ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆ: ಕೋವಿಡ್ ಲಸಿಕೆ ವಿಚಾರವಾಗಿ ಪರಸ್ಪರ ‘ಕೆಸರೆರೆಚಾಟ ನಡೆಸಿದ ‘ಕೈ’ಮತ್ತು ಬಿಜೆಪಿ ಸದಸ್ಯರು.

ಮೈಸೂರು,ಆಗಸ್ಟ್,3,2021(www.justkannada.in):  ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಸದಸ್ಯರು ಕೋವಿಡ್ ಲಸಿಕೆ ವಿಚಾರವಾಗಿ ಪರಸ್ಪರ ವಾಗ್ವಾದ ನಡೆಸಿ ಗೊಂದಲ ಸೃಷ್ಠಿಯಾಯಿತು.

ಮೈಸೂರು ಮಹಾನಗರ ಪಾಲಿಕೆಯಮುಖ್ಯ ಸಭಾಂಗಣದಲ್ಲಿ  ಹಂಗಾಮಿ ಮೇಯರ್ ಅನ್ವರ್ ಬೇಗ್, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ನೇತೃತ್ವದಲ್ಲಿ ಕೌನ್ಸಿಲ್ ಸಭೆ ನಡೆಯಿತು. ಮೇಯರ್ ವಜಾಗೊಂಡ ಬಳಿಕ ನಡೆಯುತ್ತಿರುವ ಮೊದಲ ಕೌನ್ಸಿಲ್ ಸಭೆ ಇದಾಗಿತ್ತು.  ಸಭೆ ಪ್ರಾರಂಭದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.  ಅಪಘಾತದಲ್ಲಿ ನಿಧನರಾದ ನಟ ಸಂಚಾರಿ ವಿಜಯ್ ಹಾಗೂ ರೈತ ಮುಖಂಡ, ಮಾಜಿ ಸಚಿವ ಜಿ.ಮಾದೇಗೌಡಗೆ ಸಂತಾಪ ಸೂಚಿಸಲಾಯಿತು.

 ಸಭೆ ಆರಂಭವಾಗುತ್ತಿದ್ದಂತೆ ಗದ್ಧಲ.

ಡಿಹೆಚ್ಓ ಸಭೆಗೆ ಹಾಜರಾಗದ ವಿಚಾರಕ್ಕೆ ಕೌನ್ಸಿಲ್ ಸಭೆ ಆರಂಭದಲ್ಲೇ ಗದ್ದಲ ಉಂಟಾಯಿತು. ಸಭೆಗೆ ಡಿಹೆಚ್ಓ ಹಾಜರಾಗುವಂತೆ  ಹಂಗಾಮಿ ಮೇಯರ್ ಅನ್ವರ್ ಬೇಗ್ ಗೆ ಪಾಲಿಕೆ ಸದಸ್ಯರು ಒತ್ತಾಯ ಮಾಡಿದರು.

ಡಿಹೆಚ್ಓ ಗೆ ಪತ್ರ ಬರೆದಿದ್ದೇವೆ, ಅವರು ಬೇರೆ ಕೆಲಸದ ನಿಮಿತ್ತ ಹಾಜರಾಗಿಲ್ಲ,  ಬದಲಾಗಿ ಇಲಾಖೆಯ ಮತ್ತೊಬ್ಬ ಅಧಿಕಾರಿಗಳನ್ನು ಕಳುಹಿಸಿದ್ದಾರೆ ಎಂದ ಹಂಗಾಮಿ ಮೇಯರ್ ಅನ್ವರ್ ಬೇಗ್ ಉತ್ತರಿಸಿದರು.

ವಾರ್ಡ್ ವ್ಯಾಪ್ತಿಗಳಲ್ಲಿ ವ್ಯಾಕ್ಸಿನ್ ಸಮಸ್ಯೆ ಇದೆ, ಇದೊಂದು ಸೂಕ್ಷ್ಮ ವಿಚಾರ. ಕೂಡಲೇ ಡಿಹೆಚ್ಓ ಕರೆಸಿ ಎಂದು ಪಾಲಿಕೆ ಸದಸ್ಯರು ಮೇಯರ್ ಮೇಲೆ ಮುಗಿಬಿದ್ದ ಘಟನೆ ನಡೆಯಿತು.

ಕೋವಿಡ್ ಲಸಿಕೆ ವಿಚಾರವಾಗಿ ಪರಸ್ಪರ ಕೆಸರೆರೆಚಾಟ ನಡೆಸಿದ ಸದಸ್ಯರು.

ಕೋವಿಡ್ ಲಸಿಕೆ ವಿಚಾರವಾಗಿ ಸಭೆಯಲ್ಲಿ  ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಬಿಜೆಪಿ ಸರ್ಕಾರ ಸಮರ್ಪಕವಾಗಿ ಲಸಿಕೆ ನೀಡುತ್ತಿಲ್ಲ. ಮೋದಿ ಸುಳ್ಳು ಹೇಳಿ ಜನರನ್ನು ನಂಬಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪ ಮಾಡಿದರು.

ದೇಶದ 120ಕೋಟಿ ಜನರಿಗೂ ಉಚಿತ ಲಸಿಕೆ ನೀಡುವುದಾಗಿ ಪ್ರಧಾನಿ‌ ಮೋದಿ ಘೋಷಿಸಿದ್ದಾರೆ. ಲಸಿಕೆ ನೀಡುವ ಪ್ರಾರಂಭದಲ್ಲಿ ಕಾಂಗ್ರೆಸ್ ನವರು ಜನರನ್ನು ದಾರಿತಪ್ಪಿಸಿದ್ರು ಎಂದು ಬಿಜೆಪಿ ಸದಸ್ಯರು  ತಿರುಗೇಟು ನೀಡಿದರು. ಪರಸ್ಪರ ಮಾತಿನ ಚಕಮಕಿ ನಡೆಸುವ ಮೂಲಕ ಪಾಲಿಕೆ ಸದಸ್ಯರು ಕಾಲಹರಣ ಮಾಡಿದರು.

Key words: Mysore city corporation- Council Meeting-congress-bjp-member-covid vaccine