ಮೈಸೂರು,ಫೆಬ್ರವರಿ,6,2026 (www.justkannada.in): ನಗರದಲ್ಲಿ ಹೆಚ್ಚುತ್ತಿರುವ ಡ್ರಗ್ ಜಾಲಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾದ ಆರೋಪದ ನಡುವೆ ಮೈಸೂರಿನ ಸಿಟಿ ಕ್ರೈಂ ಬ್ರಾಂಚ್ (CCB)ನಲ್ಲಿ ದೊಡ್ಡ ಮಟ್ಟದ ಬದಲಾವಣೆ ನಡೆದಿದೆ.
ಕರ್ತವ್ಯ ಲೋಪ, ಅಪರಾಧ ಕೃತ್ಯಗಳ ಪತ್ತೆಯಲ್ಲಿ ನಿರ್ಲಕ್ಷ್ಯ ಹಾಗೂ ಡ್ರಗ್ ಪೆಡ್ಲರ್ ಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವ ಆರೋಪಗಳ ಹಿನ್ನೆಲೆ ಎಂಟು ಮಂದಿ ಪೊಲೀಸರನ್ನು ತಕ್ಷಣದಿಂದಲೇ ಎತ್ತಂಗಡಿ ಮಾಡಲಾಗಿದೆ ಎಂದು ಮೂಲಗಳು ಜಸ್ಟ್ ಕನ್ನಡಗೆ ತಿಳಿಸಿವೆ.
ಇದಕ್ಕೆ ಜೊತೆಯಾಗಿ ರೌಡಿ ಪ್ರತಿಬಂಧಕ ದಳದ ಮೂವರು ಸಿಬ್ಬಂದಿಗೂ ವರ್ಗಾವಣೆ ಶಿಕ್ಷೆ ವಿಧಿಸಲಾಗಿದ್ದು, ನಗರದ ಕಾನೂನು ಸುವ್ಯವಸ್ಥೆ ಮತ್ತು ಡ್ರಗ್ ನಿಯಂತ್ರಣದ ಮೇಲಿನ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಇಲಾಖೆ ಕಠಿಣ ಸಂದೇಶ ನೀಡಿದಂತಾಗಿದೆ.
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಡ್ರಗ್ ಜಾಲ, ಪೆಡ್ಲರ್ ಗಳ ಚಟುವಟಿಕೆ ಹಾಗೂ ಯುವಕರ ಸೆಳೆತ ಹೆಚ್ಚುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿತ್ತು. ಈ ಹಿನ್ನೆಲೆ ಮೇಲಾಧಿಕಾರಿಗಳ ಗಮನಕ್ಕೆ ಹಲವು ಅಂಶಗಳು ಬಂದಿದ್ದು, ಕಾರ್ಯಕ್ಷಮತೆ ಪರಿಶೀಲನೆಯ ಬಳಿಕ ಈ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ವಿಭಾಗದೊಳಗೆ ಕಾರ್ಯಕ್ಷಮತೆ ಹೆಚ್ಚಿಸುವುದು, ಡ್ರಗ್ ವಿರುದ್ಧ ವಿಶೇಷ ದಾಳಿ ಬಲಪಡಿಸುವುದು ಮತ್ತು ಅಪರಾಧ ನಿಯಂತ್ರಣಕ್ಕೆ ಹೊಸ ತಂಡಗಳನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಸಿಸಿಬಿಯಿಂದ ವರ್ಗಾವಣೆಯಾದವರು: ಶಿವಣ್ಣ, ದೊಡ್ಡೇಗೌಡ, ಅನಿಲ್, ರಾಜು, ಉಮಾ ಮಹೇಶ್ವರ್, ರಾಮಸ್ವಾಮಿ, ಪ್ರಕಾಶ್ ಹಾಗೂ ಗೋವಿಂದ
Key words: Mysore, 8 CCB police, Transfer







