ಅಧಿಕಾರ ಹಂಚಿಕೆ, ಹೈಕಮಾಂಡ್ ಸ್ಪಷ್ಟನೆ ನೀಡಲಿ: ತನ್ವೀರ್ ಸೇಠ್

ಮೈಸೂರು,ನವೆಂಬರ್,21,2025 (www.justkannada.in): ಅಧಿಕಾರ ಹಂಚಿಕೆ ಕುರಿತು ಏನು ಮಾತುಕತೆ ಆಗಿದೆ ನನಗೇನೂ ಗೊತ್ತಿಲ್ಲ. ಈ ಬಗ್ಗೆ ಹೈ ಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಶಾಸಕ ತನ್ವೀರ್ ಸೇಠ್ ಆಗ್ರಹಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ರಾಜ್ಯದ ಜನ ಬಿಜೆಪಿ ವಿರುದ್ಧ ಸ್ಪಷ್ಟ ಅಧಿಕಾರ‌ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ನಿನ್ನೆಗೆ ಎರಡೂವರೆ ವರ್ಷ ಪೂರೈಸಿದೆ. ವರಿಷ್ಠರು ತೀರ್ಮಾನದಂತೆ ನಾವು ಪಾಲಿಸುತ್ತೇವೆ. ಸಿಎಂ, ಡಿಸಿಎಂ ಕೂಡ ಸಾರಿ ‌ಸಾರಿ‌ ಹೇಳಿದ್ದಾರೆ. ವರಿಷ್ಠರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ನಮಗೆ ಮಾಹಿತಿ ಇಲ್ಲ. ಅಧಿಕಾರ‌ ಹಂಚಿಕೆ‌ ಸೂತ್ರ ನಮಗೆ ಗೊತ್ತಿಲ್ಲ. ನಮ್ಮದು ಸುಭದ್ರ ಸರ್ಕಾರವಾಗಿದ್ದು ನಾನು ಯಾವ ಬಣದಲ್ಲೂ ಇಲ್ಲ. ನಾನು‌ ಕಾಂಗ್ರೆಸ್ ಬಣ. ಯಾರು ಯಾರ ಪರ‌ ಹೋಗುತ್ತಿಲ್ಲ. ನಮ್ಮ ಆದ‌ ನೂರೆಂಟಿದೆ. ನಾವು ನಾಯಕರ ಪೂಜೆ, ಆರಾಧನೆ ಮಾಡಲ್ಲ. ಕೇವಲ ರಾಜಕಾರಣ ಮಾಡಲು ಪಕ್ಷದಲ್ಲಿಲ್ಲ ಎಂದರು.

ಡಿಕೆ ಸುರೇಶ್ , ಕೆ.ಎನ್ ರಾಜಣ್ಣ ಅವರ ಹೇಳಿಕೆಗೆ ವೈಯ್ಯಕ್ತಿಕ ಸ್ವಾತಂತ್ರ್ಯವಿದೆ.  ನಾನು ಆರಾಧಿಸುವ ದೈವವೇ ಸರಿ ಅನ್ನೋದು ಸರಿ ಅಲ್ಲ. ಡಿಕೆ ಶಿವಕುಮಾರ್ ಋಣ ನನ್ನ ಮೇಲೆ ಇದ್ದೇ ಇದೆ. ಈ ಹಿಂದೆ ನನ್ನ ತಂದೆ ತೀರಿ  ಹೋದ ಸಮಯದಲ್ಲಿ ಉಪ ಚುನಾವಣೆ ಬಂತು. ಲೋಕಸಭಾ ಸೋತಿದ್ದರೂ ಡಿಕೆ ಶಿವಕುಮಾರ್ ನನ್ನ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸಿದರು. ನಾನು ಅದನ್ನು ಮರೆಯಲ್ಲ. ನಾನು ಪಕ್ಷೇತರವಾಗಿ ನಗರ ಪಾಲಿಕೆಗೆ ಆಯ್ಕೆಯಾಗಿದ್ದೆ. ಆ ಸಮಯದಲ್ಲಿ ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದು. ನನ್ನ ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರು. ಆದರೆ ನಾನು ಮೇಯರ್ ಆಗಲಿಲ್ಲ ಅದು ಬೇರೆ ವಿಚಾರ. ಸಿದ್ದರಾಮಯ್ಯ ಋಣ ಕೂಡ ನನ್ನ ಮೇಲಿದೆ. ನಾನು ಯಾರ ಬಣ ನಾಯಕರ ಪರ ಇಲ್ಲ. ನನ್ನದು ಕಾಂಗ್ರೆಸ್ ಬಣ ಕಾಂಗ್ರೆಸ್ ಸಿದ್ಧಾಂತ. ಪಕ್ಷದ ಹೈ ಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ನಾಯಕತ್ವ ಬದಲಾವಣೆ ಏನೇ ಆದರೂ ನಾವು ಹೈಕಮಾಂಡ್ ನಿಲುವಿಗೆ ಬದ್ಧ. ಅಧಿಕಾರ ಹಂಚಿಕೆ ಏನು ಮಾತುಕತೆ ಆಗಿದೆ ಆ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಬಗ್ಗೆ ಹೈ ಕಮಾಂಡ್ ಸ್ಪಷ್ಟನೆ ಕೊಡಬೇಕು. ಬದಲಾವಣೆ ಬಗ್ಗೆ ಏನು ಮಾತನಾಡಬೇಡಿ ಅಂತ ಹೈ ಕಮಾಂಡ್ ಹೇಳಿತ್ತು ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ನನಗೂ ಸಚಿವ ಸ್ಥಾನ ಸಿಗುವ ಭರವಸೆ ಇದೆ.

