊಡಲಿ’ ಎಂದು ಬಿಂಬಿಸುವ ಸ್ತಬ್ದಚಿತ್ರ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ  ‘ಸಮಗ್ರ ಕೃಷಿ’ ಸ್ತಬ್ಧಚಿತ್ರ, ಆರೋಗ್ಯ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ  ಕೋವಿಡ್ ಮುಕ್ತ ಕರ್ನಾಟಕ ಸ್ತಬ್ಧಚಿತ್ರ, ಮೈಸೂರು ದಸರಾ ಉಪಸಮಿತಿಯಿಂದ  ಆಜಾದಿ ಕಾ ಅಮೃತ ಮಹೋತ್ಸವ ಸ್ತಬ್ದಚಿತ್ರ,  ಮೈಸೂರು ಅರಮನೆಯ ವಾದ್ಯಗೋಷ್ಠಿ ಸ್ತಬ್ಧಚಿತ್ರ ಕಣ್ಮನ ಸೆಳೆದವು.

ಮೆರವಣಿಗೆಗೆ ಕಲಾ ತಂಡಗಳು ಮೆರಗು ನೀಡಿದ್ದು, 12 ಪ್ರಕಾರಗಳ 23 ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿವೆ.  ವೀರಗಾಸೆ ,ಡೊಳ್ಳು ಕುಣಿತ, ವಾದ್ಯಗೋಷ್ಠಿ  ಎಲ್ಲವೂ ಮೆರವಣಿಗೆಯಲ್ಲಿ ನೋಡುಗರನ್ನ ತನ್ನತ್ತ ಸೆಳೆಯುತ್ತಿವೆ. ಒಟ್ಟಾರೆ ಈ ಬಾರಿಯೂ ಸರಳ ದಸರಾವಾದರೂ ಸಹ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬದ ಸಂಭ್ರಮ ಕಳೆಗಟ್ಟಿತು.

Key words: mysore- dasara 2021- jamboo ride-tablo