ಆನೆ ಮತ್ತು ಸಿಂಹ ದತ್ತು ಸ್ವೀಕಾರ ಮೂಲಕ ಮೂವರು ದ್ರುವತಾರೆಯರಿಗೆ ಗೌರವ ಸಲ್ಲಿಸಿದ ಸಚಿವ ಎಸ್.ಟಿ ಸೋಮಶೇಖರ್….

ಮೈಸೂರು,ಜೂ,8,2020(www.justkannada.in):  ಕನ್ನಡ ಚಿತ್ರರಂಗದ ಮೇರು ನಟರಾದ ನಟಸಾರ್ವಭೌಮ, ವರನಟ ದಿ. ಡಾ.ರಾಜ್ ಕುಮಾರ್, ಮಂಡ್ಯದ ಗಂಡು, ರೆಬೆಲ್ ಸ್ಟಾರ್ ದಿ. ಅಂಬರೀಷ್ ಹಾಗೂ ಸಾಹಸ ಸಿಂಹ ದಿ. ಡಾ. ವಿಷ್ಣುವರ್ಧನ್ ಹೆಸರಿನಲ್ಲಿ ಆನೆಗಳು ಹಾಗೂ ಸಿಂಹವನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆಯುವ ಮೂಲಕ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ದ್ರುವತಾರೆಯರಿಗೆ ಗೌರವ ಸೂಚಿಸಿದ್ದಾರೆ.

ಮೂರು ತಿಂಗಳ ಬಳಿಕ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಚಾಲನೆ ನೀಡಿದ ಸಚಿವ ಎಸ್.ಟಿ ಸೋಮಶೇಖರ್, ಮೈಸೂರು ಮೂಲದ ಮೂವರು ನಟರಿಗೆ ಗೌರವ ಸೂಚಿಸಲು ಇದು ಸಕಾಲ. ಈ ನಿಟ್ಟಿನಲ್ಲಿ ಇವರ ಹೆಸರಿನಲ್ಲಿ ಪ್ರಾಣಿಗಳನ್ನು ದತ್ತು ಪಡೆಯುತ್ತಿರುವುದಾಗಿ ತಿಳಿಸಿದರು.mysore-chamarajendra-zoo-minister-st-somashekar

ಎರಡು ಆನೆ, ಒಂದು ಸಿಂಹ ದತ್ತು….

ವರನಟ ಡಾ. ರಾಜ್ ಕುಮಾರ್ ಅವರ ಹೆಸರಿನಲ್ಲಿ ಆನೆ ಹಾಗೂ ರೆಬೆಲ್ ಸ್ಟಾರ್ ಅಂಬರೀಷ್ ಅವರ ಹೆಸರಿನಲ್ಲಿ ಆಫ್ರಿಕನ್  ಆನೆ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ಹೆಸರಿನಲ್ಲಿ ಒಂದು ಸಿಂಹವನ್ನು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ದತ್ತು ಪಡೆದಿದ್ದಾರೆ.

ಸಚಿವರ ಸಹಾಯ ಅವಿಸ್ಮರಣೀಯ…..

ಕೊರೋನಾ ಹಿನ್ನೆಲೆ ಮೂರು ತಿಂಗಳ ಕಾಲ ಲಾಕ್ ಡೌನ್ ಆಗಿದ್ದರಿಂದ ಮೃಗಾಲಯಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಇಲ್ಲದೆ ಮೃಗಾಲಯಕ್ಕೆ ಆದಾಯ ಇರಲಿಲ್ಲ. ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವಿಲ್ಲದೆ ನಿರ್ವಹಣೆ ಮಾಡುವುದೂ ಕಷ್ಟಕರವಾಗಿದ್ದ ಸನ್ನಿವೇಶದಲ್ಲಿ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದಾಗ ಅವರು ಸ್ಪಂದಿಸಿದ ರೀತಿ ನಿಜಕ್ಕೂ ಮಾದರಿ. ಸಚಿವರು ಈಗಾಗಲೇ ಅವರ ಕ್ಷೇತ್ರದ ಜನತೆಯಿಂದ, ಆಪ್ತರಿಂದ ಹಾಗೂ ಜನಪ್ರತಿನಿಧಿಗಳಿಂದ ಮೃಗಾಲಯಕ್ಕೆ ಒಟ್ಟು 3.23 ಕೋಟಿ ರೂಪಾಯಿಯನ್ನು ಹಸ್ತಾಂತರಿಸಿದಂತಾಗಿದೆ  ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಹೇಳಿದರು.

