ಕೋವಿಡ್ 19 ನಿರ್ವಹಣೆಯಲ್ಲಿ ಪಾಲಿಕೆ ವಿಫಲ: ಮೈಸೂರು ಎರಡನೇ ಬೆಂಗಳೂರು ಆಗುವ ಆತಂಕ ವ್ಯಕ್ತಪಡಿಸಿದ ಎಪಿಎಂಸಿ ನಿರ್ದೇಶಕ ಜೆ.ಎಸ್.ಜಗದೀಶ್

ಬೆಂಗಳೂರು, ಜುಲೈ 21, 2020 (www.justkannada.in): ಇಡೀ ವಿಶ್ವವನ್ನು ಕಾಡುತ್ತಿರುವ ಕೋವಿಡ್ 19 ನಿರ್ವಹಣೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಎಪಿಎಂಸಿ ನಾಮನಿರ್ದೇಶಿತ ನಿರ್ದೇಶಕ ಹಾಗೂ ಮಾಜಿ ನಗರ ಪಾಲಿಕೆ ಸದಸ್ಯ ಜೆ.ಎಸ್.ಜಗದೀಶ್ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದರ ಸೂಕ್ತ ನಿರ್ವಹಣೆ ಕೆಲಸವನ್ನು ನಗರ ಪಾಲಿಕೆ ಮಾಡಬೇಕಿತ್ತು. ಆದರೆ ನಗರ ಪಾಲಿಕೆ ಆಯುಕ್ತರು ಸೇರಿದಂತೆ ಯಾವ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ದೂರಿದ್ದಾರೆ.

ಇತ್ತೀಚಿಗೆ ನಿತ್ಯ ನೂರಕ್ಕೂ ಹೆಚ್ಚು ಪ್ರಕರಣಗಳು ದೃಢಪಡುತ್ತಿವೆ. ಈ ಕುರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಮೈಸೂರು ಎರಡನೇ ಬೆಂಗಳೂರು, ಮುಂಬೈ ಆಗುವ ಸಾಧ್ಯತೆ ಇದೆ. ನಗರದ ಎಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಹೋಟೆಲ್, ರಸ್ತೆ ಬದಿ ವ್ಯಾಪಾರಿಗಳು, ಮಾಲ್ ಗಳು, ಪಾರ್ಕ್ ಗಳು ಸೇರಿದಂತೆ ಎಲ್ಲೆಡೆ ಕಡ್ಡಾಯವಾಗಿ ಮಾಸ್ಕ್ ಧರಿಸಲು ನಿರ್ದೇಶನ ನೀಡುವುದು, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಯಾವುದೇ ಸೂಚನೆಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಾಲಿಕೆ ಆಯುಕ್ತರು, ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರ ಪಾಲಿಕೆ ನಿಯಮ ಪಾಲಿಸ ವ್ಯಾಪಾರಿಗಳ ವಿರುದ್ಧ ನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು. ಆದರೆ ಮೈಸೂರು ನಗರ ಪಾಲಿಗೆ ನಿಷ್ಟ್ರಯೋಜನಕವಾಗಿದೆ. ಪಾಲಿಕೆ ಆಯುಕ್ತರು ಯಾವುದೇ ದಿಟ್ಟ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿಲ್ಲ. ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಸರ್ವೇ ಕಾರ್ಯ ನಡೆಸಿ ಸೋಂಕಿತರನ್ನು ಪರಿಣಾಮಕಾರಿಯಾಗಿ ಪತ್ತೆ ಮಾಡಬೇಕು. ಎನ್ ಆರ್ ಕ್ಷೇತ್ರದ ಎಲ್ಲ ವಾರ್ಡ್ ಗಳು ಸೇರಿದಂತೆ ನಗರದಲ್ಲಿ ಕೋವಿಡ್ ನಿರ್ವಹಣೆಗೆ ಪ್ರತ್ಯೇಕವಾಗಿ ಸಮಿತಿ ನೇಮಕ ಮಾಡಿ ಅತ್ಯಂತ ಪರಿಣಾಮ ಕಾರಿ ಕೆಲಸ ಮಾಡಬಹುದಿತ್ತು. ಆದರೆ ಎಲ್ಲಿಯೂ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಪಾಲಿಕೆ ಆಡಳಿತ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇರೆ ನಗರಗಳ ಪರಿಸ್ಥಿತಿ ಅರಿತು ಕೋವಿಡ್ ನಿರ್ವಹಣೆಗೆ ಪಾಲಿಕೆ ಸಜ್ಜಾಗಬೇಕಿತ್ತು. ಆದರೆ ಸಂಪೂರ್ಣ ವಿಫಲವಾಗಿದೆ. ಕೋವಿಡ್ 19 ನಿರ್ವಹಣೆಗೆ ಹಣ ಮೀಸಲಿಟ್ಟಿಲ್ಲ. ಇದರ ನಿರ್ವಹಣೆಯುಲ್ಲೂ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಮೈಸೂರು ನಗರ ಪಾಲಿಕೆ ಆಯುಕ್ತರು ಇದ್ದಾರಾ ? ಇಲ್ಲವೇ ? ಎಂಬುದೇ ಅನುಮಾನವಾಗಿದೆ ಎಂದು ದೂರಿದ್ದಾರೆ.

mysore city corporation failure maintain covid 19 situation