ಮೊಬೈಲ್ ಆಸೆಗೆ ಬಾಲಕ ಬಲಿ: ಕೆರೆಯಲ್ಲಿ ಶವ ಪತ್ತೆ.

ಮೈಸೂರು,ಮಾರ್ಚ್,1,2022(www.justkannada.in): ಮೊಬೈಲ್ ಆಸೆಗೆ ಬಾಲಕ ಬಲಿಯಾಗಿರುವ ಘಟನೆ ಮೈಸೂರು ತಾಲೂಕಿನ ಇಲವಾಲದಲ್ಲಿ  ನಡೆದಿದೆ.

ನಾಗೇಶ್(16) ಮೃತ ವಿದ್ಯಾರ್ಥಿ. ಮೂಲತಃ ಚಿಕ್ಕನಹಳ್ಳಿಯ ನಿವಾಸಿಯಾದ ನಾಗೇಶ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು,  ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಾಗೇಶ್ ಪಿಯುಸಿ ವ್ಯಾಸಂಗಕ್ಕಾಗಿ ಇಲವಾಲಕ್ಕೆ ಬಂದು ಹೋಗುತ್ತಿದ್ದ. ಈ ಮಧ್ಯೆ ಫೆ.24ರಂದು ಕಾಲೇಜಿಗೆ ತೆರಳಿದ್ದ ನಾಗೇಶ್ ಇಡೀ ರಾತ್ರಿ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮರು ದಿನ ಪೋಷಕರು ದೂರು ನೀಡಿದ್ದರು.

ಇಲವಾಲ ಠಾಣೆಯಲ್ಲಿ ನಾಗೇಶ್ ಕಾಣೆಯಾಗಿರುವ ಬಗ್ಗೆ ಎಫ್‌ಐಆರ್ ದಾಖಲಾಗಿತ್ತು. ಇದೀಗ ನಾಗೇಶ್ ಇಂದು ಇಲವಾಲ ಕೆರೆಯಲ್ಲಿ ಶವ ಪತ್ತೆಯಾಗಿದೆ. ಕಡಿಮೆ ದುಡ್ಡಿಗೆ ಐಶಾರಾಮಿ ಮೊಬೈಲ್ ಕೊಡುವುದಾಗಿ ನಾಗೇಶ್‌ ಗೆ ಕರೆ ಬಂದಿತ್ತು. ಫ್ರಾಡ್ ಕಾಲ್ ನಂಬಿ ವಿದ್ಯಾರ್ಥಿ ನಾಗೇಶ್ ಮನೆಯಲ್ಲಿ ಹಣ ಕೇಳಿದ್ದ. ಆದರೆ ಹಣ ನೀಡಲು ನಿರಾಕರಿಸಿದ್ದು, ಮೊಬೈಲ್ ಸಿಗಲಿಲ್ಲ, ಹಣವೂ ಬರಲಿಲ್ಲ ಎಂದು  ಬೇಸರಗೊಂಡಿದ್ದ ಎನ್ನಲಾಗಿದೆ.

ಇದೀಗ ಇಲವಾಲ ಕೆರೆಯಲ್ಲಿ ಶವ ಪತ್ತೆಯಾಗಿದ್ದು, ಸ್ನೇಹಿತ ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ  ಎಂದು ಪೋಷಕರು ಆರೋಪ ಮಾಡಿದ್ದಾರೆ. ಈ ಕುರಿತು ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mobile-death- boy-mysore