Wednesday, August 5, 2026

BDA Apartments

Home Front Page ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳಲ್ಲಿ AI ಬಳಕೆ ಬಗ್ಗೆ ಸಂಸತ್‌ ನಲ್ಲಿ ಸಂಸದ ಯದುವೀರ್ ಪ್ರಸ್ತಾಪ

ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳಲ್ಲಿ AI ಬಳಕೆ ಬಗ್ಗೆ ಸಂಸತ್‌ ನಲ್ಲಿ ಸಂಸದ ಯದುವೀರ್ ಪ್ರಸ್ತಾಪ

ಮೈಸೂರು, ಆಗಸ್ಟ್,5, 2026(www.justkannada.in):  ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ವಿವಿಧ ಯೋಜನೆಗಳಲ್ಲಿ ಕೃತಕ ಬುದ್ಧಿಮತ್ತೆ (Artificial Intelligence – AI) ತಂತ್ರಜ್ಞಾನವನ್ನು ಅಳವಡಿಸುವ ಕುರಿತು ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದು, AI ಬಳಕೆಯ ಉದ್ದೇಶಗಳು, ಜಾರಿಗೆ ತರಲಿರುವ ಯೋಜನೆಗಳು, ವೈಯಕ್ತಿಕ ಮಾಹಿತಿಯ ಸುರಕ್ಷತೆ, ತಾರತಮ್ಯ ತಡೆಗಟ್ಟುವ ಕ್ರಮಗಳು ಹಾಗೂ ಸ್ವತಂತ್ರ ಮೌಲ್ಯಮಾಪನ ಮತ್ತು ಪರಿಶೀಲನೆ ಕುರಿತ ಮಾಹಿತಿಯನ್ನು ಅವರು ಸರ್ಕಾರದಿಂದ ಕೋರಿದ್ದರು.

ಇದಕ್ಕೆ ಉತ್ತರಿಸಿದ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು, ಭಾರತAI (IndiaAI) ಮಿಷನ್‌ನ ವ್ಯಾಪ್ತಿಯಲ್ಲಿ ದೇಶೀಯ ಕೃತಕ ಬುದ್ಧಿಮತ್ತೆ ಸಂಸ್ಥೆಗಳ ಸಹಯೋಗದೊಂದಿಗೆ ಡಿಜಿಟಲ್ ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು AI ಆಧಾರಿತ ತಂತ್ರಜ್ಞಾನಗಳ ಬಳಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ. ಬಹುಭಾಷಾ AI ಚಾಟ್‌ ಬಾಟ್‌ ಗಳು, ವರ್ಚುವಲ್ ಸಹಾಯಕ ವ್ಯವಸ್ಥೆಗಳು ಹಾಗೂ ಹಜ್ ಸುವಿಧಾ ಆಪ್ ಸೇರಿದಂತೆ ನಾಗರಿಕ ಸೇವೆಗಳನ್ನು ಮತ್ತಷ್ಟು ಸುಲಭಗೊಳಿಸುವ ಡಿಜಿಟಲ್ ವೇದಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಭಾರತ AI ಮಿಷನ್ ದೇಶದಲ್ಲಿ ಸುರಕ್ಷಿತ, ಸಮಗ್ರ ಹಾಗೂ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಪರಿಸರ ನಿರ್ಮಾಣದ ಉದ್ದೇಶ ಹೊಂದಿದ್ದು, ಕಂಪ್ಯೂಟ್ ಮೂಲಸೌಕರ್ಯ, ಫೌಂಡೇಶನ್ ಮಾದರಿಗಳು, ಅಪ್ಲಿಕೇಶನ್ ಅಭಿವೃದ್ಧಿ, AI ಡೇಟಾಸೆಟ್‌ ಗಳು, ಕೌಶಲ್ಯಾಭಿವೃದ್ಧಿ, ಸ್ಟಾರ್ಟ್‌ ಅಪ್ ಉತ್ತೇಜನ ಹಾಗೂ Safe & Trusted AI ಸೇರಿದಂತೆ ಏಳು ಪ್ರಮುಖ ಅಂಶಗಳನ್ನು ಒಳಗೊಂಡಿದೆ ಎಂದು ಸಚಿವಾಲಯ ತಿಳಿಸಿದೆ.

ಸರ್ಕಾರವು 2025ರ ನವೆಂಬರ್ 5ರಂದು ಬಿಡುಗಡೆ ಮಾಡಿದ India AI Governance Guidelines ಕೃತಕ ಬುದ್ಧಿಮತ್ತೆಯ ಸುರಕ್ಷಿತ, ನ್ಯಾಯಸಮ್ಮತ ಹಾಗೂ ಜವಾಬ್ದಾರಿಯುತ ಬಳಕೆಗೆ ಸಮಗ್ರ ಮಾರ್ಗಸೂಚಿಗಳನ್ನು ಒದಗಿಸುತ್ತವೆ. ವೈಯಕ್ತಿಕ ಮಾಹಿತಿಯ ಗೌಪ್ಯತೆ, ದತ್ತಾಂಶ ಸುರಕ್ಷತೆ, ಮಾಹಿತಿ ಭದ್ರತೆ, ದೂರು ನಿವಾರಣಾ ವ್ಯವಸ್ಥೆ ಹಾಗೂ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ–2023ರ ಅನುಸರಣೆಯೊಂದಿಗೆ AI ತಂತ್ರಜ್ಞಾನಗಳನ್ನು ಬಳಸಲಾಗುವುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, “ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಬಳಕೆಯು ಸರ್ಕಾರದ ಸೇವೆಗಳನ್ನು ಇನ್ನಷ್ಟು ಪಾರದರ್ಶಕ, ಪರಿಣಾಮಕಾರಿ ಹಾಗೂ ಜನಸ್ನೇಹಿಯಾಗಿಸಲು ಸಹಕಾರಿಯಾಗಲಿದೆ. ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ನಾಗರಿಕರ ಹಕ್ಕುಗಳು ಮತ್ತು ವೈಯಕ್ತಿಕ ಮಾಹಿತಿಯ ಸುರಕ್ಷತೆಯೂ ಸಮಾನವಾಗಿ ಕಾಪಾಡಲ್ಪಡುವುದು ಅತ್ಯಂತ ಮುಖ್ಯವಾಗಿದೆ,” ಎಂದು ಹೇಳಿದರು.

ಸಾರ್ವಜನಿಕ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವ, ತಂತ್ರಜ್ಞಾನ ಆಧಾರಿತ ಸುಧಾರಣೆಗಳನ್ನು ಉತ್ತೇಜಿಸುವ ಹಾಗೂ ಜನರಿಗೆ ಉತ್ತಮ ಆಡಳಿತವನ್ನು ಒದಗಿಸುವ ವಿಷಯಗಳನ್ನು ಮುಂದೆಯೂ ಸಂಸತ್‌ ನಲ್ಲಿ ಪ್ರಾಮುಖ್ಯತೆಯಿಂದ ಪ್ರಸ್ತಾಪಿಸುವುದಾಗಿ ಅವರು ತಿಳಿಸಿದರು.

Key words: MP Yaduvir, Parliament, use,  AI,  minority welfare schemes