ಮೈಸೂರು,ಮೇ,27,2025 (www.justkannada.in): ರಾಜ್ಯದಲ್ಲಿ ಎಂಎಸ್ ಡಿಎಲ್ ರಾಯಭಾರಿಯಾಗಿ ತಮನ್ನಾ ನೇಮಕ ವಿಚಾರ ಮತ್ತು ಮೈಸೂರು ಪಾಕ್ ಹೆಸರು ಬದಲಾವಣೆ ವಿಚಾರ ಭಾರಿ ಚರ್ಚೆಯಾಗುತ್ತಿದ್ದು ಈ ಕುರಿತು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಂಸದ ಯದುವೀರ್, ಮೈಸೂರು ಪಾಕ್ ಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧ ಇಲ್ಲ. ಪಾಕ ಎನ್ನುವ ಸಂಸ್ಕೃತ ಅದು. ಪಾಕ ಎಂದರೆ ಸಿಹಿ ಎಂದರ್ಥ ಬರುತ್ತದೆ. ಪಾಕ್ ಎಂಬ ಪದ ಇದೆ ಎಂದು ಅದನ್ನ ಬದಲಾಯಿಸುವುದು ಸರಿಯಲ್ಲ. ಮೈಸೂರು ಪಾಕ್ ಗೆ ಎಷ್ಟೋ ವರ್ಷಗಳ ಇತಿಹಾಸ ಇದೆ. ಅದೇ ರೀತಿ ಮಾಡುತ್ತಾ ಹೋದರೆ ಎಷ್ಟೋ ಹೆಸರುಗಳ ಬದಲಾಯಿಸಬೇಕಾಗುತ್ತದೆ. ಅದೆಲ್ಲ ಈಗ ಅಪ್ರಸ್ತುತ ಎಂದು ಹೇಳಿದರು.
ನಾನು ರಾಯಭಾರಿ ಆಗಲ್ಲ, ಅದರ ಬಗ್ಗೆ ನನಗೆ ಆಸಕ್ತಿನೂ ಇಲ್ಲ
ಎಂಎಸ್ ಡಿಎಲ್ ರಾಯಭಾರಿಯಾಗಿ ತಮನ್ನಾ ನೇಮಕ ವಿಚಾರ ಮತ್ತು ತಾವೇ ಎಂಎಸ್ ಡಿಎಲ್ ರಾಯಭಾರಿಯಾಗಲು ಆಗ್ರಹ ಕೇಳಿ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಮೈಸೂರು ಸ್ಯಾಂಡಲ್ ಸೋಪಿನ ಜಾಹೀರಾತಿಗೆ ರಾಯಭಾರಿಯಾಗಲು ನಿರಾಕರಿಸಿದ್ದಾರೆ.
ನಾನು ರಾಯಭಾರಿ ಆಗಲ್ಲ, ಅದರ ಬಗ್ಗೆ ನನಗೆ ಆಸಕ್ತಿನೂ ಇಲ್ಲ. ನಾನು ಜನ ಸೇವಾ ಕ್ಷೇತ್ರದಲ್ಲಿದ್ದೇನೆ. ನಾನು ಅದಕ್ಕೆಲ್ಲ ಹೋಗಲ್ಲ. ನನ್ನ ಕೆಲಸವೇ ಬೇಕಾದಷ್ಟು ಇದೆ. ಮೈಸೂರು ಸ್ಯಾಂಡಲ್ ಸೋಪಿಗೆ ಅದರದೇ ಆದ ಐತಿಹ್ಯವಿದೆ. ಅದಕ್ಕೆ ದೇಶಾದ್ಯಂತ ತನ್ನದೇ ಆದ ಮಾರುಕಟ್ಟೆ ಇದೆ. ದೇಶದ ಮಟ್ಟದಲ್ಲಿ ಪ್ರಸಿದ್ಧಿಯಾಗಿರುವ ಕನ್ನಡದ ಕಲಾವಿದರಿಂದ ಜಾಹೀರಾತು ಕೊಡಿಸಲಿ. ಅನ್ಯ ಭಾಷಿಗ ಕಲಾವಿದರಿಗೆ ಹೆಚ್ಚು ಸಂಭಾವನೆ ಕೊಟ್ಟು ರಾಯಭಾರಿಯಾಗಿಸುವ ಅಗತ್ಯ ಇಲ್ಲ ಎಂದರು.
Key words: MP, Yaduveer, Mysore Pak, name, change, , MSDL, ambassador