ರಾಜ್ಯದ NH-275 ಹೆದ್ದಾರಿ ಸುರಕ್ಷತೆಗಾಗಿ ಕೇಂದ್ರದಿಂದ 94.08 ಕೋಟಿ ರೂ. ಅನುದಾನ- ಸಂಸದ ಯದುವೀರ್

ಮೈಸೂರು,ಜನವರಿ,13,2026 (www.justkannada.in):  ಕರ್ನಾಟಕದ ಅತ್ಯಂತ ಜನನಿಬಿಡ ಹೆದ್ದಾರಿಗಳಲ್ಲಿ ಒಂದಾದ NH-275 (ಬಂಟ್ವಾಳ-ಬೆಂಗಳೂರು ವಿಭಾಗ) ರಸ್ತೆಯ ಅಭಿವೃದ್ಧಿಗಾಗಿ (ಸಂಪಾಜೆಯಿಂದ ಕುಶಾಲನಗರವರೆಗೆ) ಕೇಂದ್ರ ಸರ್ಕಾರ  ಭರ್ಜರಿ ಕೊಡುಗೆ ನೀಡಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದ ಯದುವೀರ್,  ಈ ಹೆದ್ದಾರಿಯ ಆಯ್ದ ಭಾಗಗಳಲ್ಲಿ ತಡೆ (ರಕ್ಷಣಾ ಗೋಡೆಗಳು) ಗೋಡೆಗಳ ನಿರ್ಮಾಣ ಮತ್ತು ಸುರಕ್ಷತಾ ಕಾಮಗಾರಿಗಳಿಗಾಗಿ 94.08 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ವಿವರಿಸಲಾಗಿದೆ.

ಬಂಟ್ವಾಳ ಮತ್ತು ಬೆಂಗಳೂರು ನಡುವಿನ ಈ ಘಟ್ಟ ಪ್ರದೇಶದ ರಸ್ತೆಯು ಮಳೆಗಾಲದಲ್ಲಿ ಪದೇ ಪದೇ ಭೂಕುಸಿತಕ್ಕೆ ತುತ್ತಾಗುತ್ತಿತ್ತು. ಇದನ್ನು ತಡೆಗಟ್ಟಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಲು ಕಿಮೀ 78.000 ರಿಂದ 125.000 ವರೆಗಿನ (ಸಂಪಾಜೆಯಿಂದ ಕುಶಾಲನಗರ ವರೆಗೆ) ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಅನುದಾನ ಒದಗಿಸಲಾಗಿದೆ ಎಂದು ಸಂಸದ ಯದುವೀರ್ ತಿಳಿಸಿದ್ದಾರೆ.

ಈ ಯೋಜನೆಯನ್ನು EPC (Engineering, Procurement, and Construction) ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಪ್ರಮುಖ ಕಾಮಗಾರಿಗಳ ವಿವರಗಳು ಹೀಗಿವೆ..

ರಕ್ಷಣಾತ್ಮಕ ಗೋಡೆಗಳು: ಒಟ್ಟು 1,650 ಮೀಟರ್ ಉದ್ದದ ಆರ್‌ಸಿಸಿ ಕ್ಯಾಂಟಿಲಿವರ್ ರಿಟೇನಿಂಗ್‌ ವಾಲ್ ಮತ್ತು ಕಣಿವೆಯ ಬದಿಯಲ್ಲಿ ವಿಶೇಷವಾಗಿ 110 ಮೀಟರ್ ಉದ್ದದ ಪ್ರೆಶರ್ ರಿಲೀಫ್ ಗೋಡೆ ನಿರ್ಮಾಣ.

ಬ್ರೆಸ್ಟ್ ವಾಲ್ ಮತ್ತು ಚರಂಡಿ: ಗುಡ್ಡದ ಬದಿಯಲ್ಲಿ ಮಣ್ಣು ಕುಸಿಯದಂತೆ 1,910 ಮೀಟರ್ ಉದ್ದದ ಬ್ರೆಸ್ಟ್ ವಾಲ್ ಮತ್ತು ನೀರು ಸರಾಗವಾಗಿ ಹರಿಯಲು 2,720 ಮೀಟರ್ ಉದ್ದದ ಚೂಟ್ ಡ್ರೈನ್‌ ನಿರ್ಮಾಣ.

