ನೀರಿನ ಶುಲ್ಕ ಬಾಕಿ ಉಳಿಸಿಕೊಂಡವರಿಗೆ ಮೈಸೂರು ಮಹಾನಗರ ಪಾಲಿಕೆಯಿಂದ ಗುಡ್ ನ್ಯೂಸ್.

ಮೈಸೂರು,ಆಗಸ್ಟ್,4,2022(www.justkannada.in):  ನೀರಿನ ಶುಲ್ಕ ಬಾಕಿ ಉಳಿಸಿಕೊಂಡವರಿಗೆ ನಗರ ಪಾಲಿಕೆ ಶುಭ ಸುದ್ದಿಯೊಂದನ್ನು ನೀಡಿದೆ. ನೀರಿನ ಶುಲ್ಕ ಸಕಾಲದಲ್ಲಿ ಪಾವತಿಸದೆ ಬಾಕಿ ಉಳಿಸಿಕೊಂಡವರಿಗೆ ಬಡ್ಡಿಯ ಮೇಲೆ ಬಡ್ಡಿ ವಿಧಿಸುವುದಕ್ಕೆ ಪಾಲಿಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದು, ಇದಕೋಸ್ಕರ ಜುಲೈ 15 ರಿಂದ ‘ಬಡ್ಡಿ ನಿಶ್ಚಲ’ ಯೋಜನೆ ಜಾರಿಗೊಳಿಸಿದೆ. ಈ ಯೋಜನೆ 6 ತಿಂಗಳವರೆಗೆ ಜಾರಿಯಲ್ಲಿ ಇರಲಿದೆ.

ಬಳಕೆದಾರರು ಒಂದೇ ಬಾರಿಗೆ ಹಿಂದಿನ ಬಾಕಿಯ ಅಸಲನ್ನು ಸಂಪೂರ್ಣ ಪಾವತಿಸಿದರೆ ‘ಬಡ್ಡಿ ನಿಶ್ಚಲ ಯೋಜನೆ’ ಯೋಜನೆಯ ಸೌಲಭ್ಯ ಪಡೆಯಬಹುದು. ಬಡ್ಡಿ ನಿಶ್ಚಲ ಯೋಜನೆಯ ವ್ಯಾಪ್ತಿಗೆ ಒಳಪಟ್ಟ ಗ್ರಾಹಕರಿಗೆ 6 ತಿಂಗಳ ಅವಧಿಯಲ್ಲಿ ಹಳೆಯ ಬಡ್ಡಿಯ ಮೇಲೆ ಮತ್ತೆ ಬಡ್ಡಿ ವಿಧಿಸುವುದಿಲ್ಲ ಎಂದು ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಡ್ಡಿ ನಿಶ್ಚಲ ಯೋಜನೆಯ ಲಾಭ ಪಡೆದವರು ಆರು ತಿಂಗಳ (ಯೋಜನೆ ಅವಧಿಯೊಳಗೆ) ಅವಧಿಯಲ್ಲಿ ಮತ್ತೆ ಅಸಲು ಉಳಿಸಿಕೊಂಡರೆ ಅದಕ್ಕೆ ಬಡ್ಡಿ ವಿಧಿಸಲಾಗುತ್ತದೆ. ಆದರೆ, ಬಡ್ಡಿ ಮೇಲೆ ಬಡ್ಡಿ ವಿಧಿಸುವುದಿಲ್ಲ. 6 ತಿಂಗಳ ನಂತರ ಬಡ್ಡಿ ನಿಶ್ಚಲ ಯೋಜನೆಯು ಸ್ಥಗಿತಗೊಳ್ಳಲಿದ್ದು, ನಂತರ ಯಥಾಸ್ಥಿತಿಯಲ್ಲಿ ಬಡ್ಡಿ ವ್ಯವಸ್ಥೆ ಮುಂದುವರೆಯಲಿದೆ ಎಂದು ತಿಳಿಸಿದರು.

ಈ ಬಡ್ಡಿ ನಿಶ್ಚಲ ಯೋಜನೆಯ ಸೌಲಭ್ಯ ಕೇವಲ ಗೃಹ ಬಳಕೆಯ ಗ್ರಾಹಕರಿಗೆ ಮಾತ್ರ ದೊರೆಯಲಿದೆ. ಪಾಲಿಕೆಯಲ್ಲಿ ಒಟ್ಟು 1,80,000 ನೀರಿನ ಸಂಪರ್ಕಗಳ ಪೈಕಿ 52,000 ಸಂಪರ್ಕಗಳಿಂದ 220 ಕೋಟಿ ರೂ. ನೀರಿನ ಶುಲ್ಕ ವಸೂಲಾತಿಗೆ ಹಲವು ವರ್ಷಗಳಿಂದ ಬಾಕಿ ಇದೆ. ಈ ಪೈಕಿ 146 ಕೋಟಿ ರೂ. ಅಸಲು ಮೊತ್ತವಾದರೆ, 74 ಕೋಟಿ ರೂ. ಬಡ್ಡಿ ಅಂಶವಾಗಿದೆ. 146 ಕೋಟಿ ರೂ. ಅಸಲು ಮೊತ್ತದಲ್ಲಿ 108 ಕೋಟಿ ರೂ.ಗಳನ್ನು ಗೃಹ ಬಳಕೆದಾರರು, 74 ಕೋಟಿ ರೂ. ಬಡ್ಡಿ ಮೊತ್ತದಲ್ಲಿ 56 ಕೋಟಿ ರೂ.ಗಳನ್ನು ಗೃಹ ಬಳಕೆದಾರರು ಪಾವತಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ‌ಮಾಹಿತಿ ನೀಡಿದರು.

ಸರ್ಕಾರಕ್ಕೆ ಬಡ್ಡಿ ಮನ್ನಾ ಮಾಡುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ, ಸರ್ಕಾರ ಬಡ್ಡಿ ಮನ್ನಾ ಕುರಿತು ಇದುವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸರ್ಕಾರ ಬಡ್ಡಿ ಮನ್ನಾ ಮಾಡದೆ ಹೋದರೆ ಗ್ರಾಹಕರು ಬಡ್ಡಿ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದರು.

Key words: Mysore -city-Corporation – Good news -water -charges.