ಕೆಆರ್ ಎಸ್ ನಲ್ಲಿ ಮೇ 11 ರಂದು ಅಣಕು ಪ್ರದರ್ಶನ: ಸಾರ್ವಜನಿಕರಲ್ಲಿ ಆತಂಕ ಬೇಡ : ಡಿಸಿ ಡಾ.ಕುಮಾರ

ಮಂಡ್ಯ, ಮೇ.9,2025 (www.justkannada.in): ತುರ್ತು ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಸಾರ್ವಜನಿಕರು, ಪ್ರವಾಸಿಗರು, ಅಣೆಕಟ್ಟು ರಕ್ಷಣೆ ಮಾಡುವ ಕುರಿತಂತೆ ಆಪರೇಷನ್ ಅಭ್ಯಾಸ್ ಅಣಕು ಪ್ರದರ್ಶನವನ್ನು  ಕೆ.ಆರ್.ಎಸ್ ಬೃಂದಾವನ ಉದ್ಯಾನವನದಲ್ಲಿ  ಮೇ.11 ರಂದು ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ಅಣಕು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ‌.  ಇದು ಅಣಕು ಕಾರ್ಯಚರಣೆ ಮಾತ್ರವಾಗಿದ್ದು ಸಾರ್ವಜನಿಕರು, ಪ್ರವಾಸಿಗರು  ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಸಿ ಡಾ.ಕುಮಾರ, ಬೆಂಕಿ ಅನಾಹುತಗಳು, ಅವಘಡ, ತುರ್ತು‌ ಸಂದರ್ಭದಲ್ಲಿ ಜನರು ಗಾಬರಿ ಅಥವಾ ಆತಂಕಕ್ಕೆ ಒಳಗಾಗದಂತೆ ಆತ್ಮ ವಿಶ್ವಾಸ ತುಂಬಿ, ಅರಿವು ಮೂಡಿಸುವ ಉದ್ದೇಶದಿಂದ ಅಣುಕು ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ಅಣಕು ಕಾರ್ಯಚರಣೆ ಸಂದರ್ಭದಲ್ಲಿ ಜಿಲ್ಲೆಯ ಜನತೆ ಯಾವುದೇ ರೀತಿಯ ಗಾಬರಿ, ಆತಂಕಕ್ಕೆ ಒಳಗಾಗದೇ  ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು ಎಂದರು.

ಕೆ.ಆರ್.ಎಸ್ ಅಣೆಕಟ್ಟಿನಲ್ಲಿ ಬೆಂಕಿ ಅವಘಡ  ಕುರಿತು ಅಣುಕು ಪ್ರದರ್ಶನ ನಡೆಸಿ ಅರಿವು ಮೂಡಿಸುವ ಕಾರ್ಯಾಚರಣೆ  ನಡೆಸಲಾಗುವುದು.  ತುರ್ತು ಸಂದರ್ಭದಲ್ಲಿ ನಾಗರೀಕರ ರಕ್ಷಣೆ , ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಿಕೆ, ಗಾಯಗೊಂಡವರಿಗೆ ಆಸ್ಪತ್ರೆಗೆ ಸ್ಥಳಾಂತರಿಸುವ ಕುರಿತಂತೆ, ಬ್ಲಾಕ್ ಔಟ್ ಚಟುವಟಿಕೆಗಳ ಅಣಕು ಕಾರ್ಯಚರಣೆ ಮಾಡಲಾಗುತ್ತದೆ ಎಂದರು.

ಅಣುಕು‌ ಕಾರ್ಯಾಚರಣೆಗೆ ವಾರ್ನಿಂಗ್ ಟೀಂ, ಕಂಟ್ರೋಲ್‌ ರೂಂ, ಇವ್ಯಾಕುಯೇಷನ್ ಟೀಂ, ಅಗ್ನಿಶಾಮಕ ದಳ, ಎನ್.ಸಿ.ಸಿ. ತಂಡ, ಹೋಂ ಗಾಡ್೯, ಪೊಲೀಸ್ ಇಲಾಖೆ, ಪ್ರಥಮ ಚಿಕಿತ್ಸೆ, ವೈದ್ಯಕೀಯ ತಂಡ, ಸಾರಿಗೆ ತಂಡ, ಸಂವಾಹನ ತಂಡಗಳನ್ನು ರಚಿಸಿ  ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ವಹಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಮೇ 11 ರಂದು ನಡೆಯುವ ಅಣುಕು‌ ಪ್ರದರ್ಶನದ ಬಗ್ಗೆ ಕೆ‌ಆರ್ ಎಸ್ ಗೆ‌ ಆಗಮಿಸುವ ಪ್ರವಾಸಿಗರು ಹಾಗೂ ಸುತ್ತಮುತ್ತಲಿನ ಗ್ರಾಮದವರಿಗೆ ಮಾಹಿತಿ ನೀಡಿ ಅರಿವು ಮೂಡಿಸಬೇಕು. ಪ್ರವಾಸಿಗರಿಗೆ ಧ್ವನಿವರ್ಧಕದ ಮೂಲಕ ಹೆಚ್ಚಿನ ಪ್ರಚಾರವನ್ನು ನೀಡುವಂತೆ ತಿಳಿಸಿದರು.

ಸಭೆಯಲ್ಲಿ ಅಣುಕು ಪ್ರದರ್ಶನದ ನೋಡಲ್ ಅಧಿಕಾರಿ ಕೆ.ಎಸ್ ಶಿವಶಂಕರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಅಗ್ನಿ ಶಾಮಕ ಅಧಿಕಾರಿ ರಾಘವೇಂದ್ರ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Mock Drill, May 11, KRS, DC, Dr. Kumar