ಮಂಡ್ಯ,ಆಗಸ್ಟ್,26,2025 (www.justkannada.in): ತಾಯಿ ಹಾಲು ಕೊರತೆಯುಳ್ಳ ಮಕ್ಕಳಿಗೆ ಬೇರೆ ತಾಯಂದಿರಿಂದ ಸುರಕ್ಷಿತವಾಗಿ ಸಂಗ್ರಹಿಸಲ್ಪಟ್ಟ ಹಾಲನ್ನು ನೀಡುವುದರಿಂದ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದ್ದು, ಈ ನಿಟ್ಟಿನಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ತಾಯಿ ಹಾಲಿನ ಬ್ಯಾಂಕ್ ಸ್ಥಾಪನೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಭೇಟಿ ನೀಡಿದ ಸಿಇಒ ಕೆಆರ್ ನಂದಿನಿ ಅವರು, ತಾಯಿ ಹಾಲಿನ ಬ್ಯಾಂಕ್ ಮತ್ತು Midwifery Led Labour Care Unit ಸ್ಥಾಪಿಸಲು ಸೂಕ್ತವಾದ ಸ್ಥಳ ಲಭ್ಯವಿರುವ ಬಗ್ಗೆ ಹಾಗೂ ಸದರಿ ಸ್ಥಳವು ಪಾರಂಪರಿಕ ಕಟ್ಟಡವಾಗಿರುವುದರಿಂದ ಯಾವುದೇ ಹಾನಿಯಾಗದಂತೆ ತಾಯಿ ಹಾಲಿನ ಬ್ಯಾಂಕ್ ಮತ್ತು MLCU ಘಟಕಗಳನ್ನು ಸ್ಥಾಪಿಸಲು ಪರಿಶೀಲನೆ ನಡೆಸಿದರು.
ತಾಯಿ ಹಾಲಿನ ಬ್ಯಾಂಕ್ ಸಮಾಲೋಚನಾ ಕೊಠಡಿ, ಶುಶ್ರೂಷಕಿಯರ ಕೊಠಡಿ, ಸ್ಟೆರಲೈಜ್ ಏರಿಯಾ, ಎಕ್ಸ್ ಪ್ರೆಷನ್ ಕೊಠಡಿ, ನವಜಾತ ಶಿಶುಗಳ ನಿಗಾ ಘಟಕ, ಡೀಪ್ ಪ್ರೀಜರ್, ಮಿಲ್ಕ್ ಅನಲೈಜರ್, ಬಯೋ ಮೆಡಿಕಲ್ ವೇಸ್ಟ್ ಘಟಕ, ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಶೌಚಾಲಯವನ್ನು ಒಳಗೊಂಡಿರುತ್ತದೆ.
MLCU ಘಟಕದಲ್ಲಿ ಕಡಿಮೆ ಅಪಾಯವಿರುವ ಹೆರಿಗೆಗಳನ್ನು ಸ್ವಾಭಾವಿಕವಾಗಿ ಹೆರಿಗೆ ಮಾಡಿಸಲು ಅಗತ್ಯವಿರುವ ವಾರ್ಡ್ ಗಳು, ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಶೌಚಾಲಯಗಳು, ವ್ಯಾಯಮ ಮಾಡಲು ಅಗತ್ಯ ಪರಿಕರಗಳು ಸೇರಿದಂತೆ ಇನ್ನಿತರೆ ಘಟಕಗಳನ್ನು ಒಳಗೊಂಡಿರಲಿದೆ ಎಂದು ಹೇಳಿದರು.
ಶಿಶು ಮರಣ ಪ್ರಮಾಣ ಮತ್ತು ತಾಯಿ ಮರಣ ಪ್ರಮಾಣವನ್ನು ತಡೆಗಟ್ಟಲು ತಾಯಿ ಹಾಲಿನ ಬ್ಯಾಂಕ್ ಮತ್ತು MLCU ಘಟಕಗಳು ಅತ್ಯಗತ್ಯವಾಗಿದ್ದು, ತಾಯಿ ಹಾಲು ದೊರೆಯದ ನವಜಾತ ಶಿಶುಗಳಿಗೆ ಸಂಗ್ರಹಿಸಿದ ಹಾಲು ಪೂರೈಸುವುದರಿಂದ ಮಕ್ಕಳ ಜೀವ ಉಳಿಸಬಹುದಾಗಿದ್ದು, ಹಾಗೂ ಕಡಿಮೆ ಅಪಾಯವಿರುವ ಹೆರಿಗೆಗಳನ್ನು ಪ್ರತ್ಯೇಕಗೊಳಿಸಿ ಹೆಚ್ಚು ಅಪಾಯವಿರುವ ಹೆರಿಗೆಗಳ ಬಗ್ಗೆ ತೀವ್ರ ನಿಗಾ ಇಡುವುದರಿಂದ ತಾಯಿ ಮರಣ ಪ್ರಮಾಣವನ್ನು ತಗ್ಗಿಸುವ ಮೂಲಕ ಸ್ವಾಭಾವಿಕ ಹೆರಿಗೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ನರಸಿಂಹ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ನಾಗರಾಜು, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ. ಮನೋಹರ್, ಶಿಶು ವೈದ್ಯರಾದ ಡಾ. ಚೇತನ್ ಸೇರಿದಂತೆ ಇತರರು ಹಾಜರಿದ್ದರು.
Key words: Mandya ZP, CEO, inspects, mother’s milk bank