ಮೈಸೂರು,ಸೆಪ್ಟಂಬರ್,11,2025 (www.justkannada.in): ವೈದ್ಯರನ್ನ ಭೂಮಿ ಮೇಲಿನ ಭಗವಂತ ಅಂತಾರೆ. ವೈದ್ಯೋ ನಾರಾಯಣಿ ಹರಿ ಅಂತ ಕರಿತಾರೆ. ಆದ್ರೆ, ಇತ್ತೀಚೆಗೆ ಕೆಲವು ಧನದಾಹಿ ವೈದ್ಯರು, ಖಾಸಗಿ ಕ್ಲಿನಿಕ್ ಗಳಿಂದ ಇದಕ್ಕೆ ಅಪವಾದ ಅಂಟತೊಡಗಿದೆ. ಅದರಲ್ಲೂ ಸಿಎಂ ತವರು ಮೈಸೂರು ಜಿಲ್ಲೆಯ ಈ ಘಟನೆ ನಿಜಕ್ಕೂ ಮನಕಲಕುವಂತಿದೆ. ಅಷ್ಟು ಮಾತ್ರವಲ್ಲದೇ, ಬಡತನ ಎಂಬುದು ಎಷ್ಟು ಕ್ರೂರ, ನಿಷ್ಠೂರ ಎಂದರೆ ಎಂಬುದರ ಜೊತೆಗೆ ಹಣದ ಮೇಲಾಟ, ಸಾವು- ನೋವುಗಳ ವಿಡಂಬನೆಗೆ ಸಾಕ್ಷಿಯಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡೆತಲೇ ಗ್ರಾಮದಲ್ಲಿ ಮನಕಲಕುವ ವಿದ್ರಾವಕ ಘಟನೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಮಗುವಿನ ಶವ ತರಲು ಹಣವಿಲ್ಲದೆ ಕುಟುಂಬಸ್ಥರು ಭಿಕ್ಷೆ ಬೇಡಿದ ದೃಶ್ಯ ಹೃದಯ ಕಲಕುವಂತಿದೆ.
ಮಂಗಳವಾರ ಸಂಜೆ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ಚಾಮರಾಜನಗರ ಮತ್ತು ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಹೆಮ್ಮರಗಾಲ ಗ್ರಾಮದ ಮೂವರಿಗೆ ಮತ್ತು ಹೆಡತಲೆ ಗ್ರಾಮದ ಮಹೇಶ್, ರಾಣಿ ಎಂಬ ದಂಪತಿಗಳು ಸೇರಿ ಮಗುವಿಗೂ ಗಂಭೀರ ಗಾಯಗಳಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಐದು ವರ್ಷದ ಆದ್ಯ ಎಂಬ ಮಗು ಸಾವನ್ನಪ್ಪಿದೆ. ಮಗುವಿನ ತಂದೆ ತಾಯಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ಮೃತಪಟ್ಟಿರುವ ಮಗುವಿನ ಶವವನ್ನು ತರಲು ಮೈಸೂರಿನ ಖಾಸಗಿ ಆಸ್ಪತ್ರೆ ಚಿಕಿತ್ಸೆ ವೆಚ್ಚ ಸರಿಸುಮಾರು ಒಂದುವರೆ ಲಕ್ಷ ಹಣವನ್ನು ಕಟ್ಟಿ ನಂತರ ಶವವನ್ನು ತೆಗೆದುಕೊಂಡು ಹೋಗುವಂತೆ ಕುಟುಂಬಸ್ಥರಿಗೆ ತಾಕೀತು ಮಾಡಿದ್ದಾರೆ. ಅಷ್ಟೊಂದು ಹಣವನ್ನು ಬಡ ಕುಟುಂಬ ಕಟ್ಟಲಾಗದೆ ತಮ್ಮ ಗ್ರಾಮಕ್ಕೆ ಬಂದು ಗ್ರಾಮದ ಪ್ರತಿಯೊಂದು ಮನೆಗೆ ಮಗುವಿನ ದೊಡ್ಡಮ್ಮ ಮಂಗಳಮ್ಮ ಮನೆ ಮುಂದೆ ಹೋಗಿ ಸೆರಗೊಡ್ಡಿ ಭಿಕ್ಷೆ ಬೇಡಿದ್ದಾರೆ.
ಗ್ರಾಮಸ್ಥರಿಂದ ಸುಮಾರು 80 ಸಾವಿರ ಹಣವನ್ನು ಸಂಗ್ರಹಿಸಿದ್ದಾರೆ. ಭಿಕ್ಷೆ ಬೇಡುತ್ತಿರುವ ದೃಶ್ಯ ಕಂಡು ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ. ನೊಂದ ಕುಟುಂಬಕ್ಕೆ ಪ್ರತಿ ಮನೆಯ ಕುಟುಂಬಸ್ಥರು ಹಣವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಮಾನವೀಯತೆ ಇಲ್ಲದ ಖಾಸಗಿ ಆಸ್ಪತ್ರೆ ಸಾವಿನಲ್ಲೂ ಸುಲಿಗೆ ಮಾಡುತ್ತಿರುವ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇನ್ನೂ ಸುದ್ದಿ ಪ್ರಸಾರ ಆಗುತ್ತಿದ್ದಂತೆಯೇ ಮೈಸೂರಿನ ಖಾಸಗಿ ಆಸ್ಪತ್ರೆ ಮುಂದೆ ಗ್ರಾಮಸ್ಥರು ಜಮಾವಣೆಗೊಂಡರು. ಆಸ್ಪತ್ರೆಯ ವಿರುದ್ಧ ಆರೋಪ ಕೇಳಿ ಬಂದ ಹಿನ್ನಲೆ ಸಿಬ್ಬಂದಿಗಳು ಸಹ ಎತ್ತೆಚ್ಚುಕೊಂಡು ಮಗುವಿಗೆ ಸಾಕಷ್ಟು ಚಿಕಿತ್ಸೆ ನೀಡಿದ್ದೇವೆ. ಇವರದು ಬಡ ಕುಟುಂಬ ಆರ್ಥಿಕ ಪರಿಸ್ಥಿತಿ ಬಗ್ಗೆ ನಮಗೆ ಗೊತ್ತಿರಲಿಲ್ಲ. ನಾವೇನು ಸುಲಿಗೆ ಮಾಡುತ್ತಿಲ್ಲ. ಚಿಕಿತ್ಸಾ ವೆಚ್ಚ ಭರಿಸಿ ಅಂತ ಹೇಳಿದ್ದವು ಆಸ್ಪತ್ರೆ ಕಡೆಯಿಂದ ಎಷ್ಟು ಕಡಿಮೆ ಆಗುತ್ತೋ ಅಷ್ಟು ರಿಯಾಯಿತಿ ಕೊಡುತ್ತೇವೆ. ಮಗುವಿನ ತಂದೆ ತಾಯಿ ಹುಷಾರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
Key words: Mysore, Accident, child, body, hospital, Family, beg