ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಸಂಸದ ಶ್ರೀನಿವಾಸ್ ಪ್ರಸಾದ್.

ಮೈಸೂರು,ಡಿಸೆಂಬರ್,7,2021(www.justkannada.in):  ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಘುಕೌಟಿಲ್ಯ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ವಿಧಾನಪರಿಷತ್ ಚುನಾವಣೆ ಮತದಾನಕ್ಕೆ ಮೂರು ದಿನಗಳು ಮಾತ್ರ ಬಾಕಿ ಇರುವ ಹಿನ್ನೆಲೆ ಚಾಮರಾಜನಗರ ಸಂಸದ ವಿ ಶ್ರೀನಿವಾಸಪ್ರಸಾದ್  ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಪರವಾಗಿ ಪ್ರಚಾರಕ್ಕೆ ತೆರಳಲು ನನಗೆ ಸಾಧ್ಯವಾಗಿಲ್ಲ. ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ವ್ಯಾಪಕ ಪ್ರಚಾರ ಮಾಡಿದ್ದಾರೆ. ಆರೋಗ್ಯ ಸರಿಯಿಲ್ಲದ ಕಾರಣ ನಾನು ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದರು.

ಮೊದಲೆಲ್ಲಾ ಕಾಂಗ್ರೆಸ್ ಜೆಡಿಎಸ್ ನಡುವೆ ಮಾತ್ರ ನೇರ ಸ್ಪರ್ಧೆ ಏರ್ಪಡುತ್ತಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಪ್ರಬಲವಾಗಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೌಟಿಲ್ಯ ಗೆಲುವು ಸಾಧಿಸಲಿದ್ದಾರೆ. ರಘು ಕೌಟಿಲ್ಯ ಗೆಲುವಿನ ಬಗ್ಗೆ ವಿಶ್ವಾಸವಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಆರು ವರ್ಷಗಳ ಚುನಾವಣೆಯಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಬಹಳಷ್ಟು ಬದಲಾವಣೆ ಆಗಿದೆ. ಬಿಜೆಪಿಯಲ್ಲಿ ಸಂಘಟನಾ ಕಾರ್ಯ ಚೆನ್ನಾಗಿದೆ ಎಂದು ಸಂಸದ ವಿ ಶ್ರೀನಿವಾಸಪ್ರಸಾದ್ ನುಡಿದರು.

ತಮ್ಮನ್ನೇ ಹೀನಾಯವಾಗಿ ಸೋಲಿಸಿದವರ ಕೈ ಜೋಡಿಸಿರುವುದು ಹಾಸ್ಯಸ್ಪದ.

ಮೈಸೂರು ಜಿಲ್ಲೆಯಲ್ಲಿ ಸಿದ್ದರಾಮಯ್ಯ-ಜಿ ಟಿ ದೇವೇಗೌಡ ಹತ್ತಿರವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದ ಶ್ರೀನಿವಾಸ್ ಪ್ರಸಾದ್,  ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಜಿ ಟಿ ದೇವೇಗೌಡ ಹೀನಾಯವಾಗಿ ಸೋಲಿಸಿದ್ದಾರೆ‌. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದುಕೊಂಡು 36 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಬಾದಾಮಿಯಲ್ಲೂ ಅಲ್ಪ ಮತಗಳಿಂದ ಗೆದ್ದರು. ಇಲ್ಲದಿದ್ದರೆ ಸಿದ್ದರಾಮಯ್ಯನ ಹುಂಡಿಗೆ ಹೋಗಬೇಕಾಗಿತ್ತು. ವಾಸ್ತವ ಹೀಗಿದ್ದರೂ ತಮ್ಮನ್ನು ಹೀನಾಯವಾಗಿ ಸೋಲಿಸಿದ ಜಿ ಟಿ ದೇವೇಗೌಡ ಜೊತೆ ಸಿದ್ದರಾಮಯ್ಯ ಕೈಜೋಡಿಸಿರುವುದು ನಗೆಪಾಟಲಿಗೀಡಾಗಿದೆ, ಹಾಸ್ಯಾಸ್ಪದ ಆಗಿದೆ ಎಂದು ಟೀಕಿಸಿದರು.

ಆರ್ ಎಸ್ ಎಸ್ ನ್ನು ವ್ಯಾಪಕವಾಗಿ ಟೀಕಿಸುತ್ತಿದ್ದ ಜೆಡಿಎಸ್ ಇದೀಗ ಬಿಜೆಪಿ ಜೊತೆ ಹೊಂದಾಣಿಕೆಗೆ ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್, ಆರ್ ಎಸ್ ಎಸ್ ರಾಜಕೀಯ ಪಕ್ಷವಲ್ಲ, ಅದೊಂದು ಸಾಂಸ್ಕೃತಿಕ ಸಂಘಟನೆ ಆಗಿದೆ‌. ಆರ್ ಎಸ್ ಎಸ್ ಬಗ್ಗೆ ಯಾಕೆ ಟೀಕೆ ಮಾಡ್ತಾರೋ‌ ಗೊತ್ತಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆ ಜೆಡಿಎಸ್ ಬೆಂಬಲದ ಅಗತ್ಯವಿಲ್ಲ. ಕೇವಲ ನಾಲ್ಕೈದು ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲ ನೀಡಿದರೆ ಬಿಜೆಪಿಗೆ ಅನುಕೂಲ ಆಗಲಿದೆಯಷ್ಟೇ. ಹೈಕಮಾಂಡ್ ಮಟ್ಟದಲ್ಲಿ ಬೆಂಬಲ ಪಡೆಯುವ ವಿಚಾರ ನಿರ್ಧಾರವಾಗಲಿದೆ. ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯರಿಗೆ ಮೊದಲ ಪ್ರಾಶಸ್ತ್ಯದ ಮತಗಳನ್ನು ನೀಡಿ ಗೆಲ್ಲಿಸಬೇಕು‌ ಎಂದು ಮನವಿ ಮಾಡಿದರು.

Key words: MP -Srinivas Prasad -expressed -confidence – victory – BJP candidate