ಮೈಸೂರು: 26 ದಿನಗಳಲ್ಲಿ 10 ಹುಲಿಗಳ ಸೆರೆ, ಮೂವರು ಸಾವು

ಮೈಸೂರು,ನವೆಂಬರ್,12,2025 (www.justkannada.in):  ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು ಅರಣ್ಯ ಇಲಾಖೆಯಿಂದ ಕಳೆದ 26 ದಿನದಲ್ಲಿ 10 ಹುಲಿಗಳನ್ನು ಸೆರೆ ಹಿಡಿಯಾಲಾಗಿದೆ. ಅಲ್ಲದೆ ಇದೇ  ಅವಧಿಯಲ್ಲಿ ಹುಲಿಗಳು ಮೂವರನ್ನ ಬಲಿ ಪಡೆದಿವೆ.

ಮೈಸೂರು ಜಿಲ್ಲೆಯ ಸರಗೂರು ಈ ಒಂದೇ ತಾಲೂಕಿನಲ್ಲಿ ನಾಲ್ವರ ಮೇಲೆ ಹುಲಿ ಅಟ್ಯಾಕ್ ಮಾಡಿದ್ದು ಈ  ಪೈಕಿ  ಮೂವರನ್ನು ಕೊಂದು ಹಾಕಿದರೆ ಓರ್ವ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಣ್ಣು, ಮೂಗು, ಮುಖದ ಭಾಗವೇ ಇಲ್ಲದೆ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹುಲಿಗಳು  ಆರು ಹಸುಗಳನ್ನ ಕೊಂದು ತಿಂದಿದ್ದು ಈಗಲೂ ಕೂಡ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನಲ್ಲಿ ಹುಲಿಗಳ ಆತಂಕ ಹೆಚ್ಚಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲದಲ್ಲಿ ಹೆಚ್ಚು ಹುಲಿ ದಾಳಿಯಾಗಿದ್ದು ನುಗು, ಮೊಳೆಯೂರು ವಲಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಆತಂಕವಿದೆ.

ಅಕ್ಟೋಬರ್ 16 ರಿಂದ ನಡೆದ ನಾಲ್ಕು ಹುಲಿ ದಾಳಿ ಪ್ರಕರಣ ನಡೆದಿದ್ದು ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿದ್ದ ಹುಲಿಗಳು ಮಾನವ ಹಾಗು ಜಾನುವಾರುಗಳ ಮೇಲೆ ದಾಳಿ ನಡೆಸಿದ್ದವು.  ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 5 ಚಿಕ್ಕ ಹುಲಿ ಮರಿಗಳ ಜೊತೆ 5 ದೊಡ್ಡ ಹುಲಿಗಳನ್ನ 26 ದಿನಗಳಲ್ಲಿ ಸೆರೆ ಹಿಡಿದಿದ್ದಾರೆ.

ಮಾನವನ ಮೇಲೆ ದಾಳಿ ಮಾಡುವ ಹುಲಿಗಳ ಸಂಖ್ಯೆ ಹೆಚ್ಚಳವಾಗಿದ್ದು ಹುಲಿಗಳನ್ನ ಸೆರೆ ಹಿಡಿಯಲು ಅರಣ್ಯ ಇಲಾಖೆ ದಿನದ 24 ಗಂಟೆಗಳ ಕಾಲವೂ ಕಾರ್ಯಾಚರಣೆ ನಡೆಸುತ್ತಿದೆ.

ಹೆಗ್ಗನೂರು ಗ್ರಾಮದಲ್ಲಿ ಮತ್ತೆ ಹುಲಿ ದಾಳಿ: ರೈತ ಬಚಾವ್

ಮೈಸೂರು ತಾಲೂಕಿನ ಸರಗೂರು ತಾಲೂಕಿನ‌ ಹೆಗ್ಗನೂರು ಗ್ರಾಮದಲ್ಲಿ ಮತ್ತೆ ಹುಲಿ  ದಾಳಿ ನಡೆಸಿದ್ದು ಸದ್ಯ ರೈತರೊಬ್ಬರು ಹುಲಿಯಿಂದ ಪಾರಾಗಿದ್ದಾರೆ

ಜಮೀನಿನ ಬಳಿ ಹಸುಗಳನ್ನ ಮೇಯಿಸುವಾಗ ಹುಲಿ ದಾಳಿ ನಡೆಸಿದ್ದು ಹುಲಿ ದಾಳಿಗೆ ರೈತ ಸುರೇಶ್  ಬೆಚ್ಚಿಬಿದ್ದಿದ್ದಾರೆ. ದಿಢೀರ್ ಹುಲಿ ದಾಳಿ ವೇಳೆ ರೈತ ಸುರೇಶ್ ಬಚಾವ್ ಆಗಿದ್ದಾರೆ.  ಸುರೇಶ್ ಅವರಿಗೆ ಸೇರಿದ ಹೋರಿ ಮೇಲೆ ಹುಲಿ ದಾಳಿಯಾಗಿದೆ.

Key words: Mysore, 10 tigers, captured, 26 days, three death