ಎಲ್ಲಾ ಪೌರ ಕಾರ್ಮಿಕರನ್ನೂ ಖಾಯಂಗೊಳಿಸಿ: MLC ಕೆ.ಶಿವಕುಮಾರ್ ಒತ್ತಾಯ

ಬೆಂಗಳೂರು,ಜನವರಿ,27,2026 (www.justkannada.in): ರಾಜ್ಯದಲ್ಲಿನ ನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಹಾಗೂ ನೇರ ಪಾವತಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅವರು ಸರ್ಕಾರವನ್ನು ಒತ್ತಾಯಿಸಿದರು.

ವರ್ಷದ ಮೊದಲ ವಿಧಾನ ಮಂಡಲ ಜಂಟಿ ಅಧಿವೇಶನಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗೆ ಮಾಹಿತಿ ಪಡೆದು ಮಾತನಾಡಿದ ಅವರು, ಅನೇಕ ಪೌರಕಾರ್ಮಿಕರು ಇಂದು ಸಂಕಷ್ಟಲ್ಲಿದ್ದಾರೆ.  ನೇಮಕಾತಿ ವಿಚಾರ ಬಂದಾಗ ಪ್ರತಿ ಬಾರಿಯೂ ಆರ್ಥಿಕ ಇಲಾಖೆಯಲ್ಲಿ ಕಡತ ಇದೆ ಎಂಬ ಉತ್ತರ ಕೇಳಿಬರುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ 664 ಮಂದಿ ಪೌರಕಾರ್ಮಿಕರು ಒಳಚರಂಡಿಯ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.  ವಾಸ್ತವದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ.  ನಾಗರಿಕತೆ ಇಷ್ಟು ಬೆಳೆದಿದ್ದರೂ ಕಳೆದ ಏಳು ವರ್ಷಗಳಲ್ಲಿ 85 ಪೌರಕಾರ್ಮಿಕರು ಒಳಚರಂಡಿಯನ್ನು ಸ್ವಚ್ಛಗೊಳಿಸುವಾಗ ಸಾವನ್ನಪ್ಪಿರುವುದು ದುರಂತ ಎಂದರು.

ನಾವು ಇಂದು ʻಎಐʼ ತಂತ್ರಜ್ಞಾನದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ.  ಅದರ ಮೂಲಕ ಎಲ್ಲಿ ಬ್ಲಾಕ್ ಆಗಿದೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಿಲ್ಲವೆ ಎಂದು ಪ್ರಶ್ನಿಸಿದ ಅವರು, ಒಬ್ಬ ಮನುಷ್ಯ ಒಳಚರಂಡಿಗೆ ಇಳಿದು ಸ್ವಚ್ಛಗೊಳಿಸುವುದು ಅತ್ಯಂತ ಅಮಾನವೀಯ. ದಯವಿಟ್ಟು ಸರ್ಕಾರವು ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಇದನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಡಳಿತ ಸಚಿವ ರಹೀಂ ಖಾನ್ ಅವರು, ಪೌರಕಾರ್ಮಿಕರ ನೇಮಕಾತಿ ವಿಚಾರ ಮುನ್ನೆಲೆಗೆ ಬಂದಾಗ ಈ ಪ್ರಕರಣವು ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಇರುವ ಪ್ರಶ್ನೆ ಎದುರಾಗುತ್ತಿದೆ. ಆದರೂ ಈ ಬಗ್ಗೆ ಸರ್ಕಾರವು ಕ್ರಮವಹಿಸಲಿದೆ ಎಂದು ಭರವಸೆ ನೀಡಿದರು.

ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗುವುದು ಬೇಡ

ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಗರಪಾಲಿಕೆಗಳಿಂದ ಸಹಾಯಧನ ನೀಡಲಾಗುತ್ತಿತ್ತು.  ಕಳೆದ ನಾಲ್ಕು ವರ್ಷಗಳಿಂದ ಈ ಸೌಲಭ್ಯ ನಿಂತಿದೆ. ಇದರಿಂದ ಅವರ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದ್ದು, ವಿದ್ಯಾಭ್ಯಾಸದ ಶುಲ್ಕ ಕಟ್ಟಲಾಗದೆ ಮಕ್ಕಳು ಅವರ ತಂದೆ-ತಾಯಿಯೊಡನೆ ಸ್ವಚ್ಛತಾ ಕೆಲಸಕ್ಕೆ ತೆರಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಎರಡನೇ ತಲೆಮಾರಿನ ಪೌರಕಾರ್ಮಿಕರ ಮಕ್ಕಳಿಗೆ ಪೌರಕಾರ್ಮಿಕ ಹುದ್ದೆಯನ್ನು ನೀಡಬಾರದು. ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಿಯೇ ಮುಂದುವರಿಯಬಾರದು. ಸರ್ಕಾರವು ಅವರು ಉತ್ತಮ ಶಿಕ್ಷಣ ಪಡೆಯುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪೌರಕಾರ್ಮಿಕರ ಮಕ್ಕಳು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜಿನಲ್ಲಿ ಕಲಿಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ಎಸ್‌ ಸಿಎಸ್‌ ಪಿ ಮತ್ತು ಟಿಎಸ್‌ಪಿ ಯೋಜನೆಯಲ್ಲಾದರೂ ದಯವಿಟ್ಟು ಸಹಾಯಧನ ನೀಡುವುದನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಈ ಕುರಿತು ಪೌರಾಡಳಿತ ಸಚಿವ ರಹೀಂ ಖಾನ್ ಅವರು ಮಾತನಾಡಿ, ಸಂಬಂಧಿಸಿದ ಅಧಿಕಾರಿಗಳೊಡನೆ ಚರ್ಚಿಸಿ ಈ ಬಗ್ಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

Key words: civil servants, permanent, MLC, K. Shivakumar, demands