ಸಚಿವ ಸಂಪುಟ ಪುನಾರಚನೆ ಆದರೆ ನನಗೂ ಸಚಿವ ಸ್ಥಾನ ಸಿಗತ್ತೆ.ನನಗೆ ಸಂಪೂರ್ಣ ಭರವಸೆ ಇದೆ. ನಾನು ಸನ್ಯಾಸಿ ಅಲ್ಲ . ಹೈ ಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ನನ್ನ ಬೆಂಬಲ ಇದೆ. ಹೈಕಮಾಂಡ್ ಯಾರನ್ನೇ  ಸಿಎಂ ಮಾಡಿದರೂ ನಾನು ಬೆಂಬಲಿಸುತ್ತೇನೆ. ಅಧಿಕಾರ ಕೊಟ್ಟವರ ಪರ ನಾನು ನಿಲ್ಲಲ್ಲ. ಪಕ್ಷದ ಪರ ನಾನು ನಿಲ್ಲುತ್ತೇನೆ ಎಂದು ತನ್ವೀರ್ ಸೇಠ್ ತಿಳಿಸಿದರು.

ಮಲ್ಲಿಕಾರ್ಜುನ್ ಖರ್ಗೆ ಭೇಟಿ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ನಾನು ನನ್ನ ನಾಯಕರನ್ನು ಭೇಟಿಯಾಗುವ ಸಂದರ್ಭ ಬಂದರೆ ಭೇಟಿ ಆಗುತ್ತೇನೆ. ನಾನು ಧರ್ಮ ಭಿಕ್ಷೆ ಕೇಳಲ್ಲ. ಪಕ್ಷ ಯುದ್ದಕ್ಕೆ ನಿಲ್ಲು ಅಂದರೆ ನಿಲ್ಲುತ್ತೇನೆ. ಕುರ್ಚಿ ಕೊಟ್ಟು ಅಧಿಕಾರ ಮಾಡು ಅಂದರೂ ಮಾಡುತ್ತೇನೆ ಎಂಧರು.

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್, ಒಕ್ಕಲಿಗರು ದೆಹಲಿ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್, ಇಕ್ಬಾಲ್ ಹುಸೇನ್ ಯಾವ ಜಾತಿ ? ನಾಯಕರ ಮೇಲೆ ನಂಬಿಕೆಯಿಂದ ಮಾತನಾಡುತ್ತಾರೆ. ಯಾರಿಗೆ ರಾಜಕೀಯ ಬೆಂಬಲ ಇದೆ. ಅವರ ಪರ ಕೆಲವರು ನಿಲ್ಲುತ್ತಾರೆ ಎಂದು ತನ್ವೀರ್ ಸೇಠ್ ತಿಳಿಸಿದರು.

Key words: Power sharing, high command, clarify, MLA, Tanveer Sait