ಪ್ರಿಯಕರನ‌ ಜೊತೆ ಸೇರಿ ಪತಿಯನ್ನ ಹತ್ಯೆ ಮಾಡಿದ ಪತ್ನಿ: ಇಬ್ಬರು ಅರೆಸ್ಟ್.

ಮೈಸೂರು,ಜುಲೈ,19,2021(www.justkannada.in): ಪ್ರಿಯಕರನ‌ ಜೊತೆ ಸೇರಿ ಪತ್ನಿ ಪತಿಯನ್ನ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಹುಣಸಗಳ್ಳಿ ಗ್ರಾಮದಲ್ಲಿ ನಡೆದಿದೆ.jk

9 ತಿಂಗಳ‌ ನಂತರ ಕೊಲೆ ಪ್ರಕರಣವನ್ನ ಪೊಲೀಸರು ಭೇಧಿಸಿದ್ದು, ಪತ್ನಿ ಉಮಾ (29) ಪ್ರಿಯಕರ ಅವಿನಾಶ್  ಎಂಬ ಆರೋಪಿಗಳನ್ನ ಬಂಧಿಸಿದ್ದಾರೆ. ವೆಂಕಟರಾಜು (50) ಕೊಲೆಯಾದ ವ್ಯಕ್ತಿ.  ಅಕ್ಟೋಬರ್ 2020ರಲ್ಲಿ ಈ ಕೊಲೆ ನಡೆದಿತ್ತು. ವೆಂಕಟರಾಜು ಮೂಲತಃ ಮಂಡ್ಯ ಜಿಲ್ಲೆ ಹೊನಗಾನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, 10 ವರ್ಷದ ಹಿಂದೆ ಉಮಾಳನ್ನು ಮದುವೆಯಾಗಿದ್ದರು.

ಉಮಾ ಶ್ರೀರಂಗಪಟ್ಟಣ ತಾಲ್ಲೂಕಿನ ಬಳ್ಳೆಕರೆ ಗ್ರಾಮದ ನಿವಾಸಿಯಾಗಿದ್ದು ಈ ದಂಪತಿಗೆ 8 ವರ್ಷದ ಒಂದು ಹೆಣ್ಣು ಮಗು, 6 ವರ್ಷದ ಗಂಡು ಮಗು ಇತ್ತು. ಈ ನಡುವೆ ಹಳ್ಳಿ ಬಿಡುವ ವಿಚಾರ ಮತ್ತು ವಯಸ್ಸಿನ ಅಂತರದಿಂದಾಗಿ ಗಂಡ ಹೆಂಡತಿ ನಡುವೆ ಬಿರುಕು ಉಂಟಾಗಿದೆ. ಇದೇ ವೇಳೆ ಉಮಾಗೆ ಪಕ್ಕದ ಮನೆಯ ನಿವಾಸಿ ಅವಿನಾಶ್ ಪರಿಚಯವಾಗಿದೆ.

ಇಬ್ಬರ ನಡುವೆ ಪ್ರೀತಿ ಉಂಟಾಗಿದ್ದು, ಈ ಮಧ್ಯೆ  ಇಬ್ಬರು ಸೇರಿ ವೆಂಕಟರಾಜು ಕೊಲೆ ಮಾಡಿದ್ದರು. ಅವಿನಾಶ್ ಅಜ್ಜಿ‌ ಮನೆ ಹುಣಸಗಳ್ಳಿಗೆ ಕರೆಸಿಕೊಂಡು ವೆಂಕಟರಾಜು ಅವರನ್ನ ಕೊಲೆ ಮಾಡಿದ್ದರು.

ಕಾಫಿಯಲ್ಲಿ ನಿದ್ದೆ ಮಾತ್ರೆ ಬೆರೆಸಿ ನಿದ್ರಾವಸ್ಥೆಯಲ್ಲಿದ್ದಾಗ ಖಾಸಗಿ ಭಾಗಕ್ಕೆ ಹಲ್ಲೆ ಮಾಡಿದ್ದ ಪತ್ನಿ ಉಮಾ ಹಾಗೂ ಆಕೆಯ ಪ್ರಿಯಕರ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ನಂತರ ಅದನ್ನ ಸ್ವಾಭಾವಿಕ ಸಾವು ಎಂಬಂತೆ ಬಿಂಬಿಸಿದ್ದರು. ಈ‌ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಬನ್ನೂರು ಠಾಣಾ‌ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ ಎಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮೈಸೂರು ಎಸ್ಪಿ ಆರ್. ಚೇತನ್ ಮಾಹಿತಿ ನೀಡಿದ್ದಾರೆ.

Key words: murdered – husband – wife – her lover-Arrest- mysore