ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ: ಆಯುಷ್ಮಾನ್‌ ಆರೋಗ್ಯ ಮಂದಿರ ನಿರ್ಮಾಣಕ್ಕೆ ಅನುದಾನ ರಿಲೀಸ್

ಮೈಸೂರು, ಡಿಸೆಂಬರ್,30,2025 (www.justkannada.in): ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ನಮ್ಮ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಆಯುಷ್ಮಾನ್‌ ಆರೋಗ್ಯ ಮಂದಿರ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದ ಯದುವೀರ್‌, ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಲಾಗಿದೆ ಎಂಬ ವಿವರ ನೀಡಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಚಿಕ್ಕ ಹೊಸೂರು (ಕೊಪ್ಪ) ದಲ್ಲಿ ಆಯುಷ್ಮಾನ್‌ ಆರೋಗ್ಯ ಮಂದಿರ ನಿರ್ಮಾಣಕ್ಕೆ 65 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಆಯುಷ್ಮಾನ್‌ ಆರೋಗ್ಯ ಮಂದಿರ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಪೂರಕವಾಗಿ ಸ್ಪಂದಿಸಿ ಈಗ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದ ಯದುವೀರ್ ತಿಳಿಸಿದ್ದಾರೆ.

ಅತಿ ಶೀಘ್ರದಲ್ಲೇ ನಮ್ಮ ಕ್ಷೇತ್ರದ ಪಿರಿಯಾಪಟ್ಟಣ, ಹುಣಸೂರಿನ ವಿವಿಧ ಭಾಗಗಳಲ್ಲಿ ಆಯುಷ್ಮಾನ್‌ ಆರೋಗ್ಯ ಮಂದಿರ ನಿರ್ಮಾಣವಾಗಲಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದ್ದಾರೆ.

ಪಿಎಂ-ಎಬಿಎಚ್‌ ಐಎಂ ಯೋಜನೆಯಡಿ ಮೈಸೂರು ಕ್ಷೇತ್ರದಲ್ಲಿ ಆಯುಷ್ಮಾನ್‌ ಆರೋಗ್ಯ ಮಂದಿರಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಪಿರಿಯಾ ಪಟ್ಟಣ ತಾಲೂಕಿನ ಚಿಕ್ಕಹೊಸರು (ಕೊಪ್ಪ), ಕೀರನಹಳ್ಳಿ (ದೊಡ್ಡ ಬ್ಯಾಲಾಳು), ದೊಡ್ಡ ಹರವೆ (ಕೊಪ್ಪ), ಎನ್‌.ಶೆಟ್ಟಿಹಳ್ಳಿ ತಮ್ಮಡಹಳ್ಳಿ (ಕಿತ್ತೂರು), ಮಂಟಿಹಳ್ಳಿ ಬೆಳಗಲಿ (ಚಿಕ್ಕನೇರಳೆ), ಕೊಯಮತ್ತೂರು, ಬಲ್ಲೇನಹಳ್ಳಿ (ರತ್ನಪುರಿ) ಗ್ರಾಮದಲ್ಲಿ ಆಯುಷ್ಮಾನ್‌ ಆರೋಗ್ಯ ಮಂದಿರಗಳನ್ನು ತಲಾ 65 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಸಂಸದ ಯದುವೀರ್‌ ಒಡೆಯರ್‌ ಮಾಹಿತಿ ನೀಡಿದ್ದಾರೆ.

ಎಲ್ಲರಿಗೂ ಉತ್ತಮ ಅರೋಗ್ಯ ಒದಗಿಸಬೇಕು ಬೇಕು ಎಂಬುದು ನಮ್ಮ ಆದ್ಯತೆಯಾಗಿದೆ. ಸುಲಭ ಹಾಗೂ ಸೂಕ್ತ ಸಮಯದಲ್ಲಿ ಆರೋಗ್ಯ ಒದಗಿಸುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ನಾವು ಬದ್ಧರಾಗಿದ್ದೇವೆ. ಸಾರ್ವಜನಿಕರು ಕೂಡ ಈ ನಿಟ್ಟಿನಲ್ಲಿ ಕೈ ಜೋಡಿಸಬೇಕು ಎಂದು ಸಂಸದ ಯದುವೀರ್ ಮನವಿ ಮಾಡಿದ್ದಾರೆ.

Key words: MP, Yaduveer, Grant, released, Ayushman Arogya Mandir