ಅಪ್ಪು ಚಿತ್ರದ ಹಾಡು ಬೇಕೆಂದು ಕೇಳಿದ ಅಭಿಮಾನಿ‌‌‌ ಮೇಲೆ ಡಿ ಬಾಸ್ ಸಂಗಡಿಗರಿಂದ ಹಲ್ಲೆ: ದೂರು ದಾಖಲು.

ಮೈಸೂರು,ಫೆಬ್ರವರಿ,28,2023(www.justkannada.in): ಅಪ್ಪು ಚಿತ್ರದ ಹಾಡು ಬೇಕೆಂದು ಕೇಳಿದ ನಟ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ‌‌‌ಯ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್  ಬೆಂಬಲಿಗರು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಮೈಸೂರಿನ‌ ಹೆಬ್ಬಾಳದಲ್ಲಿರುವ ನಟ ದರ್ಶನ್ ಸ್ನೇಹಿತ ಹರ್ಷಾ ಮೆಲಂಟ ಮಾಲೀಕತ್ವದ ಮೈಸೂರು ಸೋಷಿಯಲ್ಸ್ ರೆಸಾರ್ಟ್ ನಲ್ಲಿ ಈ  ಘಟನೆ ನಡೆದಿದೆ. ಬೋಗಾದಿ ನಿವಾಸಿ ಉದ್ಯಮಿ ಯಶವಂತ್ ಕುಮಾರ್ ಹಲ್ಲೆಗೊಳಗಾದ ವ್ಯಕ್ತಿ. ಶನಿವಾರ ರಾತ್ರಿ ಪತ್ನಿಯ ಬರ್ತ್ ಡೇ ಪಾರ್ಟಿ ಆಚರಣೆಗೆ ಉದ್ಯಮಿ ಯಶವಂತ್ ಕುಮಾರ್ ತೆರಳಿದ್ದರು. ಈ ವೇಳೆ ನಟ ದರ್ಶನ್  ಎದುರಿನಲ್ಲೆ ಅಪ್ಪು ಅಭಿಮಾನಿ ಯಶ್ವಂತ್ ಕುಮಾರ್ ಅವರನ್ನ ಎಳೆದಾಡಿ ದರ್ಶನ್ ಸ್ನೇಹಿತರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹಲ್ಲೆ ನೋಡಿಯೂ ಬೆಂಬಲಿಗರನ್ನು ಸುಮ್ಮನಿರುವಂತೆ ದರ್ಶನ್ ಹೇಳಲಿಲ್ಲ ಎನ್ನಲಾಗಿದೆ. ಇದೀಗ ದರ್ಶನ್ ಸಂಗಡಿನ ವಿರುದ್ದ ಹೆಬ್ಬಾಳ ಪೊಲೀಸ್ ಠಾಣೆಗೆ  ಯಶವಂತ್ ಕುಮಾರ್ ದೂರು ನೀಡಿದ್ದು, ದರ್ಶನ್ ಬೆಂಬಲಿಗನ ಮೇಲೆ ಎಫ್.ಐ.ಆರ್ ದಾಖಲಾಗಿದೆ.

ಆಗಿದ್ದೇನು..?

ಬರ್ತ್ ಡೇ ಪಾರ್ಟಿ ವೇಳೆ ಡಿಜೆ ಮ್ಯೂಸಿಕ್ ನಲ್ಲಿ ಅಪ್ಪು ಅಭಿನಯದ ರಾಜಕುಮಾರ ಹಾಡು ಹಾಕುವಂತೆ ಯಶವಂತ್ ಕುಮಾರ್ ಮನವಿ ಮಾಡಿದ್ದಾರೆ. ಎರಡು ಹಾಡುಗಳ ನಂತರ ಅಪ್ಪು ಹಾಡು ಹಾಕ್ತೇವೆಂದು ಡಿಜೆ ಮ್ಯೂಸಿಕ್ ಸಂಘಟಕರು ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡ ಡಿ ಬಾಸ್ ಸಂಗಡಿಗರು ಯಶವಂತ ಕುಮಾರ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಮನಬಂದಂತೆ ಎಳೆದಾಡಿ, ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ . ಫ್ಯಾಮಿಲಿಯವರ ಎದುರಿನಲ್ಲೇ ಯಶವಂತ್ ಕುಮಾರ್ ಮೇಲೆ   ಹಲ್ಲೆ ನಡೆಸಿದ್ದಾರೆ. ದೂರದಲ್ಲೇ ಕುಳಿತು ಎಲ್ಲವನ್ನೂ ವೀಕ್ಷಿಸಿದ ಡಿ ಬಾಸ್ ಮತ್ತು ರೆಸಾರ್ಟ್ ಮಾಲೀಕ‌ ಹರ್ಷಾ ಮೆಲಂಟಾ ಸುಮ್ಮನಿರುವಂತೆ ಹೇಳಲಿಲ್ಲ ಎಂದು ಹೇಳಲಾಗುತ್ತಿದೆ

ಅಪ್ಪು ಹಾಡು ಹಾಕಿ ಎಂದು ಕೇಳಿದ್ದಕ್ಕೆ ಇವರಿಗ್ಯಾಕೆ ಇಷ್ಟೊಂದು ಸಿಟ್ಟು. ರಾಜ್ ಕುಮಾರ್ ರಂತೆ ಅಪ್ಪುವನ್ನು ಕನ್ನಡಿಗರು ಮನೆ ಮಗನಂತೆ ನೋಡುತ್ತಾರೆ. ಅವರು ಹಾಡು‌‌ ಕೇಳಬಾರದು, ಇಲ್ಲಿ ಡಿ ಬಾಸ್ ಹಾಡುಗಳನ್ನು ಮಾತ್ರ ಕೇಳಬೇಕು. ಇನ್ನೂ ಇಲ್ಲಿಯೇ ಇದ್ದರೆ ನಿನ್ನನ್ನ ಮುಗಿಸ್ತೀವಿ ಅಂತಾ ಜೀವ ಬೆದರಿಕೆ ಹಾಕಿದ್ದಾರೆ ಎಂದು ಡಿ‌ ಬಾಸ್ ಹಾಗೂ ಸಂಗಡಿಗರ ವರ್ತನೆಗೆ ಯಶವಂತ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಷ್ಟೊಂದು ದಬ್ಬಾಳಿಕೆ ಒಳ್ಳೆಯದಲ್ಲವೆಂದು ಯಶವಂತ್ ಹೇಳಿದ್ದಾರೆ.

Key words: mysore-D Boss –supporter- assaulted- Appu fan