Friday, October 16, 2026

Dasara Wishes

Happy Dasara
Home Front Page ಮಹಿಳಾ ಮೀಸಲಾತಿ:  SC, ST, OBC ಮಹಿಳೆಯರಿಗೆ ಒಳಮೀಸಲು ಕಲ್ಪಿಸಬೇಕು: MLC ಕೆ .ಶಿವಕುಮಾರ್ ಒತ್ತಾಯ

ಮಹಿಳಾ ಮೀಸಲಾತಿ:  SC, ST, OBC ಮಹಿಳೆಯರಿಗೆ ಒಳಮೀಸಲು ಕಲ್ಪಿಸಬೇಕು: MLC ಕೆ .ಶಿವಕುಮಾರ್ ಒತ್ತಾಯ

ಮೈಸೂರು, ಏಪ್ರಿಲ್,14,2026 (www.justkannada.in):  ಕೇಂದ್ರ ಸರ್ಕಾರವು ನಾರಿಶಕ್ತಿ ವಂದನ್ ಅಧಿನಿಯಮದ ಮೂಲಕ ರಾಜಕೀಯದಲ್ಲಿ ಜಾರಿ ಮಾಡಲು ಹೊರಟಿರುವ ಮಹಿಳಾ ಮೀಸಲಾತಿ ಸ್ವಾಗತಾರ್ಹ. ಇದರ ಜೊತೆಗೆ ಎಸ್‌ ಸಿ, ಎಸ್‌ಟಿ ಮತ್ತು ಒಬಿಸಿ ಮಹಿಳೆಯರಿಗೆ ಒಳಮೀಸಲಾತಿಯನ್ನು ಕಲ್ಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅವರು ಒತ್ತಾಯಿಸಿದರು.

ಮೈಸೂರು ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವದ ಅಂಗವಾಗಿ ಮಂಗಳವಾರ ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಎಂಎಲ್ ಸಿ ಕೆ.ಶಿವಕುಮಾರ್ ಅವರು ಮಾತನಾಡಿದರು.

ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ ಎಂದು ಸ್ಪಷ್ಪಪಡಿಸಿದ ಕೆ.ಶಿವಕುಮಾರ್ ಅವರು, ಆದರೆ ಈ‌ ಮೀಲಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗಾಗಿ ಒಳಮೀಸಲಾತಿ ಜಾರಿ ಮಾಡದಿದ್ದರೆ ಅದು ಉಳ್ಳವರ ಪಾಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಆದ್ದರಿಂದ ಒಳಮೀಸಲಾತಿ ಕಲ್ಪಿಸಿಕೊಟ್ಟು ಎಲ್ಲಾ ವರ್ಗದ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ದೊರಕಿಸಿಕೊಡುವ ಮುಖೇನ ಬಾಬಾ ಸಾಹೇಬರ ಕನಸಿನ ಭಾರತ ನಿರ್ಮಾಣದ ಕಡೆಗೆ ಹೆಜ್ಜೆಯಿಡಬೇಕು ಎಂದು ತಿಳಿಸಿದರು.

ಮಹಿಳೆಯರ ಸಮಾನತೆಗಾಗಿ ಹಾಗೂ ಅವರ ಘನತೆಯ ಬದುಕಿಗಾಗಿ ಬಾಬಾ ಸಾಹೇಬರು ಶ್ರಮಿಸಿದ್ದಾರೆ. ಉದ್ಯೋಗದಲ್ಲಿ ಹೆರಿಗೆ ರಜೆ ಸೇರಿದಂತೆ ಅನೇಕ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಾರೆ‌. ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಮತ್ತು ಸ್ವಾತಂತ್ರ್ಯ ದೊರಕಿಸಿಕೊಡುವ ಹಿಂದೂ ಕೋಡ್ ಬಿಲ್ ಬಗ್ಗೆ ಮೂರು ದಿನಗಳ ಕಾಲ ಪಾರ್ಲಿಮೆಂಟಿನಲ್ಲಿ ಚರ್ಚೆಯಾಗಿ ಅಂಬೇಡ್ಕರ್ ಅವರು ಪ್ರತಿಪಾದಿಸಿದ ಹಕ್ಕುಗಳನ್ನು ಮಹಿಳೆಯರಿಗೆ ಕೊಡಲೊಪ್ಪದ ಪಟ್ಟಭದ್ರರ ನಡೆಯನ್ನು ವಿರೋಧಿಸಿ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರನಡೆದ ಧೀಮಂತ ನಾಯಕ ಎಂದು ಸ್ಮರಿಸಿದರು.

ಅಂಬೇಡ್ಕರ್ ಅವರು 33 ಪುಸ್ತಕ ಬರೆದಿದ್ದಾರೆ. 17 ಸಂಪುಟಗಳು, ಭಾಷಣ ಮತ್ತು ಬರಹ ಮತ್ತು 57 ಸಂಶೋಧನಾ, ಸಣ್ಣ ಪುಸ್ತಕ ರಚಿಸಿದ್ದಾರೆ. ಅವರ ಜನ್ಮದಿನದಂದು ಈಡೀ ಜಗತ್ತು “ವಿಶ್ವ ಜ್ಞಾನ ದಿನವಾಗಿ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿನಿಲಯಗಳಲ್ಲಿ ಪ್ರತಿನಿತ್ಯವು ಅಂಬೇಡ್ಕರ್ ಅವರು ಬರೆದಿರುವ ಪುಸ್ತಕದ ಒಂದು ಪುಟವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಬೋಧಿಸಬೇಕು. ನಾವೆಲ್ಲರೂ ಆರ್ಥಿಕ, ಸಾಮಾಜಿಕ ಮತ್ತು ಮಾನಸಿಕ ಗುಲಾಮಗಿರಿಯಿಂದ ವಿಮೋಚನೆ ಹೊಂದಲು ಅಂಬೇಡ್ಕರ್‌ ರ ಬರಹದಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು.

ರಾಜ್ಯ ಸರ್ಕಾರವು ಅಂಬೇಡ್ಕರ್ ಅವರ ಎಲ್ಲಾ ಪುಸ್ತಕಗಳನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಬಾಬಾ ಸಾಹೇಬರ ಪುಸ್ತಕವನ್ನು ಉರ್ದು ಭಾಷೆಗೂ ಭಾಷಾಂತರಿಸುವ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಜಗತ್ತಿನ ಶ್ರೇಷ್ಠ ವ್ಯಕ್ತಿಗಳಲ್ಲಿ ಅಂಬೇಡ್ಕರ್ ಅವರು ಕೂಡ ಒಬ್ಬರಾಗಿದ್ದಾರೆ. ಅವರ ಜಯಂತಿ ದಿ‌ನವನ್ನು ಇಡೀ ವಿಶ್ವವೇ ಜ್ಞಾನದ ದಿನವಾಗಿ ಆಚರಿಸಿ, ಬಾಬಾ ಸಾಹೇಬರನ್ನು ಒಂದು ವಿಶ್ವವಿದ್ಯಾಲಯವಾಗಿ ಅಧ್ಯಯನ ಮಾಡುತ್ತಿದೆ ಎಂದರು.

Key words: Women Reservation, Dr. B.R. Ambedkar Jayanti, MLC, K. Shivakumar