ದೇಸಾಯಿ ಆಯೋಗದಿಂದ ಕ್ಲೀನ್ ಚಿಟ್ : ಮುಡಾದಲ್ಲಿ ಹಗರಣವೇ ಆಗಿಲ್ಲ- MLC ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಆಗಸ್ಟ್,1,2025 (www.justkannada.justkannada.in): ಮುಡಾ ಹಗರಣ ಪ್ರಕರಣದಲ್ಲಿ ನಿವೃತ್ತ ನ್ಯಾ.ದೇಸಾಯಿ ಆಯೋಗ ಕ್ಲೀನ್ ಚೀಟ್ ನೀಡಿರುವುದನ್ನ ಎಂಎಲ್ ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, ಮುಡಾದಲ್ಲಿ ಹಗರಣವೇ ಆಗಿಲ್ಲ. ಯಾರೇ ತನಿಖೆ ಮಾಡಿದರೂ ಕ್ಲಿನ್ ಚಿಟ್ ಸಿಗತ್ತೆ. ಹಗರಣವೇ ಇರದ ಮೇಲೆ ದೇಸಾಯಿ ಆಯೋಗ ಕೂಡ ಕ್ಲಿನ್ ಚಿಟ್ ಕೊಟ್ಟಿದೆ. ಸುಪ್ರೀಂ ಕೋರ್ಟ್ ಕೂಡ ಇಡಿಗೆ ಛಾಟಿ ಬೀಸಿದೆ. ಹೈಕಮಾಂಡ್ ಗೆ ಈ ವಿಚಾರ ಸ್ಪಷ್ಟವಾಗಿ ಗೊತ್ತಿದೆ. ಯಾವುದೇ ಹಗರಣ ಆಗಿಲ್ಲ ಅಂತ ಎಲ್ಲರಿಗೂ ತಿಳಿದಿದೆ ಎಂದರು.

ಮುಡಾ ಪ್ರಕರಣದಲ್ಲಿ ಸಿಎಂ ಪತ್ನಿ ಪಾರ್ವತಿ A2 ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ರಾಜಕೀಯಕ್ಕೆ ಬಾರದ ನಮ್ಮ ತಾಯಿ ವಿರುದ್ಧವೂ ಕುತಂತ್ರ ನಡೀತು. ಆ ಸಮಯಕ್ಕೆ ಸ್ವಾಭಾವಿಕವಾಗಿ ಮನಸ್ಸಿಗೆ ನೋವಾಗಿತ್ತು. ನಮ್ಮ ತಾಯಿ ಅವರಿಗೆ ಈ ವಿಚಾರದಲ್ಲಿ ನೋವಾಗಿತ್ತು. ಆ ಕಾರಣಕ್ಕೆ ಸೈಟ್ ವಾಪಸ್ ಕೊಟ್ಟಿದ್ದರು. ಪ್ರಕರಣದ ಸಂಪೂರ್ಣ ತನಿಖೆ ಆಗಲಿ . ಪೂರ್ತಿಯಾಗಿ ತನಿಖೆ ಮುಗಿಯಲಿ. ನಾವು ಸೈಟ್ ವಾಪಸ್ ಕೊಟ್ಟಿದ್ದು ತನಿಖೆ ಪಾರದರ್ಶಕವಾಗಿ ಇರಲಿ ಎಂದು. ನಮಗೆ 14  ಸೈಟ್ ವಾಪಸ್ ಕೊಡದೆ ಹೋದರೆ ಬದಲಿ ಕಾನೂನು ಪ್ರಕಾರವೇ ಪರಿಹಾರ ಕೊಡಲಿ. ಸಿಎಂ ಸಿದ್ದರಾಮಯ್ಯ ಅವರನ್ನು ಸಿಕ್ಕಿ ಹಾಕಿಸುವ ಕುತಂತ್ರ ಮಾಡಿದರು.  ಪದೇ ಪದೇ ನಮ್ಮ ಕುಟುಂಬದವರನ್ನ ಟಾರ್ಗೆಟ್ ಮಾಡಿದರು. ಈಗ ಎಲ್ಲಾ ಸತ್ಯ ಹೊರ ಬರುತ್ತಿದೆ. ನಾವು ಆರೋಪ ಮುಕ್ತವಾಗಿದ್ದೀವಿ ಅಂತ ರಾಜ್ಯದ ಜನರಿಗೆ ತಿಳಿದಿದೆ ಎಂದರು.