ತಿರುವುಗಳ ಸುಧಾರಣೆ: ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು 17 ಆಯ್ದ ಸ್ಥಳಗಳಲ್ಲಿ ಒಟ್ಟು 1,690 ಮೀಟರ್ ಉದ್ದದ ರಸ್ತೆ ವಿಸ್ತರಣೆ.

ಮೋರಿಗಳ ಪುನರ್‌ ನಿರ್ಮಾಣ: ಕಿಮೀ 77.750 ಮತ್ತು 89.670 ರಲ್ಲಿ ಹಳೆಯದಾದ ಎರಡು ಬಾಕ್ಸ್ ಮೋರಿಗಳನ್ನು ಮರು ನಿರ್ಮಿಸಲು ಕ್ರಮ.

ಸುರಕ್ಷತಾ ಕ್ರಮಗಳು: ರಕ್ಷಣಾತ್ಮಕ ಕ್ರಾಶ್ ಬ್ಯಾರಿಯರ್‌ ಗಳು ಮತ್ತು ಆಧುನಿಕ ಸಂಚಾರ ಸೂಚನಾ ಫಲಕಗಳ ಅಳವಡಿಕೆ.

ವೆಚ್ಚ ಮತ್ತು ಕಾಲಮಿತಿ:

ಒಟ್ಟು ಮೊತ್ತ: ರೂ. 94.08 ಕೋಟಿ (ಜಿಎಸ್‌ಟಿ ಮತ್ತು ನಿರ್ವಹಣಾ ವೆಚ್ಚ ಸೇರಿ)

ನಿರ್ಮಾಣ ಅವಧಿ: ಮಳೆಗಾಲವನ್ನೂ ಒಳಗೊಂಡಂತೆ 18 ತಿಂಗಳು

ನಿರ್ವಹಣೆ: ಗುತ್ತಿಗೆದಾರರು ಕಾಮಗಾರಿ ಮುಗಿದ ನಂತರ ಮುಂದಿನ 10 ವರ್ಷಗಳ ಕಾಲ ರಸ್ತೆಯ ನಿರ್ವಹಣೆ ಮಾಡಬೇಕು.

ಕಟ್ಟುನಿಟ್ಟಿನ ನಿಯಮಗಳು:

ಯೋಜನೆಯ ಗುಣಮಟ್ಟ ಕಾಪಾಡಲು ಸಚಿವಾಲಯವು ಹಲವು ಷರತ್ತು ವಿಧಿಸಿದೆ:

ಕಾಮಗಾರಿ ಆರಂಭಿಸುವ ಮುನ್ನ ಮತ್ತು ನಂತರ ನೆಟ್‌ ವರ್ಕ್ ಸರ್ವೆ ವೆಹಿಕಲ್ (NSV) ಮೂಲಕ ರಸ್ತೆಯ ಗುಣಮಟ್ಟವನ್ನು ದಾಖಲಿಸುವುದು ಕಡ್ಡಾಯಗೊಳಿಸಿದೆ. ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಏಕಕಾಲಕ್ಕೆ 3 ಕಿಮೀಗಿಂತ ಹೆಚ್ಚು ಉದ್ದದ ಕಾಮಗಾರಿ ನಡೆಸದಂತೆ ಸೂಚಿಸಲಾಗಿದೆ.

ಈ ಯೋಜನೆಯು ಪೂರ್ಣಗೊಂಡ ನಂತರ, ಬೆಂಗಳೂರು ಮತ್ತು ಕರಾವಳಿ ಭಾಗದ ನಡುವಿನ ಸಂಚಾರವು ಹವಾಮಾನ ವೈಪರೀತ್ಯಗಳ ಸಂದರ್ಭದಲ್ಲೂ ಹೆಚ್ಚು ಸುರಕ್ಷಿತ ಮತ್ತು ಸುಗಮವಾಗಲಿದೆ.

Key words: Rs 94.08 crore, Central Government, state, MP, Yaduveer