ಮೈಸೂರು, ಆಗಸ್ಟ್,22, 2025 (www.justkannada.in): ಮೈಸೂರು ಜಿಲ್ಲೆಯ ಏಳು ಗ್ರಾಮಗಳನ್ನು ಕೇಂದ್ರ ಸರ್ಕಾರದ ಪ್ರತಿಷ್ಠಿತ ʻಮಾದರಿ ಸೌರ ಗ್ರಾಮʼ ಯೋಜನೆಯಡಿ ಸ್ಪರ್ಧಾ ಗ್ರಮಗಳೆಂದು ಆಯ್ಕೆ ಮಾಡಲಾಗಿದ್ದು, ಅಂತಿಮಾಗಿ ಆಯ್ಕೆಯಾದ ಗ್ರಾಮಕ್ಕೆ ಭಾರತ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ (ಎಂಎನ್‌ಆರ್‌ಇ) 1 ಕೋಟಿ ರೂ.ಪ್ರೋತ್ಸಾಹಧನ ಲಭಿಸಲಿದೆ.
ಮೈಸೂರಿನ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಸಮಿತಿ(ಡಿಎಲ್‌ಸಿ) ಸಭೆಯಲ್ಲಿ ಏಳು ಗ್ರಾಮಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಜಿಲ್ಲೆಯ ವರಕೊಡು, ಬಿಳಿಕೆರೆ, ಗಂಧನಹಳ್ಳಿ, ಸಾಲಿಗ್ರಾಮ, ತಾಂಡವಪುರ, ಮೂಗೂರು ಮತ್ತು ಬೆಟ್ಟದಪುರ ಗ್ರಾಮಗಳನ್ನು ಮಾದರಿ ಸೌರ ಗ್ರಾಮ ಯೋಜನೆಯ ಸ್ಪರ್ಧಾ(Candidate) ಗ್ರಾಮಗಳೆಂದು ಗುರುತಿಸಲಾಗಿದೆ.
ಸ್ಪರ್ಧಾ ಅವಧಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಗಳ ನೇತೃತ್ವದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು.
– ವಸತಿ ಮನೆಗಳಿಗೆ ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆ ಅಡಿಯಲ್ಲಿ ಮೇಲ್ಛಾವಣಿ ಸೌರಶಕ್ತಿ ಅಳವಡಿಸುವುದು.
– ಇತರ ಗ್ರಾಹಕರಿಗೆ ಸಬ್ಸಿಡಿ ರಹಿತ ಯೋಜನೆ ಅಡಿಯಲ್ಲಿ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆಗೆ ಪ್ರೋತ್ಸಾಹ ನೀಡುವುದು.
– ನೀರಾವರಿ ಪಂಪ್ ಸೆಟ್ ಗಳಿಗೆ ಪಿಎಂ-ಕುಸುಮ್ ಯೋಜನೆ ಅಡಿಯಲ್ಲಿ ಅನುಷ್ಠಾನಕ್ಕೆ ಪ್ರೋತ್ಸಾಹಿಸುವುದು.
– ಸರ್ಕಾರಿ ಕಟ್ಟಡಗಳ ಮೇಲೆ ಸೌರ ಶಕ್ತಿ ಅಳವಡಿಸುವುದು (ಅಳವಡಿಕೆಗೆ ಅನುದಾನವನ್ನು ಪಿಪಿಪಿ/ಆರ್‌ಸಿಎಸ್‌ಸಿಒ/ಬಜೆಟ್‌ನಲ್ಲಿ ಅನುದಾನ)
– ಕುಡಿಯುವ ನೀರಿನ ಹಾಗೂ ಬೀದಿ ದೀಪಗಳಿಗೆ ಸೌರಶಕ್ತಿ ಅಳವಡಿಸುವುದು.
ಈ ಸ್ಪರ್ಧೆಯು ಪ್ರಸಕ್ತ ವರ್ಷದ ಜುಲೈ 1ರಿಂದ ಡಿಸೆಂಬರ್ 31ರವರೆಗೆ ನಡೆಯಲಿದ್ದು, ಸ್ಪರ್ಧೆಯ ಅಂತ್ಯದಲ್ಲಿ ಮೌಲ್ಯಮಾಪನದ ಆಧಾರದ ಮೇಲೆ ಗರಿಷ್ಠ ನವೀಕರಿಸಬಹುದಾದ ಇಂಧನ ಬಳಸಿದ ಗ್ರಾಮವನ್ನು “ಮಾದರಿ ಸೌರ ಗ್ರಾಮ” ಎಂದು ಘೋಷಿಸಲಾಗುವುದು. ಹೀಗೆ ಆಯ್ಕೆಯಾದ ಗ್ರಾಮಕ್ಕೆ ಭಾರತ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ (ಎಂಎನ್‌ಆರ್‌ಇ) ವತಿಯಿಂದ 1 ಕೋಟಿ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ಮೈಸೂರಿನ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: ‘Model Solar Village’, competition, Mysore district