ವರುಣಾ ಕ್ಷೇತ್ರದ ಜನರ ಋಣ ತೀರಿಸಲು ಸಾಧ್ಯವೇ ಇಲ್ಲ

ವರುಣಾ ಕ್ಷೇತ್ರದ ಜನರ ಋಣ ತೀರಿಸಲು ಸಾಧ್ಯವೇ ಇಲ್ಲ. ವರುಣ ಕ್ಷೇತ್ರದ ಜನರು ನಮಗೆ ರಾಜಕೀಯವಾಗಿ ಶಕ್ತಿ ಕೊಟ್ಟಿದೆ. ನಮ್ಮ ತಂದೆ ಅವರನ್ನು ಸಿಎಂ ಮಾಡಿದರು. ನನ್ನನ್ನು ಶಾಸಕನಾಗಿ ಮಾಡಿದರು. ಈ ಹಿನ್ನಲೆ ನಿನ್ನೆ ವರುಣ ಕ್ಷೇತ್ರದ ಜನರ ಋಣ ತೀರಿಸಲು ಆಗಲ್ಲ ಎಂದು ಭಾವುಕನಾದೆ ಎಂದರು.

ಮೈಸೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಡ್ರಗ್ಸ್ ಹಾವಳಿ ಜಾಸ್ತಿಯಾಗಿದೆ ಅಂತ ಜನಗಳು ಹೇಳುತ್ತಿದ್ದಾರೆ. ಈ ಹಿನ್ನಲೆ ಸಿಎಂ ಅವರು ಪೊಲೀಸರಿಗೆ ಸ್ಟ್ರಿಕ್ಟ್ ಆಗಿ ಸೂಚನೆ ಕೊಟ್ಟಿದ್ದರು. ಪೊಲೀಸರು ಕೂಡ ಕೆಲಸ ಮಾಡುತ್ತಿದ್ದಾರೆ. ಆದರೆ ಮಹಾರಾಷ್ಟ್ರ ಪೊಲೀಸರು ನಮ್ಮವರಿಗಿಂತ ಚುರುಕಾಗಿ ಡ್ರಗ್ಸ್ ಜಾಲ ಭೇದಿಸಿದರು ಎಂದರು.

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ತಂದೆಯವರು ಇರುವ ತನಕ ಸಚಿವ ಸ್ಥಾನ ಬೇಡ ಎಂದಿದ್ದಾರೆ. ಮೈಸೂರಿನ ಎಲ್ಲ ಶಾಸಕರು ನನಗೆ ಆತ್ಮೀಯರು. ಹಾಗಾಗಿ ನನಗೆ ಸಚಿವ ಸ್ಥಾನ ನೀಡಿ ಎಂದು ಕೇಳಿದ್ದಾರೆ. ಆದ್ರೆ ತಂದೆ ಅವರು ಈಗಾಗಲೇ ಹೇಳಿದ್ದಾರೆ. ಅವರು ಸಿಎಂ ಆಗಿರುವವರೆಗೂ ನಾನು ಸಚಿವ ಸ್ಥಾನ ಕೇಳಲ್ಲ. ಎಲ್ಲವೂ ತಂದೆ ಹೇಳಿದಂತೆ ಆಗುತ್ತದೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಪರಮೇಶ್ವರ್ ಡಿಕೆ ಶಿವಕುಮಾರ್ ಪ್ರತ್ಯೇಕ ಸಭೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ತಂದೆಯವರು ಐದು ವರ್ಷ ಸಿಎಂ ಆಗಿ ಇರುತ್ತಾರೆ. ಇದರಲ್ಲಿ ಯಾವುದೇ ಅನುಮಾನಗಳು ಬೇಡ. ಯಾರೇ ಸಭೆ ಮಾಡಿದರೂ ಪಕ್ಷಕ್ಕಾಗಿ ಅಷ್ಟೇ. ನಮ್ಮ ತಂದೆಯವರು 45 ವರ್ಷಗಳ ಸುದೀರ್ಘ ರಾಜಕೀಯ ಮಾಡಿದ್ದಾರೆ. ವಿಪಕ್ಷಗಳು ಏನೇ ಕುತಂತ್ರ ಮಾಡಿದರೂ ಏನು ಆಗಲ್ಲ. ಎಲ್ಲಿಯವರೆಗೂ ಜನರ ಆಶೀರ್ವಾದ ಇರತ್ತೋ ಅಲ್ಲಿಯವರೆಗೂ ಸತ್ಯಕ್ಕೆ ಜಯ ಸಿಗತ್ತದೆ ಎಂದರು.

ಸೆಪ್ಟೆಂಬರ್ ನಲ್ಲಿ ಕ್ರಾಂತಿ, ಅಕ್ಟೋಬರ್ ಕ್ರಾಂತಿ ನಮಗೆ ಗೊತ್ತಿಲ್ಲ. ಯಾರ್ಯಾರು ಕ್ರಾಂತಿ ಅಂತಾರೆ ಅವರನ್ನೇ ಕೇಳಿ. ನಮಗೆ ತಿಳಿದ ಹಾಗೆ ಯಾವುದೇ ಕ್ರಾಂತಿ‌ ಆಗಲ್ಲ. ಯಾವುದೂ ಕೂಡ ರಾಜ್ಯದಲ್ಲಿ ಬದಲಾವಣೆ ಆಗಲ್ಲ ಎಂದರು.vtu

Key words: MUDA Scam, clean chit, Desai Commission, MLC, Yathindra Siddaramaiah