ಮೈಸೂರು, ಅಕ್ಟೋಬರ್,4,2025 (www.justkannada.in): ಭಾರತೀಯ ಪತ್ರಿಕೋದ್ಯಮದ ಮೇರು ವ್ಯಕ್ತಿತ್ವದ ಹಿರಿಯ ಪತ್ರಕರ್ತ, ಅಂಕಣಕಾರ, ಲೇಖಕ ಟಿ.ಜೆ.ಎಸ್.ಜಾರ್ಜ್ ಅವರ ನಿಧನಕ್ಕೆ ವಿಧಾನಪರಿಷತ್ ಸದಸ್ಯ, ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಾರ್ಜ್ ಅವರು ಸದಾ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಧ್ವನಿ ಎತ್ತಿದವರು. ಸರಕಾರ ನಡೆಸುತ್ತಿರುವವರು ಯಾರೇ ಇರಲಿ, ಯಾವುದೇ ಪಕ್ಷವಿರಲಿ ಲೋಪ ಎಸಗಿದಾಗ, ಜನತಂತ್ರದ ಆಶಯಗಳಿಗೆ ವಿರುದ್ಧವಾದ ತೀರ್ಮಾನಗಳನ್ನು ಕೈಗೊಂಡಾಗ ಜಾರ್ಜ್ ತಮ್ಮ ಬರವಣಿಗೆ ಮೂಲಕ ಆಳುವ ವರ್ಗವನ್ನು ಎಚ್ಚರಿಸುತ್ತಿದ್ದರು. ಜನಪರ ಧ್ವನಿಯಾಗುತ್ತಿದ್ದರು. ಸಾಮಾಜಿಕ ತಾರತಮ್ಯದ ಸಮಾಜದಲ್ಲಿ ತಳಸಮುದಾಯದವರ ಪರ ಅವರು ಮಿಡಿಯುತ್ತಿದ್ದರು ಎಂದು ಶಿವಕುಮಾರ್ ತಿಳಿಸಿದ್ದಾರೆ.
ಜಾರ್ಜ್ ಅವರು ಭಾರತೀಯ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಬಳಗದಲ್ಲಿ ಅವರ ಮಾರ್ಗದರ್ಶನ ಪಡೆದ ಅನೇಕ ಪತ್ರಕರ್ತರಲ್ಲಿ ನಾನೂ ಒಬ್ಬ. ಪತ್ರಿಕೋದ್ಯಮದಲ್ಲಿ ನನಗೆ ಗುರುಗಳಾಗಿದ್ದರು. ಪತ್ರಿಕೋದ್ಯಮದಲ್ಲಿ ನಾನು ನೆಲೆ ನಿಲ್ಲಲು ಅವರ ಮಾರ್ಗದರ್ಶನದ ಕೊಡುಗೆ ಅಪಾರವಾಗಿದೆ. ಅವರ ಒಡನಾಟ ನಮಗೆ ಲಭ್ಯವಾಗಿದ್ದು ನಮ್ಮ ಪುಣ್ಯ. ಅವರ ನಿಧನ ವೈಯಕ್ತಿಕವಾಗಿಯೂ ನನಗೆ ನಷ್ಟವಾಗಿದೆ ಎಂದು ಶಿವಕುಮಾರ್ ಕಂಬನಿ ಮಿಡಿದಿದ್ದಾರೆ.
ಜಾರ್ಜ್ ಅವರು ಸರಳ, ಸಜ್ಜನ ವ್ಯಕ್ತಿತ್ವದವರಾಗಿದ್ದರು. ಕಿರಿಯ ಪತ್ರಕರ್ತರನ್ನು ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಜಾರ್ಜ್ ಅವರು ತಮ್ಮ ಬರವಣಿಗೆ, ಕೃತಿಗಳ ಮೂಲಕ ಸದಾ ಜೀವಂತವಾಗಿರುತ್ತಾರೆ ಎಂದು ಶಿವಕುಮಾರ್ ಹೇಳಿದ್ದಾರೆ.
Key words: MLC, K. Shivakumar, condoles senior journalist, T.J.S George, death