Thursday, August 20, 2026

BDA Apartments

Home Front Page ಜಾತಿ ಪ್ರಮಾಣ ಪತ್ರ ಪಡೆಯುವ ನಿಯಮ ಸರಳೀಕರಿಸಿ: MLC ಕೆ.ಶಿವಕುಮಾರ್

ಜಾತಿ ಪ್ರಮಾಣ ಪತ್ರ ಪಡೆಯುವ ನಿಯಮ ಸರಳೀಕರಿಸಿ: MLC ಕೆ.ಶಿವಕುಮಾರ್

ಬೆಂಗಳೂರು,ಆಗಸ್ಟ್,20,2026 (www.justkannada.in):  ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣದ ಆಧಾರದಲ್ಲಿ ಉಪಜಾತಿ ಅನ್ವಯ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಜಾತಿ ಪ್ರಮಾಣ ಪತ್ರ ಪಡೆಯಲು ಕಠಿಣ ನಿಯಮವಿದ್ದು, ಇದನ್ನು ಸರಳೀಕರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಶಿವಕುಮಾರ್ ಅವರು ಸರ್ಕಾರಕ್ಕೆ ಮನವಿ ಮಾಡಿದರು.

ಗುರುವಾರ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಗಮನ ಸೆಳೆವ ಸೂಚನೆಯ ಚರ್ಚೆಯಲ್ಲಿ ಮಾತನಾಡಿದ ಅವರು, ಉಪಜಾತಿಗಳನ್ನು ಗುರುತಿಸುವ ನೆಪದಲ್ಲಿ ಹಳೆಯ ದಾಖಲೆಗಳು, ವಂಶಾವಳಿ ಸೇರಿದಂತೆ ಅನಗತ್ಯ ಪುರಾವೆಗಳನ್ನು ಕಂದಾಯ ಅಧಿಕಾರಿಗಳು ಕೇಳುತ್ತಿದ್ದು, ಇದರಿಂದ ಜನರು ಪರದಾಡುತ್ತಿದ್ದಾರೆ ಎಂದು ತಿಳಿಸಿ ಸದನದ ಗಮನ ಸೆಳೆದರು.

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವೇಶಾತಿ, ವಿದ್ಯಾರ್ಥಿವೇತನ ಹಾಗೂ ಉದ್ಯೋಗಾಕಾಂಕ್ಷಿಗಳು ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಸಕಾಲಕ್ಕೆ ಜಾತಿ ಪ್ರಮಾಣ ಪತ್ರ ದೊರಕದೆ ಆತಂಕಕ್ಕೀಡಾಗಿದ್ದು, ಮೀಸಲಾತಿ ಸೌಲಭ್ಯದಿಂದ ವಂಚಿತರಾಗುವ ಭೀತಿ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಜಾತಿ ಪ್ರಮಾಣ ಪತ್ರ ಪಡೆಯುವ ಸಲುವಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ನಾಡಕಚೇರಿ, ತಾಲ್ಲೂಕು ಕಚೇರಿಗಳಲ್ಲಿ ರಾತ್ರಿಯಿಡೀ ಸಾಲುಗಟ್ಟಿ ಮಲಗುತ್ತಿದ್ದಾರೆ. ಅಲ್ಲದೆ, ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆಯಲ್ಲಿ ಅನೇಕ ಬಾರಿ “ಒಟಿಪಿ” ಬರಲಿದ್ದು, ಮೊಬೈಲ್ ಬಳಸಲು ಬಾರದ ಗ್ರಾಮೀಣ ಜನರಿಗೆ ಇದು ಪ್ರಯಾಸವಾಗಿ ಪರಿಣಮಿಸಿದೆ ಎಂದರು.

ನಗರ ಪ್ರದೇಶಗಳಲ್ಲಿ ಜಾತಿ ಪ್ರಮಾಣ ಪತ್ರ ನೀಡಲು ಕಂದಾಯ ಅಧಿಕಾರಿಗಳು ಅಕ್ಕಪಕ್ಕದ ಮನೆಯವರನ್ನು ಸಾಕ್ಷಿ ಕೇಳುತ್ತಿದ್ದಾರೆ‌. ಜಾತಿ ಮರೆಮಾಚಿ ಬಾಡಿಗೆ ಮನೆ ಪಡೆದವರು ಈ ಕ್ರಮದಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ‌. ಒಳಮೀಸಲಾತಿ ಸಮೀಕ್ಷೆಯಲ್ಲೂ ಹೀಗೆ ಆಗಿದೆ ಎಂದು ಹೇಳಿದರು.

ಜಾತಿ ಪ್ರಮಾಣ ಪತ್ರ ನೀಡುವ ನೆಪದಲ್ಲಿ ಪರಿಶಿಷ್ಟ ಸಮುದಾಯದ ಜನರನ್ನು ಶೋಷಣೆ ಮಾಡಬಾರದು. ಸಕಾಲಕ್ಕೆ ಜಾತಿ ಪ್ರಮಾಣ ಪತ್ರ ಸಿಗದಿರುವುದರಿಂದ ನೇಮಕಾತಿಗಳ ಅಂತಿಮ ದಿನಾಂಕವನ್ನು ಒಂದು ತಿಂಗಳಕಾಲ ಮುಂದೂಡಿ ಎಂದು ಮನವಿ ಮಾಡಿದರು.

ನಕಲಿ ಜಾತಿ ಪ್ರಮಾಣ ಪತ್ರ ಬಳಸಿ ರಾಜ್ಯದಲ್ಲಿ 591 ಮಂದಿ ಸರ್ಕಾರಿ ನೌಕರಿ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಈ ಅಕ್ರಮವನ್ನು ತಡೆಗಟ್ಟಲು ಮಹಾರಾಷ್ಟ್ರದಲ್ಲಿ ಜಾರಿ ಮಾಡಿರುವಂತೆ “ಬ್ಲಾಕ್ ಚೈನ್” ತಂತ್ರಜ್ಞಾನ ಮಾದರಿಯನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕು. ಈ ಕ್ರಮದಿಂದ ವ್ಯಕ್ತಿಯ ನೈಜ ಜಾತಿಯ ಬಗ್ಗೆ ನಿಖರ ಮಾಹಿತಿ ಜೊತೆಗೆ ಜನನ ಮತ್ತು ಮರಣ ಪ್ರಮಾಣ ಪತ್ರವು ಪಾರದರ್ಶಕವಾಗಿ ಲಭ್ಯವಾಗಲಿದೆ ಎಂದು ತಿಳಿಸಿದರು.

ಈ ಕುರಿತು ಕಂದಾಯ ಸಚಿವರ ಪರವಾಗಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು, ಜಾತಿ ಪ್ರಮಾಣ ಪತ್ರ ಪಡೆಯುವ ನಿಯಮವನ್ನು ಸರಳೀಕರಿಸಲು ಕ್ರಮವಹಿಸಲಾಗುವುದು. “ಬ್ಲಾಕ್ ಚೈನ್” ತಂತ್ರಜ್ಞಾನದ ಸಲಹೆ ಸೂಕ್ತವಾಗಿದ್ದು, ಉಪಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ನೇಮಕಾತಿ ಅಂತಿಮ ದಿನಾಂಕ ಮುಂದೂಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಭವರಸೆ ನೀಡಿದರು.

Key words: Simplify rules, obtaining caste, certificate, MLC, K. Shivakumar