ಮೈಸೂರು,ಡಿಸೆಂಬರ್,5,2025 (www.justkannada.in): ಮೈಸೂರಿನ ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯತ್ತಿದ್ದ ವೇಳೆ ಕುಸಿದುಬಿದ್ದ ಕಕ್ಷಿದಾರರೊಬ್ಬರನ್ನು ಖುದ್ದು ನ್ಯಾಯಾಧೀಶರೇ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಚಾಮರಾಜಪುರಂನ ನ್ಯಾಯಾಲಯಗಳ ಸಂಕೀರ್ಣದಲ್ಲಿರುವ 6ನೇ ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಲಯ ಈ ಘಟನೆ ನಡೆಯಿತು. ಅಲ್ಲಿನ 6ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಹರೀಶ್ ಸಿಂಗ್ ಎಚ್.ಜಿ. ಅವರೇ ಕುಸಿದು ಬಿದ್ದ ಕಕ್ಷಿದಾರರನ್ನು ಖುದ್ದು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದು ನ್ಯಾಯಾಧೀಶರ ನಡೆಗೆ ವಕೀಲರು, ಸಿಬ್ಬಂದಿ ಸಾರ್ವಜನಿಕರು ಸೇರಿ ಎಲ್ಲರೂ ಶ್ಲಾಘಿಸಿದರು.
ಆಗಿದ್ದೇನು?
6ನೇ ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಲಯ ಮಧ್ಯಾಹ್ನ 1 ಗಂಟೆ ವೇಳೆಗೆ ಸಾಕ್ಷಿ ವಿಚಾರಣೆ ನಡೆಯುತಿತ್ತು. ಈ ಸಮಯದಲ್ಲಿ ಕಟಕಟೆಯಲ್ಲಿ ನಿಂತಿದ್ದ ವ್ಯಕ್ತಿ ಕುಸಿದುಬಿದ್ದು ಕೆಲಕಾಲ ಆತಂಕದ ವಾತಾವರಣ ಸೃಷ್ಠಿಯಾಯಿತು. ಕುಸಿದುಬಿದ್ದಿದ್ದ ವ್ಯಕ್ತಿಯನ್ನು ಅಲ್ಲಿದ್ದ ವಕೀಲರು, ನ್ಯಾಯಾಲಯದ ಸಿಬ್ಬಂದಿ ಕೂರಿಸಿ ನೀರು ಕುಡಿಸಿ ಆರೈಕೆ ಮಾಡಲು ಮುಂದಾಗಿದ್ದುಲ ಅದರೆ, ಆ ವ್ಯಕ್ತಿಗೆ ನೀರು ಕುಡಿಯುವಷ್ಟು ಪ್ರಜ್ಞೆ ಇರಲಿಲ್ಲ. ಆ ವೇಳೆ ನ್ಯಾಯಾಧೀಶರಾದ ಹರೀಶ್ ಸಿಂಗ್ ಅವರು ನ್ಯಾಯಾಲಯದ ಆರೋಗ್ಯ ಕೇಂದ್ರದಲ್ಲಿನ ವೈದ್ಯರನ್ನು ಸ್ಥಳಕ್ಕೆ ಕರೆಸಿದರು. ತಪಾಸಣೆ ನಡೆಸಿದ ವೈದ್ಯರು, ‘ಹೃದಯಾಘಾತ ಆಗಿರುವ ಸಾಧ್ಯತೆ ಕಡಿಮೆ. ಆದರೆ, ಮಿದುಳು ಪಾರ್ಶ್ವವಾಯು ಆಗಿರಬಹುದು. ಒಂದು ತಾಸಿನೊಳೆ ಐಸಿಯುಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ತಕ್ಷಣವೇ ನ್ಯಾಯಾಧೀಶರಾದ ಹರೀಶ್ ಸಿಂಗ್ ಅವರು ಅಲ್ಲಿದ್ದ ಸಿಬ್ಬಂದಿ, ಪೊಲೀಸರು ಹಾಗೂ ವಕೀಲರ ನೆರವಿನಿಂದ ವ್ಯಕ್ತಿಯನ್ನು ತಮ್ಮ ಕಾರಿನಲ್ಲೇ ಕುವೆಂಪುನಗರದ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
Key words: Mysore court, Client, Judge, shows, humanity







