ಕರ್ನಾಟಕದ ರಸ್ತೆಗಳು ಅಮೆರಿಕಾದ ರಸ್ತೆಗಳಿಗೆ ಸಮನಾಗಿ ಇರಲಿವೆ -ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ.

ಮೈಸೂರು,ಮಾರ್ಚ್,10,2024(www.justkannada.in):   ಕರ್ನಾಟಕದ ರಸ್ತೆಗಳು ಅಮೆರಿಕಾದ ರಸ್ತೆಗಳಿಗೆ ಸಮನಾಗಿ ಇರಲಿವೆ. ಮೈಸೂರು, ಹಾಸನಕ್ಕೆ ರಿಂಗ್ ರಸ್ತೆ  ಮಾಡಿಸುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.

ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ 22 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ,   ಕರ್ನಾಟಕದ ರಸ್ತೆಗಳ ಚಿತ್ರಣ ಬದಲಾಗಲಿದ್ದು, ಅಮೆರಿಕಾ ರಸ್ತೆಗಳಿಗೆ ಸಮನಾಗಿ ಇರಲಿವೆ.  ಮೈಸೂರು, ಹಾಸನಕ್ಕೆ ರಿಂಗ್ ರಸ್ತೆ ಮಾಡಿಸುತ್ತೇನೆ. ಕುಶಾಲನಗರ- ಮಾಣಿ ರಸ್ತೆಗೆ ಡಿಪಿಆರ್ ಮಾಡಿಸುತ್ತೇವೆ ಎಂದು ತಿಳಿಸಿದರು.

ಮೈಸೂರು- ನಂಜನಗೂಡು 6 ಪಥದ ರಸ್ತೆ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಕರ್ನಾಟಕ ಸಮೃದ್ಧ ರಾಜ್ಯವಾಗಿದೆ. ಸಾಹಿತ್ಯ, ಕಲೆ, ಸಂಗೀತ ಎಲ್ಲದರಲ್ಲೂ ವಿಶೇಷತೆ ಇದೆ. ಕರ್ನಾಟಕದ ವಿಕಾಸಕ್ಕಾಗಿ ಗ್ರೀನ್ ಎಕ್ಸ್‌ಪ್ರೆಸ್ ನಿರ್ಮಾಣ ಮಾಡಲಾಗುವುದು. ಬೆಂಗಳೂರು-ಚೆನ್ನೈ ನಡುವೆ 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿದೆ. ಕೇವಲ 2 ಗಂಟೆಯಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದು ಎಂದರು.

ಬೆಂಗಳೂರಿನ ರಿಂಗ್ ರಸ್ತೆ ಮುಖ್ಯ. 280 ಕಿ.ಮೀ. ರಿಂಗ್ ರಸ್ತೆ ಡಿಸೆಂಬರ್‌ನಲ್ಲಿ ಪೂರ್ಣವಾಗಲಿದೆ. ಇದರಿಂದ ಬೆಂಗಳೂರು ಟ್ರಾಫಿಕ್ ಜಾಮ್ ಮುಕ್ತವಾಗಲಿದೆ ಎಂದು ನಿತಿನ್ ಗಡ್ಕರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಸಂಸದೆ ಸುಮಲತಾ ಅಂಬರೀಶ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಉಪಸ್ಥಿತರಿದ್ದರು.