ಮೈಸೂರು ಎಪಿಎಂಸಿ ಎಲೆಕ್ಷನ್ ಗೊಂದಲ : ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ನಾಮ ನಿರ್ದೇಶಿತ ಸದಸ್ಯರ ಉಚ್ಛಾಟನೆ..?

 

ಮೈಸೂರು, ಜು.03, 2020 : (www.justkannada.in news ) ಕಳೆದ ವಾರ ಮೈಸೂರಿನಲ್ಲಿ ನಡೆದ ಎಪಿಎಂಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ನಾಮ ನಿರ್ದೇಶಿತ ಸದಸ್ಯರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೈಸೂರಿನ ಎಪಿಎಂಸಿ ಚುನಾವಣೆ ಹಿಂದಿನ ದಿನ, ಬಿಜೆಪಿ ನಾಮನಿರ್ದಶಿತ ಸದಸದ್ಯರನ್ನು ನೇಮಕ ಮಾಡಿತು. ಅದರಂತೆ ಮೈಸೂರಿನ ನಗರ ಪಾಲಿಕೆ ಮಾಜಿ ಸದಸ್ಯರಾದ ಜೆ.ಎಸ್. ಜಗದೀಶ್, ಶಿವಬಸಪ್ಪ ಹಾಗೂ ಮಹದೇವಮ್ಮ ಎಪಿಎಂಸಿಗೆ ನಾಮ ನಿರ್ದೇಶಿತ ಸದಸ್ಯರಾಗಿ ನೇಮಕಗೊಂಡರು.

jk-logo-justkannada-logo

ಮರು ದಿನವೇ ಅಧ್ಯಕ್ಷ ಸ್ಥಾನದ ಚುನಾವಣೆ. ಈ ವೇಳೆ ನಾಮ ನಿರ್ದೇಶಿತ ಸದಸ್ಯರು ಪಕ್ಷ ವಿರೋಧಿಯಾಗಿ ಮತಚಲಾಯಿಸಿದ ಆರೋಪ ಕೇಳಿ ಬಂದಿತ್ತು. ಇದು ಪಕ್ಷದ ಮುಖಂಡರಿಗೆ ಇರಿಸು ಮುರಿಸು ಉಂಟು ಮಾಡಿತ್ತು.
ಬಿಜೆಪಿ ಜಿಲ್ಲಾಧ್ಯಕ್ಷ ಮಹೇಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ನಂದೀಶ್ ಅವರ ಮೇಲೆ ನೇರವಾಗಿ ಆರೋಪ ಕೇಳಿ ಬಂದಿದ್ದು ವಿಶೇಷ. ಈ ಸಲುವಾಗಿಯೇ ಈಗಾಗಲೇ ಪಕ್ಷದ ಪ್ರಧಾನ ಕಾರ್ಯದರ್ಶಿ ನಂದೀಶ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ಮುಖಂಡ ನಿರ್ಮಲ್ ಕುಮಾರ್ ಸುರಾನ ನೇತೃತ್ವದಲ್ಲಿ ಆಂತರಿಕ ವಿಚಾರಣೆ ನಡೆಸಲಾಗಿದೆ. ಪ್ರಕರಣ ಕುರಿತು ಈಗಾಗಲೇ ಅಭಿಪ್ರಾಯ ಸಂಗ್ರಹಿಸಿರುವ ಸುರಾನ, ಈ ಬಗ್ಗೆ ವರದಿ ಸಿದ್ಧಪಡಿಸಿದ್ದು ಅದನ್ನು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಲ್ಲಿಸಿದ್ದಾರೆ.

ಈ ವರದಿ ಆಧಾರದ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷ ಮಹೇಂದ್ರ ಹಾಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ನಾಮ ನಿರ್ದೇಶಿತ ಸದಸ್ಯರ ಮೇಲೆ ಸದ್ಯದಲ್ಲೇ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಯಾರ ಮೇಲೆ ಕ್ರಮ :

ಎಪಿಎಂಸಿ ಅಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ಸೂಚನೆ ಉಲ್ಲಂಘಿಸಿದ ನಾಮ ನಿರ್ದೇಶಿತ ಸದಸ್ಯರ ವಿರುದ್ಧ ಶಿಸ್ತು ಕ್ರಮ ಸಾಧ್ಯತೆ. ಮೂವರು ಸದಸ್ಯರ ಪೈಕಿ ಇಬ್ಬರು ಕಾಂಗ್ರೆಸ್ ಪರವಾಗಿಯೂ ಮತ್ತೊಬ್ಬ ಸದಸ್ಯ ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದರು.
ಸಂಖ್ಯಾಬಲವಿಲ್ಲದ ಕಾರಣ ಬಿಜೆಪಿ ಅಭ್ಯರ್ಥಿ ಕಣದಲ್ಲಿರಲಿಲ್ಲ. ಆದರೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿ ಸದಸ್ಯರು ಮತ ಹಾಕಬಾರದು ಎಂಬುದು ಪಕ್ಷದ ಸೂಚನೆಯಾಗಿತ್ತು ಎನ್ನಲಾಗಿದೆ. ಆದರೆ ಮೂವರು ಸದಸ್ಯರ ಪೈಕಿ ಇಬ್ಬರು ಕಾಂಗ್ರೆಸ್ ಗೆ ಮತಹಾಕುವ ಮೂಲಕ ಪಕ್ಷದ ಮುಖಂಡರನ್ನು ಮುಜುಗರಕ್ಕೀಡು ಮಾಡಿದರು.

mysore-APMC-election-bjp-nomination

ಸ್ಪಷ್ಟನೆ :

ಈ ಬೆಳವಣಿಗೆಗೆ ಸಂಬಂಧಿಸಿದಂತೆ ಜಸ್ಟ್ ಕನ್ನಡ ಜತೆ ಮಾತನಾಡಿದ  ಎಪಿಎಂಸಿ ನಾಮ ನಿರ್ದೇಶಿತ ಸದಸ್ಯ ಎಸ್.ಜೆ. ಜಗದೀಶ್ ಅವರು ಹೇಳಿದ್ದಿಷ್ಟು…
‘ಬಿಜೆಪಿ ಅಭ್ಯರ್ಥಿ ಕಣದಲ್ಲಿ ಇರದ ಕಾರಣ ಸಂಸದ ಪ್ರತಾಪಸಿಂಹ ಹಾಗೂ ಪಕ್ಷದ ಮುಖಂಡರ ಸೂಚನೆಯಂತೆ ಜಿ.ಟಿ.ದೇವೇಗೌಡರ ಬೆಂಬಲಿತ ಅಭ್ಯರ್ಥಿಗೆ ನಾನು ಮತಚಲಾಯಿಸಿರುವೆ. ಇದನ್ನೇ ಮುಖಂಡರ ಬಳಿಯೂ ತಿಳಿಸಿರುವೆ ಎಂದು ಸ್ಪಷ್ಟಪಡಿಸಿದರು.

 

ooooo

key words : mysore-APMC-election-bjp-nomination