ಅಕ್ಕ ಸಂಸ್ಥೆಯಿಂದ 40 ಲಕ್ಷ ರೂ.

ಅಮೆರಿಕದ ಅಕ್ಕ ಸಂಸ್ಥೆಯಿಂದ ಮೃಗಾಲಯದ ನಿರ್ವಹಣೆಗೆಂದು 40 ಲಕ್ಷ ರೂಪಾಯಿ ಚೆಕ್ ಅನ್ನು ಇದೇ ವೇಳೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಮುಖಾಂತರ ಅಕ್ಕ ಸಂಘಟನೆಯ ಮಾಜಿ ಅಧ್ಯಕ್ಷರಾದ ಶಿವಮೂರ್ತಿ ಕಿಲಾರ ಅವರು ಮೃಗಾಲಯಕ್ಕೆ ಹಸ್ತಾಂತರಿಸಿದರು.

ಸಚಿವ ಎಸ್ ಟಿ ಎಸ್ ಹೆಸರಲ್ಲಿ ಫಲಕ

ಸಂಕಷ್ಟದ ಕಾಲದಲ್ಲಿ ಮೃಗಾಲಯಕ್ಕೆ 3.23 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿಕೊಟ್ಟಂತಹ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರಿಗೆ ಗೌರವಾರ್ಥವಾಗಿ ಅವರ ಹೆಸರಿನಲ್ಲಿ ಮೃಗಾಲಯದ ಮುಖ್ಯ ಪ್ರವೇಶದ್ವಾರದ ಎದುರು ಫಲಕವೊಂದನ್ನು ನಿರ್ಮಾಣ ಮಾಡಲಾಗಿದೆ. ಅದನ್ನು ಮೃಗಾಲಯದ ಪುನಾರಂಭಗೊಳಿಸುವ ಸಂದರ್ಭದಲ್ಲಿ ಅನಾವರಣ ಮಾಡಲಾಯಿತು.

ತಾಯಿ ಚಾಮುಂಡೇಶ್ವರಿಗೆ ಪೂಜೆ

ಮೃಗಾಲಯದ ಪ್ರವೇಶದ್ವಾರ ಬಳಿಯ ಚಾಮುಂಡೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿದ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರಾದ ಸುಮಲತಾ ಅಂಬರೀಷ್, ಬಳಿಕ ಮೃಗಾಲಯ ಪುನಾರಂಭಕ್ಕೆ ಚಾಲನೆ ನೀಡಿದರು.

ಜಿರಾಫೆ ಮರಿಗಳಿಗೆ ನಾಮಕರಣ

ಈಚೆಗೆ ಜನಿಸಿದ ಜಿರಾಫೆ ಮರಿಗಳಿಗೆ ಇದೇ ವೇಳೆ ಆದ್ಯಯಧುವೀರ ಹಾಗೂ ಬಾಲಾಜಿ ಎಂದು ನಾಮಕರಣ ಮಾಡಲಾಯಿತು. ನಾಮಫಲಕವನ್ನು ಸಚಿವರಾದ ಸೋಮಶೇಖರ್ ಹಾಗೂ ಸಂಸದರಾದ ಸುಮಲತಾ ಅಂಬರೀಷ್ ಪ್ರದರ್ಶನ ಮಾಡಿದರು.

