ಮೈಸೂರು,ಮೇ,21,2025 (www.justkannada.in): ಮುಡಾದ ಕೋಟ್ಯಾಂತರ ರೂ. ಆಸ್ತಿ ರಕ್ಷಿಸಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ತಮ್ಮ ಆಸ್ತಿ ತಾವೇ ರಕ್ಷಣೆ ಮಾಡಿಕೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರೆ. ಹೀಗಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಮುಡಾ ಹೋರಾಟಗಾರ ಗಂಗರಾಜು ಆಗ್ರಹಿಸಿದ್ದಾರೆ.
ಅಬ್ದುಲ್ ವಾಹಿದ್ ಎಂಬುವವರ ವಿರುದ್ದ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಕಬಳಿಸಿದ್ದ ಆರೋಪ ಕೇಳಿ ಬಂದಿದೆ. ಮೈಸೂರು ತಾಲೂಕು ಕಸಬಾ ಹೋಬಳಿ ದೇವನೂರು ಬಡಾವಣೆಯ ಸರ್ವೆ ನಂ.148,149,149/2,149/3 ಹಾಗು 150ರ ಜಮೀನು ಕಬಳಿಸಿದ್ದು ಜಿಪಿಎ ಹೆಸರಿನಲ್ಲಿ 39 ಗುಂಟೆ ಭೂಮಿ ಅಕ್ರಮ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಮಧ್ಯೆ ಅಬ್ದುಲ್ ಗೆ ಮುಡಾ ಅಕ್ರಮವಾಗಿ 40 ಕ್ಕೂ ಹೆಚ್ಚು ಸೈಟ್ ನೀಡಿದ್ದು ಸರ್ಕಾರದಿಂದ ಆಸ್ತಿ ವಶಕ್ಕೆ ತೆಗೆದುಕೊಳ್ಳುವಂತೆ ಖಡಕ್ ಆದೇಶ ಬಂದಿದ್ದರೂ ಸಹ ಅಧಿಕಾರಿಗಳು ಆದೇಶವನ್ನ ಪದೇ ಪದೇ ಗಾಳಿಗೆ ತೂರುತ್ತಿದ್ದಾರೆ ಎನ್ನಲಾಗಿದೆ.
ಮುಡಾದ ಆಸ್ತಿ ರಕ್ಷಣೆಗೆ ಪದೇ- ಪದೇ ಸಮಯ ನಿಗದಿಪಡಿಸಿ ಮುಂದೂಡಿಕೆ ಮಾಡುತ್ತಿದ್ದು, ಉದಯಗಿರಿ ಠಾಣಾ ಪೊಲೀಸರು ಬಂದೋಬಸ್ತ್ ನೆಪ ಹೇಳಿ ನಾಲ್ಕು ಬಾರಿ ಮುಂದೂಡಿಕೆ ಮಾಡಿದ್ದಾರೆ. ಇಂದು ಬೆಳಗ್ಗೆ ತೆರವು ಮಾಡಲು ಬಂದೋಬಸ್ತ್ ಕಲ್ಪಿಸುವಂತೆ ಸೂಚನೆ ನೀಡಲಾಗಿತ್ತು. ನಿನ್ನೆವರೆಗೂ ಸಿದ್ಧತೆ ಮಾಡಿಕೊಂಡಿದ್ದ ಪೊಲೀಸರು ಬೆಳಗ್ಗೆ ಬಂದೋಬಸ್ತ್ ಕ್ಯಾನ್ಸಲ್ ಮಾಡಿದ್ದು, ಇದೀಗ ಮುಡಾದ ಅಧಿಕಾರಿಗಳು ಬಂದೋಬಸ್ತ್ ಇಲ್ಲದೆ ಆಸ್ತಿ ವಶಕ್ಕೆ ತೆಗೆದುಕೊಳ್ಳಲು ಆಗಲ್ಲ ಎನ್ನುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಮುಡಾ ಹೋರಾಟಗಾರ ಗಂಗರಾಜು, ಪೊಲೀಸರು- ಮುಡಾ ಅಧಿಕಾರಿಗಳು ಕಳ್ಳಾಟ ಆಡುತ್ತಿದ್ದಾರೆ. ಮುಡಾದ ಕೋಟ್ಯಾಂತರ ರೂ ಆಸ್ತಿ ರಕ್ಷಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಪೊಲೀಸರು ಪದೇ ಪದೇ ನೆಪ ಹೇಳುತ್ತಿದ್ದಾರೆ. ಈ ಕೂಡಲೇ ಉದಯಗಿರಿ ಠಾಣಾ ಇನ್ಸ್ ಪೆಕ್ಟರ್ ಸುಧಾಕರ್ ಸಸ್ಪೆಂಡ್ ಆಗಬೇಕು. ಮುಡಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.
Key words: MUDA, protect, property, Gangaraju