ಬೆಂಗಳೂರು, ಆಗಸ್ಟ್ 23,2025 (www.justkannada.in): ಜರ್ಮನಿಯ ಬಾನ್ ನಲ್ಲಿ ಆಗಸ್ಟ್ 24 ರಿಂದ 29 ರವರೆಗೆ ನಡೆಯಲಿರುವ ಪ್ರತಿಷ್ಠಿತ ಗ್ಲೋಬಲ್ ಚೇಂಜ್ ಮೇಕರ್ ಅಕಾಡೆಮಿ ಫಾರ್ ಪಾರ್ಲಿಮೆಂಟೇರಿಯನ್ಸ್ (ಜಿ-ಸಿಎಪಿ) 2025 ನಲ್ಲಿ ಭಾಗವಹಿಸಲು ಸಂಸದ ಡಾ.ಕೆ.ಸುಧಾಕರ್ ಅವರಿಗೆ ಆಹ್ವಾನ ಬಂದಿದೆ.
ಯುನೈಟೆಡ್ ನೇಷನ್ಸ್ ಸಿಸ್ಟಮ್ ಸ್ಟಾಫ್ ಕಾಲೇಜು, ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಟು ಕಾಂಬ್ಯಾಟ್ ಡೆಸರ್ಟಿಫಿಕೇಶನ್ (UNCCD) ಮತ್ತು ಜಿ20 ಗ್ಲೋಬಲ್ ಲ್ಯಾಂಡ್ ಇನಿಶಿಯೇಟಿವ್ ಸಂಯುಕ್ತಾಶ್ರಯದಲ್ಲಿ ಆಯೋಜನೆಯಾಗಿರುವ ಈ ಜಾಗತಿಕ ಸಮಾವೇಶವು ವಿವಿಧ ದೇಶಗಳ ಕಾನೂನು ರೂಪಿಸುವವರನ್ನು ಒಂದುಗೂಡಿಸಲಿದೆ. ಇಲ್ಲಿ ಸುಸ್ಥಿರ ಅಭಿವೃದ್ಧಿ, ಭೂ ರಕ್ಷಣೆ, ಹವಾಮಾನ ನಿರ್ವಹಣೆ ಮತ್ತು ನೀತಿಗಳ ಆವಿಷ್ಕಾರದಂತಹ ವಿಷಯಗಳ ಕುರಿತು ಚರ್ಚೆಯಾಗಲಿದೆ.
ಪರಿಸರ ಸಂರಕ್ಷಣೆ, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ, ಗ್ರಾಮೀಣಾಭಿವೃದ್ಧಿ ಮತ್ತು ಸುಸ್ಥಿರ ಕೃಷಿಯಂತಹ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಸಂಸದ ಡಾ.ಕೆ.ಸುಧಾಕರ್ ಅವರನ್ನು ಈ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಡಾ.ಕೆ.ಸುಧಾಕರ್ ಅವರು, ಈ ಆಹ್ವಾನ ಪಡೆದ ಭಾರತದ ಏಕೈಕ ಸಂಸತ್ತು ಸದಸ್ಯರಾಗಿದ್ದಾರೆ.
ಈ ಕುರಿತು ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, “ಈ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವುದು ಬಹಳ ಹೆಮ್ಮೆಯ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ಹವಾಮಾನ ನಿರ್ವಹಣೆ, ಭೂ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ವಿಷಯಗಳಲ್ಲಿ ಮಹತ್ವಕಾಂಕ್ಷೆಯ ಗುರಿಗಳನ್ನು ಹೊಂದಿದೆ. ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯಿಂದ ಆರಂಭವಾಗಿ ಅರಣ್ಯೀಕರಣದ ಕಾರ್ಯಕ್ರಮಗಳವರೆಗೂ ನಮ್ಮ ಸರ್ಕಾರದ ಯಶಸ್ಸಿನ ಗಾಥೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ಬಂಜರು ಭೂಮಿ ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಭಾರತದ ಹೋರಾಟವನ್ನು ಮತ್ತಷ್ಟು ಬಲಪಡಿಸಲು, ಜಾಗತಿಕ ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತಿರುವ ಅತ್ಯುತ್ತಮ ಕ್ರಮಗಳನ್ನು ಕಲಿಯಲು ಇದು ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (SDG) ಕೊಡುಗೆ ನೀಡುವ ಪರಿಣಾಮಕಾರಿ ನೀತಿಗಳನ್ನು ರೂಪಿಸಲು ಸಂಸದರಿಗೆ ಗ್ಲೋಬಲ್ ಚೇಂಜ್ ಮೇಕರ್ ಅಕಾಡೆಮಿ ನೆರವಾಗುತ್ತದೆ. ಈ ಕುರಿತು ಅಕಾಡೆಮಿಯು ಸಂಸದರಿಗೆ ಜ್ಞಾನ ಮತ್ತು ಸಾಧನಗಳ ಸಹಾಯ ಒದಗಿಸುತ್ತದೆ. ಪ್ರಮುಖವಾಗಿ ಭೂ ರಕ್ಷಣೆ, ಹವಾಮಾನ ನಿರ್ವಹಣೆ ಮತ್ತು ಜನ ಸಮುದಾಯಗಳು ಪರಿಸರಕ್ಕೆ ತಕ್ಕಂತೆ ಹೊಂದಿಕೊಂಡು ಬದುಕುವ ಬಗ್ಗೆ ಮಾಹಿತಿ ನೀಡುತ್ತದೆ.
ಸಂಸದ ಡಾ.ಕೆ.ಸುಧಾಕರ್ ಅವರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವುದರಿಂದ, ಜಾಗತಿಕ ಹವಾಮಾನ ನಿರ್ವಹಣೆಯಲ್ಲಿ ಭಾರತದ ನಾಯಕತ್ವಕ್ಕೆ ಪುಷ್ಟಿ ದೊರೆತಿದೆ. ಸುಸ್ಥಿರ ಭವಿಷ್ಯವನ್ನು ನಿರ್ಮಿಸುವಲ್ಲಿ ಸಂಸದರು ತೊಡಗಿಸಿಕೊಳ್ಳುವುದರ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ.
Key words: G-CAP 2025, Global Conference , Germany, MP, Dr. K. Sudhakar