ಬಿಳಿ ಹುಲಿಗಾಗಿ ಎನ್ಕ್ಲೂಶರ್ ಅನಾವರಣ

ಅಪರೂಪದ ತಳಿಯಾಗಿರುವ ಬಿಳಿ ಹುಲಿ ಸಂಚರಿಸಲು ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಲಾಗಿರುವ ಎನ್ಕ್ಲೂಶರ್ ಅನ್ನು ಸಚಿವರು ಹಸಿರು ಬಾವುಟ ತೋರ್ಪಡಿಸುವ ಮೂಲಕ ಅನಾವರಣಗೊಳಿಸಿದರು. ಇಲ್ಲಿ ಪ್ರಸ್ತುತ ಸಾರಾ ಎಂಬ ಹೆಣ್ಣು ಬಿಳಿ ಹುಲಿ ವಿಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬಳಿಕ ಮಾತನಾಡಿದ ಶಾಸಕರಾದ ಎಸ್.ಎ ರಾಮದಾಸ್, ಜಿಲ್ಲಾ ಮಂತ್ರಿಗಳ ಹೃದಯ ಶ್ರೀಮಂತಿಕೆಗೆ ನಾವು ಆಭಾರಿಯಾಗಿದ್ದೇವೆ. ಅವರು ಇಲ್ಲಿಗೆ ಮೊದಲು ಭೇಟಿ ನೀಡಿದ ಸಂದರ್ಭದಲ್ಲಿ ಸ್ವತಃ ತಾವೇ ಆನೆಯೊಂದನ್ನು ದತ್ತು ಪಡೆದಿದ್ದಲ್ಲದೆ, ತಮ್ಮ ಕ್ಷೇತ್ರದ ಜನತೆ, ಆಪ್ತರು ಹಾಗೂ ಜನಪ್ರತಿನಿಧಿಗಳಿಂದ ದೇಣಿಗೆ ಸಂಗ್ರಹಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಮಾತನಾಡಿ, ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ಮೂರು ಕೋಟಿ ರೂಪಾಯಿ ಸಂಗ್ರಹಿಸಿ ಕೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರ ಎಲ್ಲರಿಗೂ ಅನುಕರಣೀಯ. ಇದು ಇತರ ಮೃಗಾಲಯಗಳಿಗೂ ಮಾದರಿ ಹೇಳಿದರು.

ಇನ್ನು ಮೈಸೂರು ಮೃಗಾಲಯ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಸಂಸದರಾದ ಸುಮಲತಾ ಅಂಬರೀಷ್ ಮಾತನಾಡಿ, ಮೈಸೂರು ಮೃಗಾಲಯ ಬಗ್ಗೆ ಅಂಬರೀಷ್ ಅವರಿಗೆ ತುಂಬಾ ಪ್ರೀತಿ ಇದೆ. ಅವರು ಇಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದು, ಮೃಗಾಲಯ ಸಿನಿಮಾದ ಸಂದರ್ಭದಲ್ಲೂ ಇಲ್ಲಿ ಹೆಚ್ಚಿನ ನಂಟು ಹೊಂದಿದ್ದಾರೆ. ಅವರಿಗೆ ಇಲ್ಲಿನ ಪ್ರಾಣಿಗಳು ಸ್ನೇಹಿತರಂತೆ ಇದ್ದವು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ, ಹರ್ಷವರ್ಧನ್, ಡಿಸಿಪಿ ಪ್ರಕಾಶ್ ಗೌಡ, ಮೇಯರ್ ತಸ್ನಿಂ, ಜಿಪಂ ಸಿಇಒ ಪ್ರಶಾಂತ್ ಕುಮಾರ್, ಅಕ್ಕ ಸಂಘಟನೆಯ ಮಾಜಿ ಅಧ್ಯಕ್ಷರಾದ ಶಿವಮೂರ್ತಿ ಕಿಲಾರ್ ಸೇರಿ ಅಧಿಕಾರಿಗಳು ಇದ್ದರು.

ಮೈಸೂರು ಮೃಗಾಲಯಕ್ಕೆ ಟಿಕೆಟ್ ಪಡೆದು ಚಾಲನೆ

11 ವಾರದ ಬಳಿಕ ಮೈಸೂರು ಮೃಗಾಲಯ ಪುನಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಾವೇ ನಮ್ಮ ಜೊತೆಗೆ ಬಂದ 50 ಮಂದಿಗೆ ಟಿಕೆಟ್ ಪಡೆಯುವ ಮೂಲಕ ಪ್ರವೇಶಕ್ಕೆ ಚಾಲನೆ ನೀಡಿದ್ದೇವೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿಸೋಮಶೇಖರ್ ತಿಳಿಸಿದರು.

ಪ್ರತಿ ದಿನಕ್ಕೆ 10 ಸಾವಿರ ಪ್ರವಾಸಿಗರು ಭೇಟಿ ಕೊಡಲು ಸದ್ಯದ ಪರಿಸ್ಥಿತಿಯಲ್ಲಿ ಆಗಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲರಿಗೂ ವೀಕ್ಷಣೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವರು ತಿಳಿಸಿದರು.

ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಕರಣ ಮಾಡುತ್ತಿರುವುದು ಅದರ ಉಳಿಕೆ ಉದ್ದೇಶದಿಂದಲೇ ವಿನಹ ಬೇರೆ ಯಾವುದೇ ಕಾರಣವೂ ಇಲ್ಲಿಲ್ಲ. ಸಕ್ಕರೆ ಕಾರ್ಖಾನೆಗಳು ಉಳಿದು, ಬೆಳೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ಹೇಳಿದರು.

Key words: mysore- Chamarajendra Zoo-minister – ST Somashekar